ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ
ಬ್ಯಾಡಗಿ: ಕ್ರಿಯಾಶೀಲ ಶಿಕ್ಷಕರಿಂದ ಸಮಾಜ ಜಾಗೃತಗೊಳ್ಳಲಿದ್ದು, ಸೌಜನ್ಯಪರ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಸಂಸ್ಕಾರಕ್ಕೆ ನಾಂದಿ ಹಾಡುವಂತೆ ಪ್ರೊ. ಡಾ. ಪಿ.ಟಿ. ಲಕ್ಕಣ್ಣನವರ ಕರೆ ನೀಡಿದರು.
ಭಾನುವಾರ ಪಟ್ಟಣದ ನೂತನ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳ ಬದುಕು ಮತ್ತು ಭವಿಷ್ಯವನ್ನು ರೂಪಿಸಬೇಕಾದ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಶಿಕ್ಷಕರು ಅಂಕಗಳಿಗೆ ಪ್ರಾಧಾನ್ಯತೆ ನೀಡದೇ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಅಳವಡಿಸಬೇಕಾಗಿದೆ ಎಂದರು.
ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಮಕ್ಕಳಿಗೆ ವಿದ್ಯಾರ್ಜನೆ ಮಾಡುವ ಸ್ನೇಹಿತರ ಅಭಿಲಾಷೆಯಂತೆ ನೂತನ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಯಿತು.
ಸರ್ಕಾರದ ಯಾವುದೇ ಸಹಾಯಧನ ಪಡೆಯದೇ ಕೇವಲ ನಿರ್ದೇಶಕರ ಸಹಕಾರದಿಂದ ಕಟ್ಟಡ ನಿರ್ಮಿಸಲಾಗಿದ್ದು, ಫಲಿತಾಂಶದಿಂದ ಪಾಲಕರು ಪ್ರೇರಣೆಯಾಗಿ ಮಕ್ಕಳನ್ನು ಇಲ್ಲಿ ಸೇರಿಸಿದ್ದಾರೆ ಎಂದರು. ಸಾರ್ಥಕ ಸಾಧನೆಯ 10 ವರ್ಷಗಳನ್ನು ಪೂರೈಸಿದ್ದು, ಬೋಧಕ ಸಿಬ್ಬಂದಿಯ ಸಹಕಾರದಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತಿದೆ. ಪಠ್ಯೇತರ ಚಟುವಟಿಕೆಗಳಲ್ಲೂ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಎಲ್ಲ ನಿರ್ದೇಶಕರಿಗೆ ಖುಷಿ ತಂದಿದೆ ಎಂದರು. ಚೈತ್ರಾ ಬಿದರಕಟ್ಟಿ, ಪೂಜಾ ಹಿರೇಗೌಡರ, ಪ್ರಕಾಶ ಫಕ್ಕೀರಣ್ಣವರ ಇನ್ನಿತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಂ.ಜೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕುಮಾರಗೌಡ ಪಾಟೀಲ, ಮಲ್ಲಿಕಾರ್ಜುನ ಮೇಲ್ಮುರಿ, ನಾಗರಾಜ ಕುಳೇನೂರ, ಬಿ.ಎಂ. ಹೊಸಮನಿ, ಮಲ್ಲಣ್ಣ ಮೂಡ್ವಿ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಬಿ.ಸಿ. ಆಶಾರಾಣಿ ಸ್ವಾಗತಿಸಿದರು. ಪಿ.ಸಿ. ಸುನೀತಾ ನಿರೂಪಿಸಿದರು, ಅಲಿ ವಂದಿಸಿದರು.