ಕಳಪೆ ಹತ್ತಿ ಬೀಜ: ಧರಣಿ, ಸಭಾತ್ಯಾಗ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 7
ಖಾತೆ ದುರಸ್ತಿಗೆ ಆಗ್ರಹಿಸಿ ಧರಣಿ, ಸ್ಥಾಯಿ ಸಮಿತಿ ಸಭೆಯಲ್ಲಿ ವಿಷಯ ಮಂಡಿಸದೇ ಸಾಮಾನ್ಯ ಸಭೆ ಕರೆದಿರುವುದಕ್ಕೆ ಸಭಾತ್ಯಾಗ. ಈ ಗೊಂದಲಗಳಲ್ಲೇ ಶುಕ್ರವಾರ ನಡೆದ ಇಲ್ಲಿಯ ತಾಪಂ ಸಾಮಾನ್ಯ ಸಭೆಯ ಹೆಚ್ಚಿನ ಸಮಯ ಕೊಚ್ಚಿ ಹೋದರೂ, ಹತ್ತಿ ಬೀಜದ ಖಾಲಿ ಪ್ಯಾಕೆಟ್‌ಗಳ ಮಾಲೆ ಧರಿಸುವ ಮೂಲಕ ಸಮಸ್ಯೆಯ ಗಂಭೀರತೆಯೂ ಚರ್ಚೆಯಾಗಿ ಗಮನ ಸೆಳೆಯಿತು.
ಇಲ್ಲಿಯ ತಾಪಂ ಸಭಾಭವನದಲ್ಲಿ ಲಕ್ಷ್ಮವ್ವ ಮೇಲ್ಮುರಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆ ನಿಗದಿತ ಸಮಯಕ್ಕಿಂತ 1 ಗಂಟೆ ತಡವಾಗಿ ಆರಂಭವಾಯಿತು. ಸಭೆಯಲ್ಲಿ ಅಧಿಕಾರಿಗಳ ಗೈರು ಹಾಜರಿಯೂ ಎದ್ದು ಕಾಣುತ್ತಿತ್ತು. ತಾಲೂಕಿನಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗೆ ವೇದಿಕೆಯಾಗಿದ್ದ ಸಭೆ ಒಂದೆರಡು ವಿಷಯಗಳಲ್ಲಿ ಮಾತ್ರ ಚರ್ಚೆಯಾಯಿತು. ಶಾಸಕರೇ ಸಭೆ ನಡೆಸಲು ದಿನಾಂಕ ನಿಗದಿ ಮಾಡಿ ಅವರೇ ಬಾರದಿರುವುದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿಧ್ವನಿಸಿದ ಕಳಪೆ ಹತ್ತಿ: ಸದಸ್ಯ ಬಸವರಾಜ ಕಳಸೂರ ಅವರು ಬಿಟಿ ಹತ್ತಿ ಬೀಜದ ಖಾಲಿ ಕಬ್ಬಿ ಹಾಗೂ ಪ್ಯಾಕೆಟ್‌ಗಳ ಮಾಲೆ ಧರಿಸಿಯೇ ಸಭೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ನಂತರ ಅವರು ವಿಷಯ ಪ್ರಸ್ತಾಪಿಸಿ, ಗಂಭೀರ ಚರ್ಚೆಗೆ ಸಭೆಯನ್ನು ಬಳಸಿಕೊಂಡರು. ಕಳಪೆ ಬಿಟಿ ಹತ್ತಿ ಬೀಜ ಬಿತ್ತಿ ತಾಲೂಕು ಸೇರಿದಂತೆ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಖಂಡಿಸಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಸೌಜನ್ಯಕ್ಕೂ ಅವರನ್ನು ಭೇಟಿಯಾಗಿಲ್ಲ. ಹೆಕ್ಟೇರ್‌ಗೆ ರು. 4500 ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದು ಸಾಲದು. ಎಕರೆಗೆ ಕನಿಷ್ಠ ರು. 15 ಸಾವಿರ ಪರಿಹಾರ ಘೋಷಿಸಬೇಕು. ಬಿಟಿ ಕಂಪನಿಗಳು ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿವೆ. ಅಧಿಕಾರಿಗಳೂ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ರೈತರು ಸರ್ಕಾರ ಈಗ ಘೋಷಿಸಿರುವ ಪರಿಹಾರ ಪಡೆಯದೇ ನಿರಾಕರಿಸಬೇಕು. ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಸರ್ಕಾರ ಹೆಚ್ಚಿನ ಪರಿಹಾರ ನೀಡದಿದ್ದರೆ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳಿದರು. ಇದಕ್ಕೆ ಎಲ್ಲ ಸದಸ್ಯರು ಸಮ್ಮತಿ ಸೂಚಿಸಿದರು.
ಸದಸ್ಯರ ಧರಣಿ: ತಾಲೂಕಿನ ಕೋಳೂರು ಗ್ರಾಪಂ ವ್ಯಾಪ್ತಿಯ ಗಣಜೂರು ಗ್ರಾಮದ ರೇಣುಕಾ ಕುರುಬರ ಎಂಬುವರು ವಹಿವಾಟು ಮಾಡುತ್ತಿದ್ದ ನಿವೇಶನ ಜಾಗವನ್ನು ಅವರಿಗೆ ಬಿಟ್ಟುಕೊಟ್ಟು ಖಾತೆ ದುರಸ್ತಿ ಮಾಡಿಕೊಡಬೇಕು ಎಂದು ಈ ಹಿಂದೆಯೇ ಠರಾವು ಅಂಗೀಕರಿಸಲಾಗಿದೆ. ಆದರೆ, ಇದುವರೆಗೆ ಪಿಡಿಒ ಅವರು ಬಡ ಫಲಾನುಭವಿಗೆ ನಿವೇಶನದ ಖಾತೆ ಮಾಡಿಕೊಟ್ಟಿಲ್ಲ. ಹಾಗಾದರೆ ತಾಪಂನಲ್ಲಿ ಕೈಗೊಂಡ ನಿರ್ಣಯಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿ, ಸದಸ್ಯೆ ಜಯಮ್ಮ ಅಂಗಡಿ, ಕೋಳೂರು ಗ್ರಾಪಂ ಅಧ್ಯಕ್ಷೆ ಶೋಭಾ, ಸದಸ್ಯ ಮಹಾಂತೇಶ ಅಂಗಡಿ ರೆಹಾನಾ ಚಾಂದ್ ಶೇಖ್ ಇತರರು ಸಭಾಂಗಣದ ಪ್ರವೇಶ ದ್ವಾರದಲ್ಲಿ ಧರಣಿ ಆರಂಭಿಸಿದರು. ಪಿಡಿಓ ಅವರನ್ನು ಕರೆಯಿಸಿ ವಿವರಣೆ ಪಡೆಯಲಾಯಿತು. ಅದು ಸರ್ಕಾರಿ ಜಾಗ, ನ್ಯಾಯಾಲಯದಿಂದ ಸಾರ್ವಜನಿಕರು ತಡೆಯಾಜ್ಞೆ ತಂದಿದ್ದರಿಂದ ಖಾತೆ ಮಾಡಿಲ್ಲ. ಈ ಬಗ್ಗೆ ತಾಪಂ ಇಓ ಅವರು ಲಿಖಿತವಾಗಿ ಹೇಳಿದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಂತರ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ತಾಪಂ ಅಧಿಕಾರಿಗಳನ್ನು ಕಳುಹಿಸಿ, ಧರಣಿ ನಿರತರನ್ನು ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಸಮಾಧಾನ ಪಡಿಸಿದರು.
ಸಭಾತ್ಯಾಗ: ಸ್ಥಾಯಿ ಸಮಿತಿ ಸಭೆಯಲ್ಲಿ ಯೋಜನೆಗಳ ಖರ್ಚು ವೆಚ್ಚ ಇತ್ಯಾದಿ ಕ್ರಿಯಾಯೋಜನೆ ಮಂಡಿಸಿ, ಸಾಮಾನ್ಯ ಸಭೆ ನಡೆಸಬೇಕು. ಆದರೆ, ಸ್ಥಾಯಿ ಸಮಿತಿ ಸಭೆ ನಡೆಸದೇ ಸಾಮಾನ್ಯ ಸಭೆ ನಡೆಸಲು ಆಸ್ಪದವಿಲ್ಲ. ಆದ್ದರಿಂದ ಈ ಸಭೆಗೆ ತಾವು ಭಾಗಿಯಾಗುವುದಿಲ್ಲ. ಈ ಸಭೆಯನ್ನು ವಿಶೇಷ ಸಭೆ ಎಂದು ಪರಿಗಣಿಸಬಹುದು. ಇಲ್ಲದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಸದಸ್ಯ ಡಾ. ಮರಗಬ್ಬಿನ ಸಭಾತ್ಯಾಗ ಮಾಡಿದರು.
ಅಡ್ಡಾದಿಡ್ಡಿ ಮಾತಾಡಬೇಡಿ: ಸಭೆಯಲ್ಲಿ ಗಂಭೀರ ಚರ್ಚೆಯಾಗದೇ ಸಮಯ ಮೀರುತ್ತಿದ್ದಾಗ ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಮಾತನಾಡಿ, ಸದಸ್ಯರು ಅಡ್ಡಾದಿಡ್ಡಿ ಮಾತನಾಡಿ ಸಮಯ ಹಾಳು ಮಾಡಬೇಡಿ. ಚರ್ಚಿಸಲು ಬೇಕಾದಷ್ಟು ವಿಷಯಗಳಿವೆ. ಜನರಿಗೆ ಒಳ್ಳೆಯದಾಗುವ ವಿಷಯದ ಬಗ್ಗೆ ಮಾತನಾಡಿ. ಇದೇ ರೀತಿ ಸಮಯ ವ್ಯರ್ಥ ಮಾಡುವುದಿದ್ದರೆ ನಾನು ಸಭೆಗೆ ಬರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸದಸ್ಯ ಪರಮೇಶ್ವರ ಕರುವತ್ತಿಗೌಡರ ಅವರು, ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಚಂದ್ರಶೇಖರ ಅರಳಿ, ತಿಪ್ಪಣ್ಣ ಅರಳಿಕಟ್ಟಿ ಇತರರು ಹೆಸ್ಕಾಂ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವನ್ನೂ ಟೀಕಿಸಿದರು.
ತಾಪಂ ಉಪಾಧ್ಯಕ್ಷ ಪ್ರಕಾಶ ಬಣಕಾರ, ಸ್ಥಾಯಿ ಸಮಿತಿ ಅಧ್ಯಕ್ಷೆ ಹನುಮವ್ವ ಬಂಡಿವಡ್ಡರ, ಇಒ ಜಯಕುಮಾರ್ ಇತರರಿದ್ದರು.
ಕಳಪೆ ಬಿಟಿ ಹತ್ತಿ ಬೀಜ ಬಿತ್ತಿ ಹಾವೇರಿ ತಾಲೂಕು ಸೇರಿದಂತೆ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಖಂಡಿಸಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಸೌಜನ್ಯಕ್ಕೂ ಅವರನ್ನು ಭೇಟಿಯಾಗಿಲ್ಲ. ಹೆಕ್ಟೇರ್‌ಗೆ ರು. 4500 ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದು ಸಾಲದು. ಎಕರೆಗೆ ಕನಿಷ್ಠ ರು. 15 ಸಾವಿರ ಪರಿಹಾರ ಘೋಷಿಸಬೇಕು. ಬಿಟಿ ಕಂಪನಿಗಳು ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿವೆ. ಅಧಿಕಾರಿಗಳೂ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ರೈತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಸರ್ಕಾರ ಹೆಚ್ಚಿನ ಪರಿಹಾರ ನೀಡದಿದ್ದರೆ ಹೋರಾಟದಲ್ಲಿ ಭಾಗಿಯಾಗುತ್ತೇವೆ.
- ಸದಸ್ಯ ಬಸವರಾಜ ಕಳಸೂರ