ಸೌಲಭ್ಯಕ್ಕಾಗಿ ಅರ್ಚಕರ ಪ್ರತಿಭಟನೆ, ಮನವಿ
ಬ್ಯಾಡಗಿ: ಅರ್ಚಕರ ಮಕ್ಕಳಿಗೆ ಆಗಮಶಾಲೆ, ಅರ್ಚಕ ಭವನ, ವಿದ್ಯಾರ್ಥಿ ನಿಲಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಸ್ಥಳೀಯ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಸರ್ಕಾರದ ನೀತಿ ಖಂಡಿಸಿ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರುದ್ರಯ್ಯ ಸಾಲಿಮಠ, ದೇವಸ್ಥಾನಗಳ ಅರ್ಚಕರಿಗೆ ಗುರುತಿನ ಚೀಟಿ, ಆಶ್ರಯ, ಕನಿಷ್ಠ ವೇತನ, ವಸತಿ ಸೇರಿದಂತೆ ವಿವಿಧ ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಾಧ್ಯಕ್ಷ ಶಿವಕುಮಾರ ಸರವಂದ ಮಾತನಾಡಿ, ಕೂಡಲೇ ಅರ್ಚಕರ ಸಂಘದ ಸದಸ್ಯರ ಪದಾಧಿಕಾರಿಗಳ ಸಭೆ ನಡೆಸಿ, ಬೇಡಿಕೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದರು. ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದರೆ ತಾಲೂಕಾಡಳಿತದ ಎದುರು ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಶಾಂತವೀರಯ್ಯ ಹಿರೇಮಠ, ಮಲ್ಲೇಶಪ್ಪ ಪೂಜಾರ, ಸುರೇಶ ಆಚಾರ್ಯ ಹಾಗೂ ಪದಾಧಿಕಾರಿಗಳಾದ ಮಂಜಪ್ಪ ಪೂಜಾರ, ಬಸವರಾಜ ಬಳಿಗಾರ, ವೀರಭದ್ರಯ್ಯ ಕಚವಿಮಠ, ಮೂಕಪ್ಪ ಪೂಜಾರ, ವಿರೂಪಾಕ್ಷಪ್ಪ ಪೂಜಾರ, ಹೊನ್ನಪ್ಪ ತಡಸ ಹಾಗೂ ಇನ್ನಿತರರಿದ್ದರು.