ಮಠಗಳ ಆಡಳಿತದಲ್ಲಿ ಕೈ ಹಾಕುವುದಿಲ್ಲ: ಸಚಿವ ಹುಕ್ಕೇರಿ
ಹಾನಗಲ್ಲ: ರಾಜ್ಯ ಸರ್ಕಾರದಿಂದ ಮಠಮಾನ್ಯಗಳ ಮೇಲೆ ನಿಯಂತ್ರಣ ಇಲ್ಲ ಹಾಗೂ ಮಠಗಳ ಆಡಳಿತದಲ್ಲಿ ಕೈ ಹಾಕುವುದಿಲ್ಲ ಎಂದು ಮುಜರಾಯಿ ಹಾಗೂ ಸಕ್ಕರೆ ಖಾತೆ ಸಚಿವ ಪ್ರಕಾಶ ಹುಕ್ಕೇರಿ ಪುನರುಚ್ಚರಿಸಿದರು.
ತಾಲೂಕಿನ ಬಮ್ಮನಹಳ್ಳಿ ವಿರಕ್ತಮಠದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ, ಧರ್ಮ ಸಂದೇಶ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರಾಜ್ಯದ ಎಲ್ಲ ಮಠಗಳ ಹಾಗೂ ಮುಜರಾಯಿ ಇಲಾಖೆಯ ದೇವಸ್ಥಾನದ ಆಡಳಿತವನ್ನು ಅಲ್ಲಿಯ ಅರ್ಚಕರು ಪರಿಶುದ್ಧವಾಗಿ ನಡೆಸಿಕೊಂಡು ಹೋಗಲು ಅನುಮತಿ ನೀಡಲಾಗಿದೆ. ರಾಜ್ಯದ ಎಲ್ಲ ಕ್ಷೇತ್ರದ ಮಠ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದ್ದು, ಧಾರ್ಮಿಕ ಕ್ಷೇತ್ರಗಳ ಬೆಳವಣಿಗೆಗೆ ಸದಾ ಕಟಿಬದ್ಧವಾಗಿದೆ ಎಂದರು.
ಹಾನಗಲ್ಲಿನ ವಿರಕ್ತಮಠದ ಆವರಣದಲ್ಲಿ ಲಿಂ. ಕುಮಾರಶಿವಯೋಗಿಗಳವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭರವಸೆ ನೀಡಿದಂತೆ ರು. 60 ಲಕ್ಷ ಬಿಡುಗಡೆಗೊಳಿಸುವುದಾಗಿತಿಳಿಸಿದರು.
ಧರ್ಮ ಸಂದೇಶ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ಮನೋಹರ ತಹಶೀಲ್ದಾರ, ಮಠಮಾನ್ಯಗಳು ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಜಾಗೃತಿ ಮಾಡುತ್ತಿರುವುದು ಪ್ರಶಂಶನೀಯ. ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆ ಇರಬೇಕು. ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಮಾಜದ ಉದ್ಧಾರಕ್ಕಾಗಿ ಕೊಡುಗೆ ನೀಡಿದ ಹಾನಗಲ್ಲ ಲಿಂ. ಶ್ರೀ ಕುಮಾರಶಿವಯೋಗಿಗಳವರ ಕಂಚಿನ ಪುತ್ಥಳಿ ನಿರ್ಮಾಣವನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದ ಅವರು, ಸಾಮೂಹಿಕ ವಿವಾಹಗಳ ಮೂಲಕ ದುಂದುವೆಚ್ಚದ ಮದುವೆಗೆ ಕಡಿವಾಣ ಹಾಕಬೇಕು. ಹಾಗೂ ನಾಗಾಲೋಟದಿಂದ ಹೋಗುತ್ತಿರುವ ಜನಸಂಖ್ಯೆಯ ನಿಯಂತ್ರಣಕ್ಕಾಗಿ ಕುಟುಂಬ ಕಲ್ಯಾಣಯೋಜನೆ ಅಳವಡಿಸಿಕೊಳ್ಳಿ ಎಂದು ನವವಿವಾಹಿತರಿಗೆ ಕರೆ ನೀಡಿದರು.
ಪಟ್ಟಾಧಿಕಾರ ಮಹೋತ್ಸವದ ಕಾರ್ಯಾಧ್ಯಕ್ಷ ಪದ್ಮನಾಭ ಕುಂದಾಪುರ, ಸಾಮೂಹಿಕ ವಿವಾಹ ಸಮಿತಿ ಅಧ್ಯಕ್ಷ ನ್ಯಾಯವಾದಿ ಜಿ.ವಿ. ಕಂಬಾಳಿಮಠ, ಸೋಗಾಜಿ ಪುರೋಹಿತ, ಶಿವನಗೌಡ ಪಾಟೀಲ, ಎಂ.ಎಸ್. ಪಾಟೀಲ, ಲೋಕೇಶಪ್ಪ ಹೊಳಲದ, ಯಾಸೀರಖಾನ ಪಠಾಣ, ಅಣ್ಣ ಬಸವ ನೆಲವಗಿ, ಪ್ರಕಾಶ ಪುರೋಹಿತ, ವಿಷ್ಣುಕಾಂತ ಜಾಧವ , ಬಸವರಾಜ ಹಾದಿಮನಿ, ಕಲವೀರಪ್ಪ ಪವಾಡಿ, ಉಪಸ್ಥಿತರಿದ್ದರು. ಶಿವಾನಂದ ಕ್ಯಾಲಕೊಂಡ ಸ್ವಾಗತಿಸಿದರು. ಶಿವಪ್ರಕಾಶ ಬಳಿಗಾರ ನಿರೂಪಿಸಿ, ವಂದಿಸಿದರು.