ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಂತರಂಗದ ಶುದ್ಧಿಗೆ ಗಮನ ನೀಡಿ

Mainashree
Updated On : 7 Feb 2014, 10:25 am

ಶಿಗ್ಗಾಂವಿ:  ಬಹಿರಂಗ ಶುದ್ಧಿಗೆ ಆಸಕ್ತಿ ತೋರುವ ಜನರು ಅಂತರಂಗದ ಶುದ್ಧಿಗೂ ಗಮನ ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗೆಡೆ ಹೇಳಿದರು.
ಅವರು ಗುರುವಾರ ಶಿಗ್ಗಾಂವಿ ಹತ್ತಿರದ ಗಂಗೀಭಾವಿಯ 10ನೇ ಮಿಸಲು ಪೊಲೀಸ್ ವಸತಿ ಸಮುಚ್ಚಯದಲ್ಲಿ ನಿರ್ಮಿಸಲಾದ ಶುದ್ಧ ಗಂಗಾ ಕುಡಿಯುವ ನೀರಿನ ಘಟಕ ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರ ಪ್ರಗತಿ ಚಿಂತನಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮನುಷ್ಯ ಮೊದಲು ತನ್ನ ಮನಸ್ಸಿನಲ್ಲಿ ತುಂಬಿಕೊಂಡಿರುವ ಕಲ್ಮಶ ಹೊರಹಾಕಬೇಕು. ದುಶ್ಚಟ, ದುರಭ್ಯಾಸದಿಂದ ಹೊರಬಂದು ಇನ್ನೊಬ್ಬರ ಒಳಿತನ್ನು ಬಯಸುವ ಮನೋಭಾವ ರೂಢಿಸಿಕೊಂಡಾಗ ಅಂತರಂಗ ಶುದ್ಧಿ ಸಾಧ್ಯ ಎಂದರು.
ಪಾಪನಾಶದ ನೆಪದಲ್ಲಿ ಪವಿತ್ರ ಗಂಗೆಯನ್ನು ಮಲಿನಗೊಳಿಸಲಾಗುತ್ತಿದೆ. ಅಶುದ್ಧ ನೀರನ್ನು ಸೇವಿಸುವ ಜನತೆ ನೂರಾರು ಕಾಯಿಲೆಗಳಿಗೆ ತುತ್ತಾಗಿ ಸಂಕಷ್ಟವನ್ನು ಎದುರಿಸುವಂತಾಗುತ್ತಿದೆ. ಉತ್ತಮ ಆರೋಗ್ಯಕ್ಕಾಗಿ ಶುದ್ಧ ಕುಡಿಯುವ ನೀರು ಅವಶ್ಯ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವ-ಸಹಾಯ ಸಂಘದ ಮೂಲಕ ಶಿಗ್ಗಾಂವಿ ಕ್ಷೇತ್ರದ ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳೆಯರು ವಾರದ ಉಳಿತಾಯದಿಂದ ರು. 6 ಕೋಟಿ ಉಳಿತಾಯ ಮಾಡಿ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಪುರುಷರು ಮದ್ಯವ್ಯಸನ ಸೇರಿದಂತೆ ಇನ್ನಿತರ ದುಶ್ಚಟಗಳನ್ನು ಬಿಟ್ಟು ಉಳಿತಾಯದ ಜೀವನಕ್ಕೆ ಅಂಟಿಕೊಂಡಾಗ ಆದರ್ಶಜೀವನ ಸಾಧ್ಯ ಎಂದರು. ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಸರ್ಕಾರದಿಂದಾಗದ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಾಡಲಾಗುತ್ತಿದೆ. ಮಹಿಳೆಯರಲ್ಲಿನ ಉಳಿತಾಯದ ಮನೋಭಾವನೆಗೆ ಪ್ರೋತ್ಸಾಹ ನೀಡುತ್ತಿರುವ ಡಾ. ವೀರೇಂದ್ರ ಹೆಗ್ಗಡೆಯವರ ಪ್ರಯತ್ನದಿಂದ ದೇಶದ ಆರ್ಥಿಕ ಸ್ಥಿತಿ ಇಂದಿಗೂ ಗಟ್ಟಿಯಾಗಿದೆ. ಸರ್ಕಾರದ ನೆರವು ಬಯಸದೆ ಸಮಾಜದಲ್ಲಿನ ಮೂಲ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅವುಗಳಿಗೆ ಪರಿಹಾರ ಕಲ್ಪಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಾರ್ಯಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು. 10ನೇ ಮೀಸಲು ಪೊಲೀಸ್ ಪಡೆಯ ಕಮಾಂಡೆಂಟ್ ಟಿ. ದೇವೇಂದ್ರಪ್ಪ, ಜಿಲ್ಲಾ ನಿರ್ದೇಶಕ ವಸಂತ ಸಾಲಿಯಾನ ಮಾತನಾಡಿದರು.
ವಿಧಾನ ಪರಿಷತ ಸದಸ್ಯ ಸೋಮಣ್ಣ ಬೇವಿನಮರದ, ತಾಪಂ ಅಧ್ಯಕ್ಷ ಸುಜಾತಾ ಕಲಕಟ್ಟಿ, ಸದಸ್ಯರಾದ ಶಾಂತಮ್ಮ ಬೊಮ್ಮನಹಳ್ಳಿ, ಉಮಾ ಡವಗಿ, ಪುರಸಭೆ ಸದಸ್ಯರಾದ ಪರಶುರಾಮ ಸೊನ್ನದ, ಪಕ್ಕಿರೇಶ ಶಿಗ್ಗಾಂವ, ಇದ್ದರು ಯೋಜನಾಧಿಕಾರಿ ಗಣಪತಿ ಮಾಳಂಜಿ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement