ಯುಥ್ ಕಾಂಗ್ರೆಸ್ ಘಟಕದಿಂದ ಮನವಿ
ಬ್ಯಾಡಗಿ: ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಕಾರ್ಯ ವಿಫಲವಾದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಯುಥ್ ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ. ಮಲ್ಲೂರ ಎಚ್ಚರಿಸಿದರು.
ರಾಷ್ಟ್ರೀಯ ಶಿಕ್ಷಣ ಹಕ್ಕು ಮಾಹಿತಿ ಅಭಿಯಾನದ ಹಿನ್ನೆಲೆಯಲ್ಲಿ ಯುಥ್ ಕಾಂಗ್ರೆಸ್ ತಾಲೂಕು ಘಟಕದಿಂದ ಶುಕ್ರವಾರ ಮೋಟೆಬೆನ್ನೂರಿನ ಬಿಆರ್‌ಇ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಮನವಿಯೊಂದನ್ನು ಸಲ್ಲಿಸಿ ಬಳಿಕ ಮಾತನಾಡಿದರು.
ದೇಶದ ಕಟ್ಟಕಡೆಯ ವ್ಯಕ್ತಿಗೂ ಉನ್ನತ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಹೀಗಿದ್ದರೂ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ಹಕ್ಕು ಉಲ್ಲಂಘನೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಯುಥ್ ಕಾಂಗ್ರೆಸ್ ಘಟಕವು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಂಡಿದೆ ಎಂದರು.
ನ್ಯಾಯವಾದಿ ದಾನನಗೌಡ ಬುಡ್ಡನಗೌಡ್ರ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸದಲ್ಲಿ ಸಿದ್ಧವಾದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ. ಬಡವರಿಗಾಗಿ ಮೀಸಲಿಟ್ಟಿರುವ ಉಚಿತ ಸೀಟುಗಳನ್ನು ಮುಲಾಜಿಲ್ಲದೇ ನೋಂದಣಿ ಮಾಡಿಕೊಳ್ಳುವ ಮೂಲಕ ಅನುಕೂಲ ಕಲ್ಪಿಸುವಂತೆ ಎಚ್ಚರಿಸಿದರು.
ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು ತಾಲೂಕಿನಲ್ಲಿರುವ ಎಲ್ಲ ಅನುದಾನರಹಿತ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು. ನ್ಯಾಯವಾದಿ ಮಹ್ಮದ್‌ಶಫಿ ಮುಲ್ಲಾ, ಮಹ್ಮದ್‌ಹನೀಫ್ ಪಟೇಲ್, ಅಕ್ಬರ್ ವೊಲೋರಾ, ಹುಸೇನ್ ಕೋಡ ಮಕ್ಬುಲಾ ಹಾವೇರಿ ಹಾಗೂ ಇತರರು ಉಪಸ್ಥಿತರಿದ್ದರು.