ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಚುನಾವಣೆಗೆ ಸ್ಪರ್ಧಿಸಿದ್ದ ಕಾರ್ಯಕರ್ತೆಯರ ಮರುನೇಮಕಕ್ಕೆ ಚರ್ಚೆ: ಉಮಾಶ್ರೀ

Mainashree
Updated On : 10 Feb 2014, 1:50 am

ಹಾವೇರಿ: ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಅಂಗನವಾಡಿ ಕಾರ್ಯಕರ್ತೆಯರು ತಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ನಗರದಲ್ಲಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮದ ಪ್ರಕಾರ ಚುನಾವಣೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ಪರ್ಧಿಸಿದರೆ ಅವರು ಕಾರ್ಯಕರ್ತೆ ಹುದ್ದೆಗೆ ರಾಜಿನಾಮೆ ನೀಡಬೇಕಾಗುತ್ತದೆ. ಆದರೆ, ಹೀಗೆ ಸ್ಪರ್ಧಿಸಿ ಅನೇಕರು ಸೋತಿದ್ದಾರೆ. ಅಂಥ 113 ಕಾರ್ಯಕರ್ತೆಯರು ಕೆಲಸ ಕಳೆದುಕೊಂಡಿದ್ದು, ಅವರು ತಮ್ಮನ್ನು ಮರು ನೇಮಕ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಖಾಸಗೀಕರಣವಿಲ್ಲ: ಕೇಂದ್ರ ಸರ್ಕಾರ ಅಂಗನವಾಡಿ ಸಶಕ್ತೀಕರಣಗೊಳಿಸಲು ಐಸಿಡಿಎಸ್ ಯೋಜನೆಯನ್ನು ಮಿಶನ್ ಮೋಡ್ ಹೆಸರಿನಲ್ಲಿ ಎನ್‌ಜಿಒ ಮೂಲಕ 12 ಜಿಲ್ಲೆಗಳಲ್ಲಿ ಆರಂಭಿಸಿದೆ. ಆದರೆ, ಅಂಗನವಾಡಿ ಖಾಸಗೀಕರಣದ ಪ್ರಶ್ನೆಯೇ ಇಲ್ಲ. ಯೋಜನೆಯನ್ನು ಸಂಪೂರ್ಣವಾಗಿ ಎನ್‌ಜಿಒಗಳಿಗೆ ವಹಿಸುವ ಪ್ರಶ್ನೆ ಸರ್ಕಾರದ ಮುಂದಿಲ್ಲ. ಈ ಬಗ್ಗೆ ಅನಗತ್ಯ ಕಾರ್ಯಕರ್ತೆಯರು ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಒಂದು ವೇಳೆ ಯೋಜನೆಯಿಂದ ಹಾನಿ ಆಗುತ್ತಿದ್ದರೆ ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಲವು ಬೇಡಿಕೆ ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಬಾರಿ ವೇತನವನ್ನು ರು. 500 ಹೆಚ್ಚಿಸಲಾಗಿದೆ. ಹಣಕಾಸಿನ ಲಭ್ಯತೆ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯದಿಂದ ಬರುವ ಗೌರವಧನವನ್ನು ಒಂದೇ ಬಾರಿ ನೀಡಬೇಕು ಎಂಬ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಲಾಗಿದೆ. ಮುಂದಿನ ಏಪ್ರಿಲ್ ತಿಂಗಳಿಂದ ಎರಡೂ ವೇತನ ಒಂದೇ ಬಾರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಯನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತಿದೆ. ಕಳೆದ ಬಾರಿಯ ಬಜೆಟ್‌ನಲ್ಲಿ ಇಲಾಖೆಗೆ ರು. 2832 ಕೋಟಿ ಅನುದಾನ ನೀಡಲಾಗಿತ್ತು. ಈ ಬಾರಿ ಇನ್ನೂ ರು. 500 ಕೋಟಿ ಹೆಚ್ಚುವರಿ ನೀಡುವಂತೆ ಕೋರಿಕೊಳ್ಳಲಾಗಿದೆ. ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ಬಜೆಟ್‌ನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅಲ್ಲದೆ, ಸ್ವಯಂ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿಯೂ ಈ ಬಾರಿಯ ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement