ಕಾಂಗ್ರೆಸ್ ದುರಾಡಳಿತದಿಂದ ಅಭದ್ರತೆ
ಬ್ಯಾಡಗಿ: ಬದ್ಧತೆಯಿಲ್ಲದೇ ಆಡಳಿತ ನಡೆಸಿದ ಕಾಂಗ್ರೆಸ್ನಿಂದ ದೇಶ ದಯನೀಯ ಸ್ಥಿತಿಗೆ ತಲುಪಿದೆ. ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಮಾಜಿ ಸಚಿವ ಸಿ.ಎಂ. ಉದಾಸಿ ಕೋರಿದರು.
ಸೋಮವಾರ ಪಟ್ಟಣದ ಮುಪ್ಪಿನೇಶ್ವರ ಮಠದಲ್ಲಿ ಜರುಗಿದ ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ 10 ವರ್ಷ ಕಾಂಗ್ರೆಸ್ ನಡೆಸಿದ ದುರಾಡಳಿತದಿಂದ ದೇಶ ಆಂತರಿಕ ಭದ್ರತೆಯನ್ನು ಕಳೆದುಕೊಂಡಿದ್ದು, ನರೇಂದ್ರ ಮೋದಿಯಂತಹ ಸಮರ್ಥ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ದೇಶ ಬಂದಿದೆ. ಗುಜರಾತ್ನಲ್ಲಾಗಿರುವ ಅಭಿವೃದ್ಧಿ ಕಾರ್ಯ ವಿಶ್ವಕ್ಕೆ ಮಾದರಿಯಾಗಿದ್ದು, ಮೋದಿ ಪ್ರಧಾನಿಯಾದರೆ ಅದೇ ಮಾದರಿ ದೇಶದ ಅಭಿವೃದ್ಧಿ ಮಾಡುವ ವಿಶ್ವಾಸವಿದೆ ಎಂದರು.
ಯುಪಿಎ ಸರ್ಕಾರ ಪ್ರಧಾನಿ ಮನಮೋಹನ್ಸಿಂಗ್ ಒಬ್ಬ ಉತ್ತಮ ಅರ್ಥಶಾಸ್ತ್ರಜ್ಞನನ್ನು ಪ್ರಧಾನಿಯನ್ನಾಗಿ ಮಾಡಿದ್ದರೂ ಸತತ 10 ವರ್ಷ ಅಧಿಕಾರ ನಡೆಸಿದರೂ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಅಗ್ಗದ ಯೋಜನೆಗಳಿಂದ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪಾಠ ಕಲಿಸಲು ಜನತೆ ಸಜ್ಜಾಗಿದ್ದಾರೆ ಎಂದರು. ನಮ್ಮಲ್ಲಿರುವ ಒಡಕಿನ ಲಾಭ ಪಡೆದ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಆದರೆ ಕಳೆದ 8 ತಿಂಗಳಲ್ಲಿ ಕಾಂಗ್ರೆಸ್ ನಡೆಸಿದ ದುರಾಡಳಿತದಿಂದ ಮತ ನೀಡಿದವರೇ ಪಶ್ಚಾತ್ತಾಪ ಪಡುವಂತಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಸರ್ಕಾರ ಆಡಳಿತ ನಡೆಸುತ್ತಿದೆಯೇ? ಎಂಬ ಸಂಶಯ ವ್ಯಕ್ತವಾಗುತ್ತಿದೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ನಕ್ಸಲ್ ಸಮಸ್ಯೆ, ಭಯೋತ್ಪಾದಕರ ಅಟ್ಟಹಾಸದಿಂದ ದೇಶವು ನಲುಗಿದೆ. ಅಮಾಯಕರ ಸಾವು ನೋವಿಗೆ ಕಾರಣರಾದವರಿಗೆ ಕಾಂಗ್ರೆಸ್ ರಾಜಾಶ್ರಯ ನೀಡುತ್ತಿದೆ. ನರೇಂದ್ರ ಮೋದಿಯವರ ಅಭಿವೃದ್ಧಿಯ ಭಯ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದ್ದು, ಅಧಿಕಾರಕ್ಕಾಗಿ ಅವರ ವೈಯಕ್ತಿಕ ಜೀವನದ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ ಮಾತನಾಡಿ, ದೇಶವು ಆರ್ಥಿಕವಾಗಿ ದಿವಾಳಿಯಾಗಿದ್ದು, ಅಳಿವಿನಂಚಿಗೆ ಬಂದಿದೆ. ಇದರಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಿದೆ. ವಿಶ್ವದ ಐದನೇ ಜನಪ್ರಿಯ ವ್ಯಕ್ತಿಯಾಗಿರುವ ಮೋದಿಯನ್ನು ಗೆಲ್ಲಿಸುವ ಮೂಲಕ ರಾಷ್ಟ್ರದ ಗೌರವವನ್ನು ಕಾಪಾಡುವಂತೆ ಕರೆ ನೀಡಿದರು.
ರಾಮಣ್ಣ ಉಕ್ಕುಂದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಭೋಜರಾಜ ಕರೂದಿ, ರಾಜೇಂದ್ರ ಹಾವೇರಣ್ಣವರ, ಶಂಕ್ರಣ್ಣ ಮಾತನವರ, ವಿರೂಪಾಕ್ಷಪ್ಪ ಬಳ್ಳಾರಿ, ಶಿವಕುಮಾರ ಮುದ್ದಪ್ಪಳವರ, ಮುರಿಗೆಪ್ಪ ಶೆಟ್ಟರ, ಜಗದೀಶ ಕಣಗಲಭಾವಿ, ರವೀಂದ್ರ ಪಟ್ಟಣಶೆಟ್ಟಿ, ಶಿವಬಸಪ್ಪ ಕುಳೇನೂರ, ನಾಗರಾಜ ಬಳ್ಳಾರಿ, ಸುರೇಶ ಯತ್ನಳ್ಳಿ, ರಾಮಣ್ಣ ಕೋಡಿಹಳ್ಳಿ, ಮುನ್ನಾ ಎರೆಶೀಮಿ, ಮುಕ್ತಿಯಾರ್ ಮುಲ್ಲಾ, ಪ್ರಶಾಂತ್ ಯಾದವಾಡ, ಅಜೀಜ್ ಬಿಜಾಪುರಿ, ವಿಜಯ ಬಳ್ಳಾರಿ, ಸುರೇಶ ಅಸಾದಿ ಇನ್ನಿತರರು ಉಪಸ್ಥಿತರಿದ್ದರು.