ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 10 Feb 2014, 1:50 am

14ರಂದು ಪ್ರತಿಭಟನೆ
ರಾಣಿಬೆನ್ನೂರು:  ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯನ್ನು ಆಯ್ಕೆ ಮಾಡುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು, ಸರ್ಕಾರದ ನಿಯಮ ಗಾಳಿಗೆ ತೂರಿ, ಸ್ಥಳೀಯರನ್ನು ಹೊರತುಪಡಿಸಿ ಅನರ್ಹರನ್ನು ಆಯ್ಕೆ ಮಾಡಿದ್ದಾರೆಂದು ಆರೋಪಿಸಿ, ಸಿಡಿಪಿಒ ವರ್ತನೆಯನ್ನು ಖಂಡಿಸಿ ಫೆ. 14ರಂದು ಸಿಡಿಪಿಒ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಕಜ್ಜರಿ ಗ್ರಾಮಸ್ಥರು ತಿಳಿಸಿದ್ದಾರೆ. ತಾಲೂಕಿನ ಕಜ್ಜರಿ ಗ್ರಾಮದ 5ನೇ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆಯನ್ನು ಆಯ್ಕೆ ಮಾಡುವುದಕ್ಕಾಗಿ ಕಳೆದ ವರ್ಷ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಆಹ್ವಾನಿಸಿದ್ದ ಕಾರಣ ಸ್ಥಳೀಯ ನಿವಾಸಿಗಳಾಗಿದ್ದ ಕೆಲವರು ಅರ್ಜಿಗಳನ್ನು ಹಾಗೂ ಎಲ್ಲ ಮೂಲ ದಾಖಲಾತಿಗಳನ್ನು ಸಲ್ಲಿಸಿದ್ದರು. ಸ್ಥಳೀಯರನ್ನು ಮಾತ್ರ ಆಯ್ಕೆ ಮಾಡುವುದಾಗಿ ತಿಳಿಸಿದ್ದ ಅಧಿಕಾರಿಗಳು ಸರ್ಕಾರದ ನಿಯಮವನ್ನು ಮತ್ತು ಆಯ್ಕೆ ಸಮಿತಿಯವರ ಮಾರ್ಗದರ್ಶನವನ್ನು ಧಿಕ್ಕರಿಸಿ, ಅನರ್ಹರನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಪ್ರತಿಭಟನೆಗೆ ಮುಂದಾಗಿರುವುದಾಗಿ ಕಜ್ಜರಿ ಗ್ರಾಮಸ್ಥರಾದ ನಾಗಪ್ಪ ಮಲ್ಲಪ್ಪ ಮೋಟೇಬೆನ್ನೂರು, ನಾಗಪ್ಪ ವಡ್ಡರ, ಹೊಸರೆಪ್ಪ ನಿಂಬಣ್ಣನವರ, ನಿಂಗಪ್ಪ ಶಿಡಗನಾಳ, ಅಶೋಕ ಭಜಂತ್ರಿ, ದುಂಡೆಪ್ಪ ಕನ್ನಮ್ಮನವರ ಸೇರಿದಂತೆ ಇತರರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆಯಿಂದ ನಾಟಕ ಪ್ರದರ್ಶನ
ರಾಣಿಬೆನ್ನೂರು: ಎಸ್‌ಜೆಎಂವಿ ಮಹಿಳಾ ಮಹಾವಿದ್ಯಾಲಯ ರಾಣಿಬೆನ್ನೂರು ಹಾಗೂ ಜಮುರಾ ಕಲಾ ಲೋಕ ಮುರುಘಾಮಠ ಚಿತ್ರದುರ್ಗ ಸಂಯುಕ್ತಾಶ್ರಯದಲ್ಲಿ ಫೆ. 11 ಮತ್ತು 12ರಂದು ಸಂಜೆ 6.30ಕ್ಕೆ ನಗರದ ಮಾನ್ವಿ ಕಂಪನಿ ರಸ್ತೆಯಲ್ಲಿರುವ ಕಾಲೇಜಿನ ಬೈಲು ರಂಗ ಮಂದಿರದಲ್ಲಿ ಜಮುರಾ ಸುತ್ತಾಟ ನಾಟಕಗಳ ಪ್ರಯೋಗ ನಡೆಯಲಿವೆ. ಫೆ. 11ರಂದು ಸಂಜೆ 6.30ಕ್ಕೆ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ರಚನೆಯ ಹಾಗೂ ಮಹದೇವ ಹಡಪದರ ನಿರ್ದೇಶನದ ತಲ್ಲಣಿಸದಿರು ಕಂಡ್ಯಾ ತಾಳು ಮನವೆ. ಫೆ. 12ರಂದು ಡಾ. ಶಿವಮೂರ್ತಿ ಮುರುಘಾ ಶರಣರ ರಚನೆಯ ಹಾಗೂ ಮಹದೇವ ಹಡಪದರ ನಿರ್ದೇಶನದ ಮೌಢ್ಯ ಬಿಡಿ ನಂಬಿಕೆ ಇಡಿ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ. ಶಾಸಕ ಕೆ.ಬಿ. ಕೋಳಿವಾಡ ನಾಟಕ ಉದ್ಘಾಟಿಸುವರು. ಡಿವೈಎಸ್ಪಿ ಶಿವಶಂಕರ ಗಡಾದ, ಎಸ್‌ಜೆಎಂ ವಿದ್ಯಾಪೀಠದ ನಿರ್ದೇಶಕ ಬಿ.ಎನ್. ಪಾಟೀಲ  ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.
ಚುಸಾಪಗೆ ಗುಡ್ಡಪ್ಪ ಆಯ್ಕೆ
ಹಾವೇರಿ: ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ಗುಡ್ಡಪ್ಪ ಚಟ್ರಮ್ಮನವರ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ಸಂಕಮ್ಮ ಜಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಳೇನೂರ ಮಾದರಿ ಗ್ರಾಮ: ಸದಾಶಿವ ಸ್ವಾಮೀಜಿ
ಹಾವೇರಿ:  ಪಕ್ಷಾತೀತವಾಗಿ, ಜಾತ್ಯತೀತವಾಗಿ ಯಾವುದೇ ಕಾರ್ಯವನ್ನಾದರೂ ಒಗ್ಗಟ್ಟಿನಿಂದ ಯಶಸ್ವಿ ಮಾಡುವ ಮೂಲಕ ಕುಳೇನೂರ ಗ್ರಾಮವು ಮಾದರಿ ಗ್ರಾಮವಾಗಿದೆ. ಇಂತಹ ಗ್ರಾಮದಲ್ಲಿ ಮಹಿಳಾ ಮಹಾವಿದ್ಯಾಲಯದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ ನಡೆಯುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕುಳೇನೂರ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯವು ಹಮ್ಮಿಕೊಂಡಿರುವ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಮಾತನಾಡಿ, ಶಿಬಿರಾರ್ಥಿನಿಯರು ಸೇವೆಯನ್ನು ನಿಸ್ವಾರ್ಥದಿಂದ ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡಬೇಕು. ಹಿರಿಯರನ್ನು ಗೌರವಿಸಬೇಕು. ಕೃಷಿಕರನ್ನು ಹಾಗೂ ಕೃಷಿ ಸಂಸ್ಕೃತಿಯನ್ನು ಪ್ರೀತಿಸಬೇಕು. ಗ್ರಾಮೋದ್ಧಾರದಲ್ಲಿ ದೇಶದ ಅಭಿವೃದ್ಧಿ ಇದೆ ಎಂದು ಹಿತೋಪದೇಶ ನೀಡಿದರು.
ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಚೇರ್‌ಮನ್ ಪಿ.ಡಿ. ಶಿರೂರ, ಚನ್ನಬಸಪ್ಪ ನಿಟಗಿನಕೊಪ್ಪ, ಸಿ.ಬಿ. ಶೀಗಿಹಳ್ಳಿಯವರು ಪ್ರಾಚಾರ್ಯರಾದ ಎಸ್.ಬಿ. ಅಣ್ಣಿಗೇರಿ ಪಾಲ್ಗೊಂಡಿದ್ದರು. ಡಾ. ಸವಿತಾ.ಎಸ್. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಸುರೇಶ.ಪಿ. ಹಿರೇತನದ ಸ್ವಾಗತಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಸುಧಾ ಸಂಗಾಪುರ ವಂದಿಸಿದರು. ಬಿ.ಎನ್. ಗಡ್ಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement