ಮನಸ್ಸಿನ ಮಾಲಿನ್ಯ ಶುದ್ಧವಾಗಬೇಕು
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಇಂದು ಕೇವಲ ಪರಿಸರ ಮಾಲಿನ್ಯ ತಡೆಗೆ ಕೋಟ್ಯಂತರ ರುಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಇದಕ್ಕೂ ಮುನ್ನ ಮನಸ್ಸಿನ ಮಾಲಿನ್ಯ ಶುದ್ಧವಾಗುವ ಕಾರ್ಯ ಆಗಬೇಕು ಎಂದು ಶಿರಹಟ್ಟಿ ಫಕ್ಕೀರೇಶ್ವರ ಮಠದ ಜಗದ್ಗುರು ಫಕ್ಕೀರ ಸಿದ್ದರಾಮ ಸ್ವಾಮೀಜಿ ನುಡಿದರು.
ಇಲ್ಲಿಯ ಸಂತ ಶಿಶುನಾಳ ಷರೀಫ ಮಹಾವೇದಿಕೆಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಎರಡನೇ ದಿನವಾದ ಶುಕ್ರವಾರದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮನಸ್ಸಿನ ಮಾಲಿನ್ಯ ಎಲ್ಲದಕ್ಕಿಂತ ಕೆಟ್ಟದ್ದು. ಆದ್ದರಿಂದ ಉತ್ತಮ ವಿಚಾರಗಳನ್ನು ಕೇಳುವ ಮೂಲಕ ಮನಸ್ಸಿನ ಕೊಳೆಯನ್ನು ನಿವಾರಿಸಿಕೊಳ್ಳಬೇಕು. ಲಂಚ ರಹಿತ ಸಮಾಜ ನಿರ್ಮಾಣವಾಗಬೇಕು. ದೇಶಾಭಿಮಾನ ಬೆಳೆಯಬೇಕು. ಹೊಸ್ತಿಲ ಒಳಗಿನದ್ದಷ್ಟೇ ನನ್ನದು ಎಂಬ ಮನೋಭಾವನೆ ಬಿಟ್ಟು ಎಲ್ಲರೂ ನನ್ನವರು ಎಂಬ ವಿಶ್ವಬಂಧುತ್ವ ಬೆಳೆಯಬೇಕು. ಈ ಸಂದೇಶ ಜಗತ್ತಿನಲ್ಲಿ ಹರಿದು ಶಾಂತಿ ನೆಲೆಸಬೇಕು ಎಂದು ಹೇಳಿದರು.
ತರಳಬಾಳು ಹುಣ್ಣಿಮೆ ಎಂದರೆ ಸದ್ಧರ್ಮದ ಪ್ರತೀಕ. ಸಿರಿಗೆರೆಯ ಶಿವಕುಮಾರ ಸ್ವಾಮೀಜಿಗಳು ನೊಂದು ಬಂದವರಿಗೆ ಸಾಂತ್ವನ ಹೇಳುವ ದೇವರಾಗಿದ್ದಾರೆ. ಮಾನವರನ್ನು ತಿದ್ದುವ ಕೆಲಸ ಶ್ರೀಗಳಿಂದ ಆಗುತ್ತಿದೆ. ಈ ಪ್ರೀತಿಯ ಭಾವನೆ ಎಲ್ಲ ಮನೆಗಳಲ್ಲಿ ತುಂಬಬೇಕು. ಆಗ ಎಲ್ಲ ಮನೆಗಳಲ್ಲಿ ಸ್ವರ್ಗ ನೆಲೆಸುತ್ತದೆ ಎಂದು ನುಡಿದರು. ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮಹಿಳೆ ಇಂದು ಯಜಮಾನನ ಮಾತನ್ನೇ ಕೇಳದ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ಮಹಿಳೆ ಸ್ವಾಭಿಮಾನಿಯೂ ಆಗಿದ್ದಾಳೆ. ಬುದ್ಧಿವಂತೆ, ಜವಾಬ್ದಾರಿ ಅರಿತು ಮನೆತನದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸುವ ಶಕ್ತಿ ಇಂದಿನ ಮಹಿಳೆಗಿದೆ. ಆದ್ದರಿಂದ ಅವರನ್ನು ಕೀಳಾಗಿ, ಅಬಲೆಯರೆಂದು ತಿಳಿಯಬಾರದು. ಮಹಿಳೆಯರಿಗೆ ಎಲ್ಲ ರೀತಿಯ ಸ್ಥಾನಮಾನ ಲಭ್ಯವಾಗಬೇಕು ಎಂದು ಹೇಳಿದರು. ತರಳಬಾಳು ಹುಣ್ಣಿಮೆ ಜಗತ್ತಿಗೇ ಬೆಳಕು ನೀಡುವ ಕಾರ್ಯಕ್ರಮವಾಗಿದೆ. ಇದು ನಾಡಿಗೆ ಶಾಂತಿ, ಧರ್ಮದ ಮಾರ್ಗದರ್ಶನ ನೀಡುವ ಹುಣ್ಣಿಮೆ ಇದಾಗಿದೆ ಎದು ನುಡಿದರು.
ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ, ಶಾಸಕ ಬಸವರಾಜ ಬೊಮ್ಮಾಯಿ, ಶಾಸಕ ರುದ್ರಪ್ಪ ಲಮಾಣಿ, ಶಾಂತಲಿಂಗಪ್ಪ, ಸೋಮಣ್ಣ ಬೇವಿನಮರದ, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ದಾವಣಗೆರೆ ವಿವಿ ಕುಲಪತಿ ಬಿ.ಬಿ. ಕಲಿವಾಳ, ಅರವಿಂದ ಜತ್ತಿ ಇತರರು ಇದ್ದರು.