ಬದುಕು ಭವಿಷ್ಯ, ವರ್ತಮಾನದ ಕೊಂಡಿ
ಸಂತಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ, ಫೆ. 6 ಬದುಕು ಭವಿಷ್ಯ ಮತ್ತು ವರ್ತಮಾನ ಕಾಲದ ಕೊಂಡಿ. ಹಿಂದಿನ ಒಳ್ಳೆಯ ವಿಚಾರಗಳೊಂದಿಗೆ ಸಂಸ್ಕೃತಿ, ಆಚಾರ-ವಿಚಾರಗಳನ್ನು ಇಟ್ಟುಕೊಂಡು ಅನಿಷ್ಟಗಳನ್ನು ತೊಡೆದು ಹಾಕುವ ಪರಿವರ್ತನೆಯ ಕಾಲವಿದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
ಶಿಗ್ಗಾಂವಿಯಲ್ಲಿ ಗುರುವಾರ ಆರಂಭವಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಸತ್ಯ ಎಲ್ಲಿದೆಯೋ ಹುಡುಕುವ ಕೆಲಸವಾಗಬೇಕು. ಯಾವುದರಲ್ಲಿ ಸತ್ಯ ಇಲ್ಲವೋ ಅದನ್ನು ಜಾಡಿಸುವ ಕೆಲಸವೂ ಆಗಬೇಕಿದೆ. ಆದರೆ, ಹಳೆಯದೆಲ್ಲ ಕೆಟ್ಟದ್ದಲ್ಲ. ಆದರೆ, ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ ಮುಂತಾದ ಅನಿಷ್ಟಗಳನ್ನು ಜಾಡಿಸಬೇಕು. ವರ್ತಮಾನಕ್ಕೆ ಎಲ್ಲವನ್ನೂ ಹೊಸದನ್ನು ತರಬೇಕು ಎಂದರು ಆಗದು. ನಮ್ಮ ಸಂಸ್ಕೃತಿ. ಸದ್ಗುಣ, ಆದರ್ಶ ಆಚಾರ-ವಿಚಾರಗಳನ್ನು ಬಿಡದೇ ಅಂತರಂಗದ ಪರಿರ್ತನೆಯಾಗಬೇಕು ಎಂದರು.
ಎಲ್ಲರೂ ಆಸ್ತಿ-ಪಾಸ್ತಿ ಮಾಡುತ್ತೇವೆ. ಆದರೆ, ತರಳಬಾಳು ಶ್ರೀಗಳು ಶ್ರೀಮಂತರು. ಆದರೆ, ಜ್ಞಾನ ಸಂಪಾದಿಸಿ ಶ್ರೀಮಂತರಾಗಿದ್ದಾರೆ. ಸಮಾಜಕ್ಕೆ ಭವಿಷ್ಯವಿರಬೇಕು ಎಂಬ ಕಾರಣಕ್ಕೆ ಸಿರಿಗೆರೆ ಶ್ರೀಗಳು ಅವಿರತ ಶ್ರಮಿಸುತ್ತಿದ್ದಾರೆ. ನಮ್ಮಲ್ಲಿ ಉತ್ತಮ ಬದುಕಿದೆ ಎಂಬುದು ನಮಗೆ ಗೊತ್ತಾಗುವುದಲ್ಲ. ಅದಕ್ಕಾಗಿ ಬೇರೆಯವರಲ್ಲಿರುವುದನ್ನು ಹುಡುಕಲು ಹೋಗುತ್ತೇವೆ. ಆದರೆ, ಕೇವಲ ಹುಳುಕು ಹುಡುಕುವುದರಲ್ಲೇ ನಾವು ಕಾಲ ಕಳೆಯುತ್ತಿದ್ದೇವೆ.
ಧರ್ಮದ ಮಾರ್ಗದಲ್ಲಿ ಸಂಪಾದನೆ ಮಾಡಬೇಕು. ತರಳಬಾಳು ಕಾರ್ಯಕ್ರಮ ಜನತೆಗೆ ಮಾರ್ಗದರ್ಶನ ನೀಡುವಂತೆ ಕಾರ್ಯಕ್ರಮ ನಡೆಯುತ್ತಿದೆ. ದಾರಿ ತಪ್ಪಿದವರಿಗೆ ಈ ಕಾರ್ಯಕ್ರಮ ಮಾರ್ಗಸೂಚಿಯಾಗಿದೆ. ಬದುಕಿನ ಸಮುದ್ರದಲ್ಲಿ ಮತ್ತೊಂದು ತುದಿ ಗೊತ್ತಿಲ್ಲದೇ ಪಯಣಿಸುತ್ತೇವೆ. ಅಂಥ ಸಂದರ್ಭದಲ್ಲಿ ಮಠಗಳು ದ್ವೀಪಸ್ತಂಭದಂತೆ ಮಾರ್ಗಸೂಚಿಯಾಗಿ ಕೆಲಸ ಮಾಡುತ್ತಿವೆ. ಬದುಕಿನ ಗುಟ್ಟು, ತ್ಯಾಗದ ಮಹತ್ವವನ್ನು, ದಾನದ ಮಹತ್ವವನ್ನು ಮಠ ತಿಳಿಸುತ್ತಿದೆ. ಗುರುಪೀಠ ಮತ್ತು ಸಮಾಜದ ಸಂಬಂಧ ತಾಯಿ ಮಕ್ಕಳಂತಿರಬೇಕು. ಅದನ್ನು ಸಿರಿಗೆರೆ ಶ್ರೀಗಳು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಇಂದು ಸುಧಾರಣೆ ಆಗುತ್ತಿದ್ದರೂ ಶೇ. 74ರಷ್ಟು ಜನ ಇಂದಿಗೂ ನೈತಿಕವಾಗಿ ದುರ್ಬಲರಾಗಿದ್ದೇವೆ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿಯುತ್ತಿದ್ದರೂ ನೈತಿಕತೆ ಅಧಃಪಥನಗೊಳ್ಳುತ್ತಿದೆ. ಬೌದ್ಧಿಕ ಪರಿವರ್ತನೆ ಆಗಿದ್ದರೂ ನೈತಿಕತೆ ದಿವಾಳಿಯಾಗಿದೆ. ಇದರಿಂದ ವೈಭೋಗದ ಜೀವನಕ್ಕೆ ಎಲ್ಲರೂ ಹಾತೊರೆಯುತ್ತಿದ್ದಾರೆ. ಇಂದು ಮೋಸ, ಕಳ್ಳತನ ನಡೆಯುತ್ತಿರುವುದು ಹೊಟ್ಟೆಗಾಗಿ ಅಲ್ಲ, ಬದಲಾಗಿ ಐಶಾರಾಮಿ ಜೀವನಕ್ಕಾಗಿ ಜಾತ್ಯತೀಯ ಭಾವನೆ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕಿದೆ. ಸಂಕುಚಿತ ಭಾವನೆ ಬಿಟ್ಟು ಸೌಹಾರ್ದಯುತ ಜೀವನ ಮಾಡಬೇಕು ಎಂದು ಹೇಳಿದರು.