ಇಂದು ಬಿಜೆಪಿ ಪೂರ್ವಭಾವಿ ಸಭೆ
ಹಾವೇರಿ: ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಫೆ. 13ರಂದು ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದ ಪೂರ್ವಭಾವಿಯಾಗಿ ಜಿಲ್ಲೆಯ ಎಲ್ಲ ತಾಲೂಕಿನ ವಿಧಾನಸಭಾ ಮಟ್ಟದಲ್ಲಿ ಪಕ್ಷದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ. ಫೆ. 8ರಂದು ಬೆಳಗ್ಗೆ 10.30ಕ್ಕೆ ಹಾವೇರಿಯಲ್ಲಿ, ಮಧ್ಯಾಹ್ನ 3 ಗಂಟೆಗೆ ಹಿರೇಕೆರೂರನಲ್ಲಿ ಸಭೆ ನಡೆಯಲಿದೆ. ಫೆ. 10ರಂದು ಬೆಳಗ್ಗೆ 10.30ಕ್ಕೆ ಬ್ಯಾಡಗಿ, ಮಧ್ಯಾಹ್ನ 3 ಗಂಟೆಗೆ ರಾಣಿಬೆನ್ನೂರನಲ್ಲಿ ಸಭೆ ನಡೆಯಲಿದೆ. ಫೆ. 11ರಂದು ಬೆಳಗ್ಗೆ 10.30 ಗಂಟೆಗೆ ಹಾನಗಲ್ಲನಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ಮುಖಂಡರಾದ ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಣ್ಣ ಬೇವಿನಮರದ, ಸಂಸದ ಶಿವಕುಮಾರ ಉದಾಸಿ, ಜಿಲ್ಲಾ ಅಧ್ಯಕ್ಷ ಬೋಜರಾಜ ಕರೂದಿ, ರಾಜ್ಯ ಉಪಾಧ್ಯಕ್ಷ ಡಾ. ಮಾ. ನಾಗರಾಜ, ರಾಜ್ಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ವಾಲೇಕಾರ ರಾಜ್ಯ ಕಾರ್ಯದರ್ಶಿಭಾರತಿ ಜಂಬಗಿ ಹಾಗೂ ಶಾಸಕರು, ಮಾಜಿ ಶಾಸಕರು ಉಪಸ್ಥಿತರಿರುವರು. ಸಭೆಗೆ ಪಕ್ಷದ ಎಲ್ಲ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧರಾಜ ಕಲಕೋಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ಜಾತ್ರೆ: ವಿವಿಧ ಕಾರ್ಯಕ್ರಮ
ಬ್ಯಾಡಗಿ: ಪಟ್ಟಣದ ಶ್ರೀ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಫೆ. 9ರಿಂದ 11ರ ವರೆಗೆ ಮೂರು ದಿನಗಳ ಕಾಲ ನಡೆಯಲಿವೆ. ಫೆ. 9ರಂದು ಮಹಾರುದ್ರಾಭಿಷೇಕ, ಗುಗ್ಗಳ, ಹೂವಿನ ತೇರು, ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿವಸ ಸಂಜೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಥೋತ್ಸವ ಜರುಗುವುದು. ನಂದಿ ಬೇವೂರಿನ ನಂದಿಕೋಲು ಕುಣಿತ, ಚನ್ನಗಿರಿ ತಾಲೂಕಿನ ಗುಳ್ಳೇನಹಳ್ಳಿ ಮಹಿಳಾ ವೀರಗಾಸೆ ಕಲಾ ಪ್ರದರ್ಶನ ನಡೆಯಲಿವೆ. ಫೆ. 10ರಂದು ಸಂಜೆ 6.30ಕ್ಕೆ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಹಾಸ್ಯ ಕಲಾವಿದರಾದ ಧಾರವಾಡದ ಮಹಾಂತೇಶ ಸತ್ತಿಗೇರಿ, ರಾಮದುರ್ಗದ ಮಹಾಂತೇಶ ಹಡಪದ ಹಾಗೂ ಸಂಗಡಿಗರಿಂದ ಹಾಸ್ಯಸಂಜೆ ಕಾರ್ಯಕ್ರಮ, ಫೆ. 11ರ ಸಂಜೆ 6 ಗಂಟೆಗೆ ಭದ್ರಾವತಿಯ ಬಿ. ಮನು ಸಂಗಡಿಗರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.ಆರೋಗ್ಯ ಸೇವೆ: 104ಕ್ಕೆ ಉಚಿತ ಕರೆ ಮಾಡಿ
ಹಾವೇರಿ: ಪ್ರತಿಯೊಬ್ಬರಿಗೂ ಸುಲಭದಲ್ಲಿ ಆರೋಗ್ಯ ಸೇವಾ ಸೌಲಭ್ಯಗಳನ್ನು ಕಲ್ಪಿಸಬೇಕೆಂಬುದು ಸರ್ಕಾರದ ಸಂಕಲ್ಪ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವಾ ಸೌಲಭ್ಯಗಳು ಕುರಿತು ಮಾಹಿತಿ ಒದಗಿಸಲು 104 ಆರೋಗ್ಯವಾಣಿ ಸೇವೆಯನ್ನು ಜಾರಿಗೆ ತರಲಾಗಿದೆ. ತುರ್ತಾಗಿ ಆರೋಗ್ಯ ಸೇವಾ ಮಾಹಿತಿ ಬೇಕಾದಲ್ಲಿ ಹಾಗೂ ಸಕಾಲದಲ್ಲಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದಂತಹ ಸಂದರ್ಭದಲ್ಲಿ ಸಾರ್ವಜನಿಕರು ವೈದ್ಯಕೀಯ ಸಲಹೆಗಾಗಿ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಕರೆ ಮಾಡಿ ತಜ್ಞವೈದ್ಯರ ಸಲಹೆ ಪಡೆದು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಸೇವೆಯು ದಿನದ 24 ಗಂಟೆಯೂ ಹಾಗೂ ವರ್ಷದ 365 ದಿನಗಳು ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ವಿ.ಬಿ.ಪಾಟೀಲ ಅವರು ಕೋರಿದ್ದಾರೆ.
ಇಂದು ಬಿಜೆಪಿ ಸಭೆ
ಹಿರೇಕೆರೂರ: ಜಿಲ್ಲೆಯಲ್ಲಿ ಫೆ. 13ರಂದು ಜರುಗಲಿರುವ ಬಿಜೆಪಿಯ ಜಿಲ್ಲಾ ಮಟ್ಟದ ಸಮಾವೇಶವನ್ನು ಯಶಸ್ವಿಯಾಗಿಸಲು ಹಾಗೂ ಮುಂಬರುವ ಲೋಕಸಭಾ ಚುನಾವಣೆಯ ಕುರಿತು ರೂಪುರೇಷೆಗಳ ಬಗ್ಗೆ ಚರ್ಚಿಸಲು ಶನಿವಾರ ಪಟ್ಟಣದ ಗುರುಭವನದಲ್ಲಿ ಪಕ್ಷದ ಕಾರ್ಯಕರ್ತರ, ಮುಖಂಡರ, ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಸ್.ಆರ್. ಅಂಗಡಿ ತಿಳಿಸಿದರು. ಅವರು ಶುಕ್ರವಾರ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿಸುವ ಉದ್ದೇಶದಿಂದ ಎಲ್ಲರೂ ಒಗ್ಗಟ್ಟಿನಿಂದ ಲೋಕಸಭಾ ಚುನಾವಣೆಯನ್ನು ಎದುರಿಸುವ ಮೂಲಕ ರಾಜ್ಯದಲ್ಲಿ ಎಲ್ಲ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುವ ಉದ್ದೇಶದಿಂದ ಶಾಸಕ ಯು.ಬಿ. ಬಣಕಾರ, ಅಧ್ಯಕ್ಷತೆಯಲ್ಲಿ ಪಟ್ಟಣದ ಗುರುಭವನದಲ್ಲಿ ಫೆ. 8ರಂದು ಮಧ್ಯಾಹ್ನ 3ಕ್ಕೆ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ ಹಾಗೂ ಜಿಲ್ಲೆಯ ಎಲ್ಲ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು, ಮುಖಂಡರು ಆಗಮಿಸಲಿದ್ದು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಜಿಪಂ ಸದಸ್ಯೆ ಬಸಮ್ಮ ಅಬಲೂರ, ಮಾಸೂರು ಗ್ರಾಪಂ ಅಧ್ಯಕ್ಷ ಚನ್ನಬಸಪ್ಪ ರಾಮಜ್ಜನವರ, ಮಹೇಶ ಗುಬ್ಬಿ, ಪಾಲಾಕ್ಷಗೌಡ ಪಾಟೀಲ, ಗಂಗಾಧರ ಮಲೆಬೆನ್ನೂರ, ಕಂಠಾಧರ ಅಂಗಡಿ, ಇದ್ದರು.
ಹಾನಗಲ್: ಇಂದು ಮರಾಠಾ ಸಮಾಜದ ಸಭೆ
ಹಾನಗಲ್ಲ: ಕ್ಷತ್ರಿಯ ಮರಾಠಾ ಸಮಾಜದ ಸಭೆ ಫೆ. 8ರಂದು ಪಟ್ಟಣದ ಛತ್ರಪತಿ ಶಿವಾಜಿ ಸಮುದಾಯ ಭವನದಲ್ಲಿ ನಡೆಯಲಿದೆ. ಫೆ. 19ರಂದು ನಡೆಯುವ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕುರಿತು ಪೂರ್ವ ಸಿದ್ಧತೆಗಾಗಿ ಸಭೆ ಕರೆಯಲಾಗಿದ್ದು, ತಾಲೂಕಿನ ಎಲ್ಲ ಸಮಾಜ ಬಾಂಧವರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕೆಂದು ಕೋರಲಾಗಿದೆ. ಮರಾಠಾ ಸಮಾಜದ ತಾಲೂಕು ಅಧ್ಯಕ್ಷ ವಿಷ್ಣುಕಾಂತ ಜಾಧವ್ ಅಧ್ಯಕ್ಷತೆ ವಹಿಸುವರು ಎಂದು ಕಾರ್ಯದರ್ಶಿ ಚಂದ್ರಶೇಖರ ಸಾಳುಂಕೆ ತಿಳಿಸಿದ್ದಾರೆ.
ಪ್ರವೇಶ ಪರೀಕ್ಷೆಗೆ ಹಾಜರಾಗಲು ಸೂಚನೆ
ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕು ಮಹಾರಾಜ್ಪೇಟೆ ಬಳಿ ಜವಾಹರ ನವೋದಯ ವಿದ್ಯಾಲಯದಲ್ಲಿ 2014-15ನೇ ಸಾಲಿಗೆ, 6ನೇ ತರಗತಿ ಪ್ರವೇಶಕ್ಕಾಗಿ ಫೆ.8ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಈ ವಿಷಯವಾಗಿ ಈಗಾಗಲೇ ಎಲ್ಲ ಪ್ರವೇಶ ಪತ್ರಗಳನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಸಕಾಲಕ್ಕೆ ಪರೀಕ್ಷೆಗೆ ಹಾಜರಾಗಬೇಕೆಂದು ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ನಿತ್ಯಾನಂದನ ಬಂಧನಕ್ಕೆ ಆಗ್ರಹ: ಪ್ರತಿಭಟನೆ
ಹಿರೇಕೆರೂರ: ಕಪಟ ಸನ್ಯಾಸಿ ನಿತ್ಯಾನಂದನನ್ನು ಬಂಧಿಸಿ ಕನ್ನಡದ ಹುಡುಗ ವಿನಯನನ್ನು ಸ್ವದೇಶಕ್ಕೆ ಕರೆ ತರಬೇಕೆಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ತಾಲೂಕು ಕರ್ನಾಟಕ ಸಂರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಶಕುಂತಲಾ ಚೌಗಲಾರವರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ಸಂರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಪುಟ್ಟೇಶ ಗೊಲ್ಲರ ಮಾತನಾಡಿ, ಸಾಫ್ಟವೇರ್ ಎಂಜಿನಿಯರ್ ವಿನಯ ಭಾರದ್ವಾಜರನ್ನು ಅಮೆರಿಕ ಸರ್ಕಾರ ಬಂಧಿಸಿರುವುದು ಖಂಡನೀಯ.
ಭಾರತ ಸರ್ಕಾರ ವಿಶೇಷ ಆಸಕ್ತಿವಹಿಸಿ ಆತನನ್ನು ತಾಯ್ನಾಡಿಗೆ ಕರೆತರಬೇಕು ಹಾಗೂ ಅಕ್ರಮ ಚಟುವಟಿಕೆ ಎಸಗುತ್ತಿರುವ ನಿತ್ಯಾನಂದನನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದರು. ಇಲ್ಲದಿದ್ದಲ್ಲಿ ಕರ್ನಾಟಕ ಸಂರಕ್ಷಣಾ ವೇದಿಕೆ ಬೀದಿಗಿಳಿದು ನಿರಂತರ ಧರಣಿ ನಡೆಸಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧ್ಯಕ್ಷ ಸೋಮೇಶ ಹಿರೇಗೌಡ್ರ, ಉಪಾಧ್ಯಕ್ಷ ಬಸವರಾಜ ಮುದಿಗೌಡ್ರ, ಗೌರವಾಧ್ಯಕ್ಷ ನಿಂಗಪ್ಪ ಹಾವೇರಿ, ಮಾರುತಿ ಬ್ಯಾಡಗಿ, ಬೀರಪ್ಪ ಚೌಟಿ, ಮಾಲತೇಶ ಗಾಣಿಗೇರ, ನೀಲರಾಜ ಚಿಕ್ಕಣ್ಣನವರ, ರಮೇಶ ಬೇವಿನಹಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ನಾಳೆಯಿಂದ ನೃತ್ಯ ಸ್ಪರ್ಧೆ
ಹಾನಗಲ್ಲ: ಭಾರತ ಸರ್ಕಾರ ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್ ಅವರ ಹುಟ್ಟುಹಬ್ಬದ ನಿಮಿತ್ತ ನಗರದ ಛತ್ರಪತಿ ಶಿವಾಜಿ ಯುವಕ ಬಳಗ ಫೆ. 9 ಹಾಗೂ 10ರಂದು ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ನಗರದ ಕುಮಾರೇಶ್ವರ ಬಯಲು ರಂಗಮಂದಿರದಲ್ಲಿ ಭಾನುವಾರ ಸಂಜೆ 4 ಗಂಟೆಗೆ ನಡೆಯುವ ನೃತ್ಯ ಸ್ಪರ್ಧೆಯನ್ನು ನೆಹರು ಯುವ ಕೆಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್ ಉದ್ಘಾಟಿಸುವರು. ಶಾಸಕ ಮನೋಹರ ತಹಶೀಲ್ದಾರ, ಕೆಪಿಸಿಸಿ ಸದಸ್ಯರಾದ ರಾಜಶೇಖರ ಸಾಲಿಮಠ, ಸತೀಶ ದೇಶಪಾಂಡೆ, ರವಿಕುಮಾರ ಬೆಲ್ಲದ, ಪ್ರಕಾಶಗೌಡ ಪಾಟೀಲ, ಶಿವಾನಂದಪ್ಪ ಈಳಗೇರ, ನಾಗಪ್ಪ ಸವದತ್ತಿ, ಯಾಶೀರಖಾನ ಪಠಾಣ, ಎನ್.ಎಸ್. ಪಡೆಪ್ಪನವರ, ಸಿ.ಎಸ್. ಬಡಿಗೇರ, ರಾಜಣ್ಣ ಸಿಂಧೂರ, ಜಿ.ವಿ. ಕಂಬಾಳಿಮಠ, ಯಲ್ಲಪ್ಪ ಕಿತ್ತೂರ, ಕೆ.ಎಲ್. ದೇಶಪಾಂಡೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಛತ್ರಪತಿ ಶಿವಾಜಿ ಯುವಕ ಬಳಗದ ಅಧ್ಯಕ್ಷ ರಾಜೂ ಗೌಳಿ ಅಧ್ಯಕ್ಷತೆ ವಹಿಸುವರು. ಫೆ. 10ರಂದು ರಾತ್ರಿ 8.30ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳು ಹೆಚ್ಚಿನ ಮಾಹಿತಿಗಾಗಿ ಶಂಕರ ಖಂಡೂನವರ (9902836989), ರಾಜೂ ಗೌಳಿ (8105773133) ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.
10ರಂದು ಛತ್ರಪತಿ ಶಿವಾಜಿ ಜಯಂತಿ ಪೂರ್ವಭಾವಿ ಸಭೆ
ಹಾವೇರಿ: ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಪೂರ್ವ ಸಿದ್ಧತಾ ಸಭೆ ಫೆ. 10ರಂದು ಮಧ್ಯಾಹ್ನ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಲಿದೆಯೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಅವರು ತಿಳಿಸಿದ್ದಾರೆ.