ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಧ್ಯಾತ್ಮದಿಂದ ಮನೋನೈರ್ಮಲ್ಯ

Vishwanath S
Updated On : 8 Feb 2014, 12:47 pm

ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಬಾಹ್ಯ ಶುದ್ಧಿಯ ಜತೆಗೆ ಅಂತರಂಗದ ಶುದ್ಧಿಯೂ ಮುಖ್ಯ. ಅಂತರಂಗ ಆನಂದವಾಗಿರಲು ಆತ್ಮ ಸಾಕ್ಷಾತ್ಕಾರ ಅಗತ್ಯ. ಅಧ್ಯಾತ್ಮದಿಂದ ಮನೋ ನೈರ್ಮಲ್ಯ ಕಾಪಾಡಿಕೊಳ್ಳಬಹುದು ಎಂದು ದಾವಣಗೆರೆ ಕರುಣಾಜೀವ ಕಲ್ಯಾಣ ಟ್ರಸ್ಟ್‌ನ ಶಿವನಕೆರೆ ಬಸವಲಿಂಗಪ್ಪ ಹೇಳಿದರು.
ಅವರು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಆರಂಭವಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನ ಶುಕ್ರವಾರ ಪರಿಸರ ಮತ್ತು ಅಧ್ಯಾತ್ಮ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ಜಗತ್ತು ಈಶ್ವರನಿಂದ ರೂಪಿತವಾಗಿವೆ. ಈ ಪರಿಸರವನ್ನೇ ನಾವು ದೇವರೆಂದು ಪೂಜಿಸುತ್ತೇವೆ. ಬಾಹ್ಯ ಪರಿಸರ ಕಾಪಾಡಲು ಅಂತರಂಗ ಪರಿಸರ ಅಗತ್ಯ. ಅಂತರಂಗ ಆನಂದವಾಗಿರಲು ಆತ್ಮಗೌರವ, ಆತ್ಮವಿಮರ್ಶೆ, ಆತ್ಮಾನುಸಂಧಾನ, ಆತ್ಮವಿಶ್ವಾಸ, ಆತ್ಮಾನಂದ, ಆತ್ಮ ಸಾಕ್ಷಾತ್ಕಾರ ಅಗತ್ಯ. ಇದೆಲ್ಲ ಬೇಕು ಎಂದರೆ ಮನೋಮಾಲಿನ್ಯ ಹೋಗಲಾಡಿಸುವುದು ಮುಖ್ಯ. ಭೌತಿಕ ಬದುಕಿಗೆ ಪರಿಸರ ಬೇಕು ಎಂದು ಹೇಳಿದರು.
ಪರಿಸರ ಮುಂದಿನ ಪೀಳಿಗೆಯ ಆಸ್ತಿ. ವಿವಿಧ ರೀತಿಯ ಮಾಲಿನ್ಯದಿಂದ ನಮ್ಮನ್ನು ನಾವೇ ನಾಶ ಮಾಡಿಕೊಳ್ಳುತ್ತಿದ್ದೇವೆ. ಪ್ರಕೃತಿಯ ಕೂಸಾಗಿದ್ದ ಮನುಷ್ಯ ಇಂದು ತಾಯಿಯನ್ನೇ ನಾಶ ಮಾಡಲು ಹೊರಟಿದ್ದಾನೆ. ತಾನು ಕುಳಿತ ಕೊಂಬೆಯನ್ನು ತಾನೇ ಕಡಿದುಕೊಳ್ಳುತ್ತಿದ್ದಾನೆ. ಪ್ರತಿ ಜೀವಿಗೂ ನೈಸರ್ಗಿಕ ಆವರಣವಿದೆ ಎಂಬುದನ್ನು ನಾವಿಂದು ಮರೆಯುತ್ತಿದ್ದೇವೆ. ಕೈಗಾರಿಕಾ ಕ್ರಾಂತಿಯಿಂದ ಪರಿಸರ ಮಾಲಿನ್ಯ ಇನ್ನಷ್ಟು ಹೆಚ್ಚಾಗಿದೆ. ಪ್ರಕೃತಿಯ ಮೇಲಿನ ಅತ್ಯಾಚಾರ ಹೆಚ್ಚಾಗಿದೆ. ಆದ್ದರಿಂದ ಪರಿಸರ ಉಳಿವಿಗೆ ಮೌಲಿಕ ಹಾಗೂ ಆಧ್ಯಾತ್ಮಿಕ ಚಿಂತನೆ ಅಗತ್ಯ. ಪರಿಸರವನ್ನು ದೇವರೆಂದು ಪೂಜಿಸಬೇಕು. ನಾವೆಲ್ಲ ಒಂದೇ ಎಂಬ ಭಾವನೆ ಬರಬೇಕು. ಎಲ್ಲ ಜೀವಿಗಳೂ ಬದುಕಿ ಬಾಳಬೇಕು. ಇದೇ ಪರಿಸರ ಹಾಗೂ ಅಧ್ಯಾತ್ಮಕ್ಕಿರುವ ಸಂಬಂಧವಾಗಿದೆ ಎಂದು ಹೇಳಿದರು. ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಿರಹಟ್ಟಿ ಫಕ್ಕೀರೇಶ್ವರ ಮಠದ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿ, ಶಾಸಕ ಬಸವರಾಜ ಬೊಮ್ಮಾಯಿ, ಶಾಸಕ ರುದ್ರಪ್ಪ ಲಮಾಣಿ, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಅರವಿಂದ ಜತ್ತಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement