ಜಗತ್ತಿನ ಶ್ರೇಷ್ಠ ಚಿಂತನೆ, ಪ್ರಥಮಗಳಿಗೆ ಬಸವಣ್ಣ ಕಾರಣ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಜಗತ್ತಿನ ಎಲ್ಲ ಯುದ್ಧಗಳನ್ನು ಬಸವತತ್ವಗಳಿಂದ ನಿಲ್ಲಿಸಲು ಸಾಧ್ಯ. ಜಗತ್ತಿನ ಎಲ್ಲ ಶ್ರೇಷ್ಠ ಚಿಂತನೆಗಳು ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಅಡಗಿದೆ. ವಿಶ್ವದ ಪ್ರಥಮಗಳೆಲ್ಲವುಗಳಿಗೆ ಬಸವಣ್ಣ ಕಾರಣ ಎಂದು ಚಿಂತಕ ಡಾ. ರಂಜಾನ್ ದರ್ಗಾ ಹೇಳಿದರು.
ಶಿಗ್ಗಾಂವಿ ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 4ನೇ ದಿನದ ಕಾರ್ಯಕ್ರಮದಲ್ಲಿ ಅವರು ಕಲ್ಯಾಣ ಕ್ರಾಂತಿ ವಿಷಯ ಕುರಿತು ಉಪನ್ಯಾಸ ನೀಡಿದರು. ಜಗತ್ತಿನ ಅನೇಕ ಪ್ರಥಮಗಳಿಗೆ 12ನೇ ಶತಮಾನದ ಬಸವಾದಿ ಶರಣರ ತತ್ವಗಳು ಕಾರಣವಾಗಿವೆ. ಕಾಯಕ, ಪ್ರಸಾದ, ದಾಸೋಹದಲ್ಲಿ ಜಗತ್ತಿನ ಎಲ್ಲ ಜ್ಞಾನ, ವಿಜ್ಞಾನ ಎಲ್ಲವೂ ಅಡಗಿದೆ. ಪ್ರತಿ ಶಬ್ದಿ ಅನೇಕ ಆಯಾಮಗಳನ್ನು ಹೊಂದಿದೆ ಎಂದರು.
ಜಗತ್ತಿನ ಎಲ್ಲ ಪ್ರಥಮಗಳಿಗೆ ಬಸವಣ್ಣನವರು ಕಾರಣರಾಗಿದ್ದಾರೆ. ವಯಸ್ಕರ ಶಿಕ್ಷಣ ನೀತಿ, ಚಳವಳಿ, ಸಮೂಹ ಪ್ರಜ್ಞೆ, ದುಡಿಯುವ ವರ್ಗ, ಸಮಾನತೆಯ ತತ್ವ ಹೀಗೆ ಎಲ್ಲವುಗಳಿಗೂ ಬಸವಣ್ಣನವರೇ ಜನಕರಾಗಿದ್ದಾರೆ. ಸಂವಿಧಾನದ ಪರಿಕಲ್ಪನೆ ಜಗತ್ತಿಗೆ ಕೊಟ್ಟಿದ್ದೇ ಬಸವಣ್ಣನವರು. ಬಸವಾದಿ ಶರಣರು ರಚಿಸಿದ ವಚನಗಳೆಲ್ಲವೂ ಸಂವಿಧಾನದ ಅಂಶಗಳನ್ನು ಒಳಗೊಂಡಿವೆ. ಮಾನವ ಹಕ್ಕುಗಳ ಜನಕ, ಸ್ತ್ರೀಯರಿಗೆ ಶಿಕ್ಷಣ ನೀಡಿದ ಜನಕ ಬಸವಣ್ಣನವರಾಗಿದ್ದಾರೆ ಎಂದರು.
ಬಸವಣ್ಣನವರ ಅನುಭವ ಮಂಟಪ ಮೀರಿಸುವ ಸಂಸತ್ ಇನ್ನೂ ಜಗತ್ತಿನಲ್ಲಿ ರಚನೆಗೊಂಡಿಲ್ಲ. ಎಲ್ಲ ವರ್ಗದ ಪ್ರತಿನಿಧಿಗಳು ಅಲ್ಲಿದ್ದರು. ದುಡಿಯುವ ವರ್ಗದ ಮೊದಲ ಸಾಹಿತ್ಯ ರಚನೆ ಮೊದಲು ಆಗಿದ್ದೇ ಶರಣರಿಂದ. ಶ್ರಮವರ್ಗದವರೂ ಸಹ ವಚನ ಸಾಹಿತ್ಯ ರಚಿಸಿದರು. ಶರಣ ಸಂಕುಲದಲ್ಲಿ ಪ್ರತಿ ಜೀವಿಗೂ ಸಾಮಾಜಿಕ ನಿಧಿಯನ್ನು ಸಂಗ್ರಹಿಸಿ ಶಿವನಿಧಿ ಮಾಡಿ ಸಮಾಜೋದ್ಧಾರಕ್ಕೆ ಬಳಸಿದರು. ಬಸವಣ್ಣ ಜಗತ್ತಿನ ದೊಡ್ಡ ಅರ್ಥಶಾಸ್ತ್ರಜ್ಞರೂ ಆಗಿದ್ದರು ಎಂದರು.
ಬಸವಣ್ಣನವರು ಮಾನವ ಹಕ್ಕು, ಸಂವಿಧಾನದ ಪರಿಕಲ್ಪನೆ, ಸಮುದಾಯದ ಸಮೂಹ ನಾಯಕತ್ವದ ಪರಿಕಲ್ಪನೆ ಜಗತ್ತಿಗೆ ಕೊಟ್ಟಿದ್ದಾರೆ ಎಂದರು. ದೇಶದ ಮಹಾಗ್ರಂಥಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಳೆ (ತೇಜಸ್ಸು) ಇರುತ್ತದೆ ಎಂದು ಸುಳ್ಳು ಹೇಳಲಾಗಿದೆ. ಆದರೆ ಪ್ರತಿಯೊಬ್ಬ ಮನುಷ್ಯನಿಗೆ ಒಂದೇ ರೀತಿಯ ತೇಜಸ್ಸು ಇರುತ್ತದೆ ಎಂದು ಅಂದೇ ಬಸವಣ್ಣನವರು ಸಾರಿದ್ದಾರೆ. ಇದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಬಸವತತ್ವಗಳೆಲ್ಲವೂ ವೈದಿಕ ತತ್ವಗಳಿಗೆ ನೂರಕ್ಕೆ ನೂರರಷ್ಟು ವಿರುದ್ಧವಾಗಿತ್ತು. ಆದ್ದರಿಂದ ಶೇ. 90ರಷ್ಟು ವಚನಗಳನ್ನು ಸುಟ್ಟು ಹಾಕಲಾಯಿತು. ತನ್ಮೂಲಕ ಬಸವಣ್ಣನವರ ಕ್ರಾಂತಿ ಹತ್ತಿಕ್ಕಲು ವೈದಿಕರಿಂದ ಪ್ರತಿ ಕ್ರಾಂತಿ ಮಾಡಲಾಯಿತು. ಆದರೆ, ಆ ಉದ್ದೇಶ ಈಡೇರಿಲ್ಲ. ಈಗಲೂ ಕಲ್ಯಾಣ ಕ್ರಾಂತಿ ಎಲ್ಲರಿಗೂ ಹೊಸ ಚೈತನ್ಯ ತುಂಬುತ್ತಿದೆ ಎಂದರು.
ಸಿರಿಗೆರೆ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಸವಣೂರು ಕಲ್ಮಠದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಸ್ವಾಮೀಜಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಶಾಸಕರಾದ ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ಗೋವಿಂದ ಕಾರಜೋಳ, ಸಿ.ಎಂ. ಉದಾಸಿ, ಸೋಮಣ್ಣ, ಸಾಹಿತಿ ರಾಘವೇಂದ್ರ ಪಾಟೀಲ, ಡಾ. ಬಿ.ವಿ. ವಸಂತಕುಮಾರ್ ಇತರರು ಇದ್ದರು.