ಇಂದಿನಿಂದ ಪಂಚಕಲ್ಯಾಣ ಮಹೋತ್ಸವ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 10
ಭಗವಾನ ಶ್ರೀ 1008 ನೇಮಿನಾಥಸ್ವಾಮಿ ಚತುರ್ಮುಖ ಜಿನಬಿಂಬದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ, ಭಗವಾನ ಆದಿನಾಥಸ್ವಾಮಿ, ನೇಮಿನಾಥಸ್ವಾಮಿ ಜಿನಮಂದಿರಗಳ ಧಾಮ ಸಂಪ್ರೋಕ್ಷಣಾ ಮಹೋತ್ಸವ, ನೂತನ ಮಾನಸ್ಥಂಭೋಪರಿ ಕಾರ್ಯಕ್ರಮ ಫೆ. 11ರಿಂದ 13ರವರೆಗೆ ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪ ಹಾಗೂ ದಿಗಂಬರ ಜೈನ ಮಂದಿರದಲ್ಲಿ ನಡೆಯಲಿವೆ.
ನಗರದ ದಿಗಂಬರ ಜೈನ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು, ಫೆ. 11ರಂದು ಜೈನ ಮಂದಿರದಲ್ಲಿ ಗರ್ಭಕಲ್ಯಾಣ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 5 ಗಂಟೆಯಿಂದ ಸುಪ್ರಭಾತ ಸ್ತೋತ್ರ, ಧ್ವಜಾರೋಹಣ, ಯಜಮಾನರ ಆಗಮನ, ಯಜಮಾನ, ಇಂದ್ರ ಪ್ರತಿಷ್ಠಾ, ಆನೆಯ ಮೇಲೆ ಮಂಗಳ ಕುಂಭ ತರುವ ಕಾರ್ಯಕ್ರಮ. ಬೆಳಗ್ಗೆ 8ಕ್ಕೆ ಧಾರವಾಡದ ಸುಲೋಚನ ಸಿಂಹಸೇನ ಅವರಿಂದ ಆದಿನಾಥಸ್ವಾಮಿ ಗರ್ಭಗುಡಿ ಉದ್ಘಾಟನೆ, ಬೆಳಗ್ಗೆ 10 ಗಂಟೆಗೆ ವಾಸ್ತುಪೂಜಾ ವಿಧಾನ, ನವಗೃಹ ಶಾಂತಿ, ಪಂಚಕುಂಭ ವಿನ್ಯಾಸ, ಮೃತಿಕಾ ಸಂಗ್ರಹಣೆ, ಅಂಕುರಾರ್ಪಣೆ, ಯಾಗಮಂಡಲಾರಾಧನೆ ನಡೆಯಲಿದೆ ಎಂದರು.
ಅಂದು ಬೆಳಗ್ಗೆ 9 ಗಂಟೆಗೆ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಧ್ವಜಾರೋಹಣ, ಮಂಟಪ ಉದ್ಘಾಟನೆ, ವೇದಿಪ್ರತಿಷ್ಠೆ, ಮಂಗಲಕಲಶ ಸ್ಥಾಪನೆ, ದೀಪಪ್ರಜ್ವಲನೆ, ಜಿನಬಿಂಬ ಸ್ಥಾಪನೆ, ಪಂಚಾಮೃತ ಅಭಿಷೇಕ, ಶಾಂತಿ ಮಂತ್ರ ಹಾಗೂ ಪೀಠ ಯಂತ್ರಾರಾಧನೆ ನಂತರ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ. ಧಾರವಾಡ ಎಸ್ಡಿಎಂನ ಪದ್ಮಲತಾ ನಿರಂಜನಕುಮಾರ ಉದ್ಘಾಟಿಸುವರು. ಪುಷ್ಪಾ ಕಳಸೂರ ಅಧ್ಯಕ್ಷತೆ ವಹಿಸುವರು. ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕೇಸರಿ ರತ್ನರಾಜಯ್ಯ, ದಾವಣಗೆರೆ ಜೈನಮಿಲನದ ಅಧ್ಯಕ್ಷೆ ಪದ್ಮಾ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 3ಕ್ಕೆ ಧರ್ಮಸಭೆ ನಡೆಯಲಿದ್ದು, ಮುನಿಶ್ರೀ ಪುಣ್ಯಸಾಗರ ಮಹಾರಾಜರು ಸಾನ್ನಿಧ್ಯ, ಸೋದಾ ಜೈನಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸುವರು. ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಉದ್ಘಾಟಿಸುವರು. ವಸಂತ ಹೊಂಬಣ್ಣನವರ ಅಧ್ಯಕ್ಷತೆ ವಹಿಸುವರು. ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಗರ್ಭ ಕಲ್ಯಾಣ, ರಾತ್ರಿ 8ಕ್ಕೆ ಯೋಗಿ ನೇಮಿನಾಥ ನಾಟಕ, ನೃತ್ಯ ಕಾರ್ಯಕ್ರಮ ನಡೆಯುವವು ಎಂದರು.
ಫೆ. 12ರಂದು ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 5ಕ್ಕೆ ಜನ್ಮಕಲ್ಯಾಣ-ದೀಕ್ಷಾ ಕಲ್ಯಾಣ, ಸುಪ್ರಭಾತ ಸ್ತೋತ್ರ, ಜಿನ ಬಾಲಕನ ಜನನ, ಲಘು ಜನ್ಮಾಭಿಷೇಕ, ದೇವೆಂದ್ರ ಶಚಿದೇವಿಯರು ಆನೆಯ ಮೇಲೆ ಜಿನಬಾಲಕನನ್ನು ಕರೆತಂದು ಪಾಂಡುಕ ಶಿಲೆಯ ಮೇಲೆ ಜನ್ಮಾಭಿಷೇಕ ಹಾಗೂ ನೃತ್ಯ, ಮಧ್ಯಾಹ್ನ 12ಗಂಟೆಗೆ ವೃತೋಪದೇಶ, 2ಕ್ಕೆ ನಾಮಕರಣ, ಬಾಲಕ್ರೀಡೆ, 3ಕ್ಕೆ ಯುವರಾಜ್ಯಾಭಿಷೇಕ ಮತ್ತು ಪಟ್ಟಾಭಿಷೇಕ, ಸಂಜೆ 5ಕ್ಕೆ ವೈರಾಗ್ಯ ದೀಕ್ಷಾವಿಧಿ, ಪರಿನಿಷ್ಕ್ರಮಣ ಕಲ್ಯಾಣ ವೃತೋಪದೇಶ ನಡೆಯುವುದು. ಸಂಜೆ 7ಕ್ಕೆ ಧರ್ಮಸಭೆ ನಡೆಯಲಿದ್ದು, ಸೋಂದಾ ಜೈನಮಠದ ಭಟ್ಟಾಕಲಂಕ ಭಟ್ಟಾರಕ, ತಮಿಳುನಾಡು ಅರಹಂತಗಿರಿಯ ಧವಳಕೀರ್ತಿ ಭಟ್ಟಾರಕರು, ಲಕ್ಷ್ಮೀಸೇನ ಭಟ್ಟಾರಕ, ಭುವನಕೀರ್ತಿ ಭಟ್ಟಾರಕ, ಧರ್ಮಸೇನ ಭಟ್ಟಾರಕ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯವಹಿಸುವರು. ಹಂಪ ನಾಗರಾಜಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಮಹಾವೀರ ಲಕ್ಷ್ಮೀಪುರ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ಯು.ಬಿ. ಬಣಕಾರ, ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನೆಹರೂ ಓಲೇಕಾರ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ನಂತರ ಮಾನಸ್ಥಂಬ ನಾಟಕ, ನೃತ್ಯ ಕಾರ್ಯಕ್ರಮ ನಡೆಯಲಿವೆ.
ಫೆ. 13ರಂದು ಬೆಳಗ್ಗೆ ಕೇವಲ ಜ್ಞಾನ ಕಲ್ಯಾಣ-ಮೋಕ್ಷ ಕಲ್ಯಾಣ ಕಾರ್ಯಕ್ರಮ ಬೆಳಗ್ಗೆ 5ರಿಂದ ನಡೆಯಲಿವೆ. 7 ಗಂಟೆಗೆ ಸಮವಸರಣ ಪೂಜೆ, 8ಕ್ಕೆ ನೇಮಿನಾಥ
ತೀರ್ಥಂಕರರ ವಿಹಾರ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. 11ಕ್ಕೆ ಜೈನ ಮಂದಿರದಲ್ಲಿ ಸಿದ್ಧಚಕ್ರ ಯಂತ್ರಾರಾಧನೆ, ಅಗ್ನಿತ್ರಯಾರ್ಯನಾಪೂರ್ವಕ ನಿರ್ವಾಣ ಕಲ್ಯಾಣ ಪೂಜೆ ನಡೆಯಲಿದೆ. ಮಧ್ಯಾಹ್ನ 12-30ಕ್ಕೆ ನೂತನ ಮಾನಸ್ಥಂಬದಲ್ಲಿ ನೇಮಿನಾಥ ಸ್ವಾಮಿ ಚತುರ್ಮುಖ ಜಿನಬಿಂಬ ಪ್ರತಿಷ್ಠಾಪನೆ, ಮಾನಸ್ಥಂಭ ಶಿಖರ ಕಳಸಾರೋಹಣ, ಶಾಂತಿಸಾಗರ ಪಾದುಕೆ ಸ್ಥಾಪನೆ, ಮಹಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಕಲ್ಯಾಣ ಮಂಟಪದಲ್ಲಿ ಧರ್ಮಸಭೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಪುಣ್ಯಸಾಗರ ಮಹಾರಾಜರು, ದಿಂಗಾಲೇಶ್ವರ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಧರ್ಮಸ್ಥಳ ಸುರೇಂದ್ರಕುಮಾರ ಹೆಗ್ಗಡೆ ಉದ್ಘಾಟಿಸುವರು. ಶ್ರೀಕಾಂತ ಬ್ರಹ್ಮರಾವ್ ಕಳಸೂರ ಅಧ್ಯಕ್ಷತೆ ವಹಿಸುವರು. ವಿಕ್ಟೋರಿಯಾ ಆಸ್ಪತ್ರೆಯ ಡಾ. ಕಾಂತರಾಜ ಜೆ., ಶಾಸಕರಾದ ಡಿ. ಸುಧಾಕರ, ರುದ್ರಪ್ಪ ಲಮಾಣಿ, ಮನೋಹರ ತಹಸೀಲ್ದಾರ್, ಮಾಜಿ ಶಾಸಕ ಇಲಕಲ್ಲ ವಿಜಯಕುಮಾರ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 6ಕ್ಕೆ ಜೈನ ವೀರ ಮಹಿಳೆಯರ ವೇಷಭೂಷಣ, ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಪುಣ್ಯಸಾಗರ ಮಹಾರಾಜರು ತಿಳಿಸಿದರು.
ಜೈನ ಸಮಾಜದ ಪ್ರಮುಖರಾದ ಸಿ.ಎನ್. ಕಳಸೂರ, ಭರತರಾಜ ಹಜಾರೆ, ಎನ್. ವಜ್ರಕುಮಾರ ಇತರರು ಇದ್ದರು.