ಧರ್ಮ ಮಾರ್ಗದಲ್ಲಿ ನಡೆದರೆ ಪುಣ್ಯ: ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ
ಹಿರೇಕೆರೂರು: ಭಾರತ ದೇಶ ಪುಣ್ಯಭೂಮಿ. ಇಲ್ಲಿ ನೆಲೆಸಿರುವ ನಾವೆಲ್ಲರೂ ಧರ್ಮ ಮಾರ್ಗದಲ್ಲಿ ಜೀವನ ಸಾಗಿಸುವದರೊಂದಿಗೆ ಪುಣ್ಯ ಸಂಪಾದಿಸಬೇಕು. ಈ ನಿಟ್ಟಿನಲ್ಲಿ ಶರಣರ ಅದರ್ಶ ಅಳವಡಿಸಿಕೊಂಡು ನಡೆದರೆ ದೇಶ ಇನ್ನಷ್ಟು ಬಲಗೊಳ್ಳಲು ಸಾಧ್ಯವಿದೆ ಎಂದು ಉಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ ಜಗದ್ಗುರು ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಮಹೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ, ದಾನಿಗಳಿಗೆ ಗುರುರಕ್ಷೆ ಕಾರ್ಯಕ್ರಮದ ಅಂಗವಾಗಿ ಜರುಗಿದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಧಾರ್ಮಿಕ ತಳಹದಿಯಲ್ಲಿ ಶರಣರ ಕಾಯಕ ತತ್ವದಡಿಯಲ್ಲಿ ಕ್ರಿಯಾಶೀಲರಾಗಿ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ದ್ವೇಷ ಅಸೂಯೆ ದೂರ ತಳ್ಳಬೇಕು. ಪರೋಪಕಾರ ಗುಣದಿಂದ ಎಲ್ಲರೂ ದೊಡ್ಡವರಾಗಬೇಕು. ಅಂದಾಗ ಎಲ್ಲರೂ ಸ್ವಾವಲಂಬಿಗಳಾಗಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುತ್ತಾರೆಯೋ ಅಲ್ಲಿ ಸುಖ ಸಮೃದ್ಧಿ ಇರುತ್ತದೆ ಎಂದರು.
ಶಾಸಕ ಯು.ಬಿ. ಬಣಕಾರ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಲಿಂಗದಳ್ಳಿ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಅತಿಥಿಗಳಾಗಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಷಣ್ಮುಖಯ್ಯ ಸಾಲಿಮಠ, ಬಸವರಾಜ ಬಳಿಗಾರ, ಗಂಗಾಧರ ಮಲೇಬೆನ್ನೂರ, ಉಮೇಶಪ್ಪ ಬಿದರಿ, ಪರಮೇಶ್ವರಪ್ಪ ಹಲಗೇರಿ, ಬಸವಣ್ಣೆಪ್ಪ ವಡಕಪ್ಪನವರ, ದಾನಯ್ಯ ಹಿರೇಮಠ ಉಪಸ್ಥಿತರಿದ್ದರು.