ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಮಗಾರಿ ಕಳಪೆ ಖಂಡಿಸಿ ಸ್ವಾಭಿಮಾನಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

Vishwanath S
Updated On : 8 Feb 2014, 12:47 pm

ರಾಣಿಬೆನ್ನೂರ:  ತಾಲೂಕಿನ ತುಮ್ಮಿನಕಟ್ಟಿ ಗ್ರಾಮ ಪಂಚಾಯಿತಿಯಿಂದ ಎಂಎನ್ ಆರ್‌ಇಜಿಎ ಯೋಜನೆಯಲ್ಲಿ ಅಭಿವೃದ್ಧಿಪಡಿಸಿರುವ ಕಾಮಗಾರಿಗಳು ಕಳಪೆ ಯಾಗಿವೆ. ಮತ್ತು ಸರ್ಕಾರದ ಆಶ್ರಯ ಯೋಜನೆ ಅಡಿಯಲ್ಲಿ ಬಡವರಿಗೆ ನೀಡಬೇಕಾಗಿದ್ದ ಮನೆಗಳನ್ನು ಶ್ರೀಮಂತರಿಗೆ ನೀಡಿದ್ದು, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ವಾಭಿಮಾನಿ ಕರವೇ ಕಾರ್ಯಕರ್ತರು ಗುರುವಾರ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ರವಿ ಮೂಲಿಮನಿ ಮಾತನಾಡಿ, ತುಮ್ಮಿನಕಟ್ಟಿ ಗ್ರಾಮವು ತಾಲೂಕಿನ ದೊಡ್ಡ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ಸುಮಾರು 14 ಸಾವಿರ ಜನರು ವಾಸಿಸುತ್ತಿದ್ದು, 19 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತ್‌ದಲ್ಲಿ ನಡೆದಿರುವ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. 2012-13ನೇ ಸಾಲಿನಲ್ಲಿ ಗ್ರಾಮದ ಸಂತೆ ಪೇಟೆ, ಜೋಳದ ಪೇಟೆ, ಸುಣಗಾರ ಓಣಿ, ಕತಗಿಯವರ ಓಣಿ, ಬೀರದೇವರ ದೇವಸ್ಥಾನದ ಓಣಿ, ಹರಿಜನರ ಓಣಿ, ದೇವಾಂಗದವರ ಓಣಿ, ಚಕ್ಕಡಿಯವರ ಓಣಿ, ಕೆ.ಎಚ್.ಡಿ.ಸಿ ಕಾಲೋನಿಯಲ್ಲಿ ಅಭಿವೃದ್ಧಿಪಡಿಸಿರುವ ಕಾಂಕ್ರೀಟ್ ರಸ್ತೆಗಳು, ರಸ್ತೆಯ ಅಕ್ಕಪಕ್ಕದಲ್ಲಿನ ಗಟಾರಗಳು ಸಂಪೂರ್ಣ ಕಳಪೆ ಕಾಮಗಾರಿಗಳಾಗಿವೆ ಎಂದು ಆರೋಪಿಸಿದರು. ಆಶ್ರಮ ಮನೆಗಳ ಹಂಚಿಕೆಯಲ್ಲೂ ತಾರತಮ್ಯ ಮಾಡಲಾಗಿದೆ. ಈ ಎಲ್ಲದರ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗ್ರಾಮ ಘಟಕದ ಅಧ್ಯಕ್ಷರಾದ ತಿಮ್ಮಣ್ಣ ವೆಂಕಣ್ಣನವರ ಮಾತನಾಡಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಾಲೂಕು ಪಂಚಾಯಿತಿ ಕಾ.ನಿ. ಅಧಿಕಾರಿ ಕೃಷ್ಣಮೂರ್ತಿ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಸ್ವಾಕರವೇ ಸಂಘಟನಾ ಕಾರ್ಯದರ್ಶಿ ಪರಶುರಾಮ ಶೆಟ್ಟೇರ, ತಾಲೂಕಾ ಅಧ್ಯಕ್ಷ ಚಂದ್ರು ಕಡ್ಲಿಗೊಂದಿ, ಸಣ್ಣಪ್ಪ ಹೆಬ್ಬಾಳ, ಆನಂದಪ್ಪ, ರಾಜು ಅಳಲಗೇರಿ, ಬೈರಪ್ಪ ಬ್ಯಾಳಿಯವರ ಪಾಲಾಕ್ಷಪ್ಪ ಕಡೆಮನಿ, ರಾಜು ಸತ್ಯಪ್ಪನವರ, ಸಿದ್ಧಾರೂಢ ಗುರಂ, ವಿನಾಯಕ ಕೂಣನತಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement