ಕಾಂಗ್ರೆಸ್ ಆಡಳಿತದಿಂದ ಜನತೆಗೆ ಭ್ರಮನಿರಸನ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 8
ಕೆಜೆಪಿ, ಬಿಜೆಪಿ ಮತಗಳ ವಿಭಜನೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ,ಕಾಂಗ್ರೆಸ್ ಆಡಳಿತ ಜನರಿಗೆ ಭ್ರಮನಿರಸನ ಮಾಡಿದೆ. ಆದ್ದರಿಂದ ಸುಭದ್ರ ಹಾಗೂ ಉತ್ತಮ ಆಡಳಿತಕ್ಕೆ ರಾಜ್ಯದಲ್ಲಿ ಜನರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಅವರನ್ನು ಬೆಂಬಲಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಯುಪಿಎ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಚುನಾವಣಾ ದೃಷ್ಟಿಯಿಂದ ಕೇವಲ 15 ನಿಮಿಷಗಳ ಅವಧಿಯಲ್ಲಿ ಚರ್ಚಿಸುವ ವ್ಯವಧಾನವೂ ಇಲ್ಲದೇ 17 ವಿಧೇಯಕಕ್ಕೆ ಒಪ್ಪಿಗೆ ನೀಡಿದೆ. ದೇಶದ ಆಂತರಿಕ ಹಾಗೂ ಬಾಹ್ಯ ಭದ್ರತೆ ಹದಗೆಟ್ಟಿದೆ. ಸುಭದ್ರ ಭಾರತ ನಿರ್ಮಾಣಕ್ಕೆ ಬಿಜೆಪಿ ಅನಿವಾರ್ಯವಾಗಿದ್ದು, ಮೋದಿ ಅವರ ನೇತೃತ್ವದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಜ್ಯದಲ್ಲಿ ಕೂಡ ನಮ್ಮ ವಿಭಜನೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಸ್ವಂತ ಬಲದಿಂದಲ್ಲ. ಆರ್ಥಿಕ ನಿರ್ವಹಣೆಯಲ್ಲಿ ಸರ್ಕಾರ ಎಡವಿದ್ದು, ಯೋಜನೆಗಳ ಅನುಷ್ಠಾನಕ್ಕೆ ಅನುದಾನ ನೀಡುತ್ತಿಲ್ಲ. ಆರ್ಥಿಕ ದುರ್ಬಲತೆ ಕಂಡುಬರುತ್ತಿದ್ದು, ಸಚಿವರು ಹಾಗೂ ಅಧಿಕಾರಿಗಳ ನಡುವೆ ಸಾಮರಸ್ಯ ಕಾಣುತ್ತಿಲ್ಲ ಎಂದು ಅವರು ಟೀಕಿಸಿದರು.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ದೇಶದಲ್ಲಿ ತೃತೀಯ ರಂಗದಿಂದ ಯಾವ ಪರಿಣಾಮವೂ ಬೀರದು. ಆಮ್ ಆದ್ಮಿ ಕೂಡ ತಾನು ನೀಡಿದ್ದ ಭರವಸೆ ಈಡೇರಿಸಲು ಆಗುತ್ತಿಲ್ಲ. ಕಾಂಗ್ರೆಸ್ನಿಂದ ಬಾಹ್ಯ ಬೆಂಬಲ ಪಡೆದಿದ್ದರಿಂದ ಆಪ್ನಿಂದ ಅಧಿಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ಮೋದಿ ಪ್ರಧಾನಿಯಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಮತದಾರರಿಗೆ ಅರಿವಾಗಿದೆ. ಆದ್ದರಿಂದ ಪಕ್ಷ ಕೂಡ ಈ ನಿಟ್ಟಿನಲ್ಲಿ ಸಂಘಟನೆ ಬಲಪಡಿಸಿ, ಎನ್ಡಿಎ ಸರ್ಕಾರದ ಅವಧಿಯ ಸಾಧನೆ, ಯೋಜನೆಗಳನ್ನು ತಿಳಿಸುವ ಕೆಲಸ ಮಾಡಲಿದೆ. ಹುಬ್ಬಳ್ಳಿಯಲ್ಲಿ ಫೆ. 28ರಂದು ಮೋದಿ ರ್ಯಾಲಿ ಏರ್ಪಡಿಸಲಾಗಿದ್ದು, ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಜಿಲ್ಲಾ ಸಮಾವೇಶವನ್ನು ಫೆ. 13ರಂದು ಹಮ್ಮಿಕೊಳ್ಳಲಾಗಿದೆ ಎಂದು ಉದಾಸಿ ತಿಳಿಸಿದರು.
13ರಂದು ಜಿಲ್ಲಾ ಸಮಾವೇಶ
ಬಿಜೆಪಿ ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಫೆ. 13ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಸಮಾವೇಶದಲ್ಲಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಅನಂತಕುಮಾರ್,
ಮಾಜಿ ಡಿಸಿಎಂಗಳಾದ ಈಶ್ವರಪ್ಪ, ಆರ್. ಅಶೋಕ, ಮಾಜಿ ಸಚಿವರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಪಾಲ್ಗೊಳ್ಳಲಿದ್ದಾರೆ. 25 ಸಾವಿರಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಮಾಜಿ ಶಾಸಕ ನೆಹರೂ ಓಲೇಕಾರ, ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ಗುಡ್ಡನಗೌಡ್ರ ಅಂದಾನಿಗೌಡ್ರ, ಪ್ರಭು ಹಿಟ್ನಳ್ಳಿ ಇತರರು ಇದ್ದರು.