ಜಾತಿ ವಿಷ ಬೀಜ ಕಿತ್ತೆಸೆಯಿರಿ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಇಂದಿನ ದಿನದಲ್ಲಿ ಜಾತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅಸಾಧ್ಯವಾದ ಮಾತು. ಆದರೆ, ಜಾತಿಯ ವಿಷ ಬೀಜ ಹಾಗೂ ಜಾತಿಯೆಂಬ ಸರ್ಪದ ವಿಷದ ಹಲ್ಲನ್ನು ತೆಗೆಯಬಹುದಾಗಿದ್ದು, ಅದನ್ನು ಎಲ್ಲ ಮಠಗಳು ಒಂದಾಗಿ ಮಾಡಬೇಕಿದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 6ನೇ ದಿನವಾದ ಮಂಗಳವಾರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಮಾಜದಲ್ಲಿ ಸಾಕಷ್ಟು ಜಾತಿಗಳಿವೆ. ಜಾತಿ, ಪಂಗಡಗಳಿಗೆ ಮಠಗಳಿವೆ. ಯಾವ ಬಸವಣ್ಣನವರು ಜಾತಿ ನಿರ್ಮೂಲನೆಗೆ ಪ್ರಯತ್ನಿಸಿದರೋ ಅಲ್ಲೇ ಅನೇಕ ಪಂಗಡಗಳು ಹುಟ್ಟಿಕೊಂಡಿವೆ. ವ್ಯಾವಹಾರಿಕವಾಗಿ ಇಂದಿನ ಪರಿಸ್ಥಿತಿಯಲ್ಲಿ ಜಾತಿಯ ಸಂಪೂರ್ಣ ನಿರ್ಮೂಲನೆ ಕಷ್ಟಸಾಧ್ಯ. ಆದರೆ ಜಾತಿಯ ವಿಷ ಬೀಜಗಳನ್ನು ತೆಗೆಯಬಹುದಾಗಿದ್ದು, ಆ ಕಾರ್ಯವನ್ನು ಎಲ್ಲ ಮಠಗಳು ಒಂದಾಗಿ ಮಾಡಿದರೆ ಜಾತಿಗಳ ಮಧ್ಯೆ ಸಾಮರಸ್ಯ ಮೂಡಲು ಸಾಧ್ಯ. ಯಾವುದನ್ನು ಕಾನೂನಿನಿಂದ ಮಾಡಲು ಸಾಧ್ಯವಿಲ್ಲವೋ ಜನರ ಭಕ್ತಿ ಭಾವದ ಮೂಲಕ ಸಾಮರಸ್ಯ ಮೂಡಿಸುವ ಕೆಲಸ ಮಠಗಳಿಂದ ಆಗುತ್ತಿದೆ ಎಂದು ನುಡಿದರು. ಆದಿಚುಂಚನಗಿರಿಯ ಹಿಂದಿನ ಪೀಠಾಧಿಪತಿ ಬಾಲಗಂಗಾಧರಶ್ರೀಗಳ ಬಗ್ಗೆ ತಮಗೆ ಅಪಾರ ಗೌರವವಿತ್ತು. ಅವರೊಂದಿಗೆ ಅವಿನಾಭಾವ ಸಂಬಂಧವಿತ್ತು. ಈಗಿನ ಶ್ರೀಗಳೂ ಅದೇ ರೀತಿಯ ಗೌರವ ಹೊಂದಿದ್ದಾರೆ. ಎಲ್ಲ ಮಠಗಳೂ ಒಂದಾದಲ್ಲಿ ಸಮಾಜದ ಓರೆಕೋರೆ ತಿದ್ದುವ ಕಾರ್ಯ ಸುಲಭವಾಗಲಿದೆ ಎಂದು ಹೇಳಿದರು. ಸುಂದರ ಸುಳ್ಳು ಜೀವನವಾದರೆ ದಾರುಣ ಸತ್ಯ ಮರಣ. ಇವೆರಡರ ಮಧ್ಯದ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದು ಸತ್ಯವಾಗಿದ್ದು, ಹುಟ್ಟು ಹಾಗೂ ಸಾವು ಯಾರ ಕೈಯಲ್ಲೂ ಇಲ್ಲ. ಆದ್ದರಿಂದ ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದ ಅವರು, ನೀರು ವ್ಯರ್ಥ ಮಾಡಬೇಡಿ. ಜವಾಬ್ದಾರಿಯಿಂದ ಬಳಕೆ ಮಾಡಿಕೊಳ್ಳಬೇಕು. ಶರೀರವನ್ನು ಧರ್ಮ ಕಾರ್ಯ ಮಾಡಲು ಬಳಸಿಕೊಳ್ಳಬೇಕು ಎಂದು ನುಡಿದರು.
ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಆದಿಚುಂಚನಗಿರಿ ಮಠಕ್ಕೂ ಸಿರಿಗೆರೆಗೂ ಅವಿನಾಭಾವ ಸಂಬಂಧವಿದೆ. ಬಾಲಗಂಗಾಧರ ಸ್ವಾಮೀಜಿ ದೈವಾಧೀನರಾದ ಬಳಿಕ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಶ್ರೀಗಳಲ್ಲಿ ನಾವು ಮಾತೃ ಸ್ವರೂಪ ಕಾಣುತ್ತಿದ್ದೇನೆ. ಇಂಥ ಸ್ವಾಮೀಜಿಗಳನ್ನು ಪಡೆದ ನಾವೇ ಧನ್ಯರು. ಬಾಲಗಂಗಾಧರಶ್ರೀ ಹಾಗೂ ಸಿರಿಗೆರೆ ಶ್ರೀಗಳ ನಡುವೆ ಉತ್ತಮ ಒಡನಾಟವಿತ್ತು. ತರಳಬಾಳು ಹುಣ್ಣಿಮೆ ಮಹೋತ್ಸವವು ಕಲೆ, ಸಾಹಿತ್ಯ, ಸಂಸ್ಕೃತಿ, ವಿಜ್ಞಾನ ಎಲ್ಲವೂ ಮೇಳೈಸಿದ ಕಾರ್ಯಕ್ರಮವಾಗಿದೆ. ಧರ್ಮ, ವೈಚಾರಿಕತೆ ಮೇಳೈಕೆ ಹುಣ್ಣಿಮೆ ಕಾರ್ಯಕ್ರಮದ ಮೂಲಕ ಆಗಿದೆ ಎಂದರು. ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ತರಳಬಾಳು ಹುಣ್ಣಿಮೆ ನಮ್ಮನ್ನು ನಾವು ನೋಡಿಕೊಳ್ಳುವ ಕಾರ್ಯಕ್ರಮವಾಗಿದೆ. ಜೀವನ ಮಾರ್ಗಗಳನ್ನು ಕಲಿಯುವಂಥ ಉತ್ತಮ ವೇದಿಕೆ ಇದಾಗಿದೆ. ಬೇರೆಯವರು ಹೇಗಿದ್ದಾರೆ ಎಂಬುದರ ಬಗ್ಗೆ ಚಿಂತಿಸದೇ ನಮ್ಮ ನಡೆ ನುಡಿಯನ್ನು ಈ ಕಾರ್ಯಕ್ರಮದ ಮೂಲಕ ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು. ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನ್ಯಾ. ಶಿವರಾಜ ಪಾಟೀಲ, ಶಾಸಕರಾದ ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ಎಚ್.ಪಿ. ರಾಜೇಶ, ಎಂಎಲ್ಸಿ ಸೋಮಣ್ಣ ಬೇವಿನಮರದ, ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಉಪಾಧ್ಯಕ್ಷೆ ಶೋಭಾ ನಿಸ್ಸೀಮಗೌಡ್ರ, ಅಜ್ಜಂಪೀರ ಖಾದ್ರಿ, ಅಂಬಳಿಕೆ ಹಿರಿಯಣ್ಣ, ದೇವರಾಜ ರೆಡ್ಡಿ, ಬಿ.ಎಂ. ಹನೀಫ್, ಮಂಜುನಾಥ ಆಲೂರ ಇತರರು ಇದ್ದರು.