ಜಾತ್ಯತೀತ ಸಮಾಜಕ್ಕೆ ಸರ್ವರೂ ಮುಂದಾಗಿ
ರಾಣಿಬೆನ್ನೂರು: ಧಾರ್ಮಿಕ ಶ್ರದ್ಧಾ ಕೇಂದ್ರಗಳು ಶೋಷಣೆಯ ಕೇಂದ್ರಗಳಾಗದಂತೆ ನೋಡಿಕೊಳ್ಳುವುದು ಸಮಸ್ತ ಮಠಾಧೀಶರ ಕರ್ತವ್ಯವಾಗಿದ್ದು, ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಸರ್ವರೂ ಮುಂದಾಗಬೇಕೆಂದು ರಾಜನಹಳ್ಳಿ ವಾಲ್ಮೀಕಿ ಸಂಸ್ಥಾನ ಪೀಠದ ಪ್ರಸನ್ನಾನಂದಪುರಿ ಸ್ವಾಮಿಗಳು ನುಡಿದರು.
ತಾಲೂಕಿನ ಹಿರೇಬಿದರಿ ಗ್ರಾಮದ ವಿವಿಧ ದೇವಸ್ಥಾನಗಳ ಸಮಿತಿಯವರು ಮತ್ತು ಗ್ರಾಮದ ಸಮಸ್ತ ನಾಗರಿಕರೆಲ್ಲಾ ಒಂದಾಗಿ ಅಭಿವೃದ್ಧಿ ಪಡಿಸಿರುವ ಬೆಟ್ಟದ ಮಲ್ಲಿಕಾರ್ಜುನ, ಗಂಗಾ ಪರಮೇಶ್ವರಿ, ಅಂಬಾಡೇಶ್ವರಿ, ವಾಲ್ಮೀಕಿ (ಬೇಡರ ಕಣ್ಣಪ್ಪ), ಮಡಿವಾಳ ಮಾಚಯ್ಯ, ಚೌಡೇಶ್ವರಿ ದೇವಸ್ಥಾನಗಳ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹಗಳ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅವರು ಮಾತನಾಡಿದರು.
ಮಾನವ ತನ್ನ ಜೀವನೋಪಾಯಕ್ಕಾಗಿ ಮಾಡುತ್ತಿರುವ ಕಾಯಕದಿಂದ ಜಾತಿಯವರಾಗಿ ಗುರುತಿಸಿಕೊಂಡಿದ್ದು 12ನೇ ಶತಮಾನದಲ್ಲಿ ಅವತರಿಸಿದ್ದ ಶರಣರು ತಾವು ಮಾಡುತ್ತಿರುವ ಕಾಯಕದಲ್ಲಿ ದೇವರನ್ನೆ ಕಂಡಿರುವ ಕಾರಣ ಅವರೆಲ್ಲಾ ಇಂದಿಗೂ ಸ್ಮರಣೀಯರಾಗಿದ್ದಾರೆ. ಅವರು ಹಾಕಿಕೊಟ್ಟಿರುವ ಧರ್ಮ ಮಾರ್ಗದಲ್ಲಿ ನಡೆಯುವುದರೊಂದಿಗೆ ಮಾನವ ಕುಲದಲ್ಲಿ ಜನಿಸಿದ ನಾವೆಲ್ಲರೂ ಧನ್ಯರಾಗಲು ಮುಂದಾಗೋಣ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಧರ್ಮದ ರಕ್ಷಣೆಗೆ ಮುಂದಾಗಬೇಕು. ಧರ್ಮ ರಕ್ಷಣೆಯ ಜವಾಬ್ದಾರಿ ಹೊಂದಿರುವ ಮಠಾಧೀಶರು ಭಕ್ತರಲ್ಲಿ ಉತ್ತಮ ಮನೋಭಾವನೆಗಳನ್ನು ಬಿತ್ತಿ ಬೆಳೆಯಬೇಕು. ನವ ದಂಪತಿಗಳು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವಂತಹ ಮಕ್ಕಳಿಗೆ ಜನ್ಮ ನೀಡುವುದರೊಂದಿಗೆ ವಿದ್ಯಾವಂತರನ್ನಾಗಿಸಲು ಮುಂದಾಗಬೇಕು ಎಂದು ರಾಜನಹಳ್ಳಿ ಶ್ರೀಗಳು ನುಡಿದರು.
ಹರಿಹರದ ವೀರಶೈವ ಪಂಚಮಸಾಲಿ ಚರಪೀಠಾಧಿಪತಿ ಡಾ. ಸಿದ್ಧಲಿಂಗ ಸ್ವಾಮಿಗಳು, ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಗುರುಪೀಠದ ಚನ್ನಯ್ಯ ಸ್ವಾಮಿಗಳು, ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ಐರಣಿ ಹೋಳಿಮಠದ ಗುರು ಬಸವರಾಜ ದೇಶಿಕೇಂದ್ರ ಸ್ವಾಮಿಗಳು, ಕರ್ಕಿಹಳ್ಳಿಯ ಮೃತ್ಯುಂಜಯೇಶ್ವರ ಕ್ಷೇತ್ರದ ಸಂತಶ್ರೇಷ್ಠ ಸುರೇಶ ಗುರುಮಹಾರಾಜರು, ರಾಣಿಬೆನ್ನೂರು ಸಿದ್ಧಾರೂಢ ಮಠದ ಮಲ್ಲಯ್ಯಜ್ಜ ಸ್ವಾಮಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಾಸಕ ಕೆ.ಬಿ. ಕೋಳಿವಾಡ, ಮಾಜಿ ಶಾಸಕ ಜಿ.ಶಿವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೋಳಿಬಸನಗೌಡ ಪಾಟೀಲ, ಬಸವರಾಜ ಕುಮರಿ, ನಾಗಪ್ಪ ಕಾಡಜ್ಜಿ, ದಿಳ್ಳೆಪ್ಪ ಓಲೇಕಾರ, ಬಸವರಾಜ ಮಳವಳ್ಳಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿಮಿತ್ತ 32 ಜೋಡಿ ನವ ವಿವಾಹಿತರು ನವ ಜೀವನಕ್ಕೆ ಪಾದಾರ್ಪಣೆ ಮಾಡಿದರು.