ಜಲಸಂರಕ್ಷಣೆಗೆ ಆದ್ಯತೆ ನೀಡದಿದ್ದರೆ ಅಪಾಯ
ಶಿಗ್ಗಾಂವಿ: ಅಂತರ್ಜಲ ಕುಸಿದಿರುವುದರಿಂದ ಕೊಳವೆಬಾವಿಗಳಲ್ಲಿ ಶುದ್ಧ ನೀರು ಖಾಲಿಯಾಗಿ ಲವಣಾಂಶದ ನೀರು ಬರುತ್ತಿದೆ. ಇದನ್ನು ಕುಡಿಯುತ್ತಿರುವುದರಿಂದ ಫ್ಲೋರೋಸಿಸ್ ಎಂಬ ಏಡ್ಸ್ಗಿಂತ ಮಹಾಮಾರಿಯಾದ ರೋಗ ಬರುತ್ತಿದೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಂಡು ಜಲಸಂರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯವಿದೆ ಎಂದು ಜಲಸಂರಕ್ಷಣಾ ತಜ್ಞ ಎನ್.ಜೆ. ದೇವರಾಜ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಶಿಗ್ಗಾಂವಿ ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭೂಮಿಯಲ್ಲಿ ಅಂತರ್ಜಲ ಖಾಲಿಯಾಗಿ ಅಶುದ್ಧ ನೀರು ಬರುತ್ತಿದ್ದರೂ ಬೋರ್ವೆಲ್ ಕೊರೆಸುವ ಭರಾಟೆ ನಿಲ್ಲುತ್ತಿಲ್ಲ. ಈಗ ಫ್ಲೋರೈಡ್ ನೀರು ಬರುತ್ತಿದೆ. ಮುಂದೆ ರಕ್ತ ಬಂದರೂ ಅಚ್ಚರಿ ಪಡಬೇಕಿಲ್ಲ ಎಂದರು.
ಇಂದು ಬಾಟಲಿ ನೀರು ಕುಡಿಯುವ ಫ್ಯಾಶನ್ಗೆ ಜನ ಮಾರುಹೋಗುತ್ತಿದ್ದಾರೆ. ಬಾಟಲಿ ನೀರು ಸರಬರಾಜಿನಲ್ಲಿ ಭಾರತ ಜಗತ್ತಿನಲ್ಲಿ 10ನೇ ಸ್ಥಾನದಲ್ಲಿದೆ. ಲೀಟರ್ ನೀರನ್ನು ಜನರಿಗೆ ತಲುಪಿಸಲು ರು. 2.85 ಖರ್ಚು ಮಾಡುವ ಕಂಪನಿಗಳಿಗೆ ರು. 20 ನೀಡಿ ಜನರು ಕಂಪನಿ ಬೆಳೆಸುತ್ತಿದ್ದಾರೆ. ಬಾಟಲಿ ನೀರಲ್ಲಿ ಓಜೋನ್ ಮತ್ತು ಡಯಾಕ್ಸೈಡ್ ಗ್ಯಾಸ್ ತುಂಬಿರುವುದರಿಂದ ಕ್ಯಾನ್ಸರ್ನಂತಹ ರೋಗ ಅಂಟಿಕೊಳ್ಳುವುದು ನಿಶ್ಚಿತ ಎಂದರು.
ಮಳೆ ನೀರು ಶುದ್ಧವಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಗಮನಹರಿಸಬೇಕಿದೆ. ಅತಿ ಹೆಚ್ಚು ನದಿ, ಕೆರೆಕಟ್ಟೆಗಳನ್ನು ಹೊಂದಿರುವ ದೇಶದಲ್ಲಿ ಅಂತರ್ಜಲ ಕುಸಿತದಿಂದ ಇಲ್ಲಿವರೆಗೆ 1.82 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಸಮೀಕ್ಷೆ ಪ್ರಕಾರ 11 ಲಕ್ಷ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಭೂಮಿಗೆ ನೀರು ಇಂಗಿಸುವ ಕ್ರಿಯೆಯನ್ನು ಜನರು ಮರೆತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ನಿಶ್ಚಿತ ಎಂದರು. ಧಾರವಾಡ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಿರಿಗೆರೆ ಮಠದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇ ಉತ್ತಮ ವ್ಯಕ್ತಿಯಾಗಲು ಕಾರಣ. ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಸರ್ವಧರ್ಮದ ಸಮ್ಮಿಲನವಾಗಿದೆ ಎಂದು ಹೇಳಿದರು.