ಸಕ್ಕರೆ ಕಾಯಿಲೆ ಇದ್ದರೂ ಸುಖಕರ ಜೀವನ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ದೇಹ ದಂಡನೆ, ನಿಯಮಿತ ಆಹಾರ ಪದ್ಧತಿ ಅಳವಡಿಸಿಕೊಂಡು ಮಾನಸಿಕ ಒತ್ತಡದಿಂದ ಮುಕ್ತರಾದರೆ, ಸಕ್ಕರೆ ಕಾಯಿಲೆ ಇದ್ದರೂ ಸುಖಕರ ಜೀವನ ನಡೆಸಬಹುದು ಎಂದು ಸಕ್ಕರೆ ಕಾಯಿಲೆ ತಜ್ಞ ದಾವಣಗೆರೆಯ ಡಾ. ಮಂಜುನಾಥ ಆಲೂರ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಕ್ಕರೆ ಕಾಯಿಲೆಯೊಂದಿಗೆ ಸುಖಕರ ಜೀವನ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು. ಸಕ್ಕರೆ ಕಾಯಿಲೆ ಒಂದು ಕಾಯಿಲೆಯೇ ಅಲ್ಲ. ಆದರೆ, ಅಲಕ್ಷ್ಯ ಮಾಡಿದರೆ ಅದರಷ್ಟು ಕ್ರೂರಿಯೂ ಮತ್ತೊಂದಿಲ್ಲ. ಮಧುಮೇಹ ಕಾಯಿಲೆ ಬಂದವರು ಯಾಕೆ ಸಕ್ಕರೆ ತಿನ್ನಬಾರದು. ಯಾಕೆ ಕಾಯಿಲೆ ಬಂತು ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಶೇ. 95ರಷ್ಟು ಜನರಿಗೆ ಅನುವಂಶೀಯವಾಗಿ ಬರುತ್ತದೆ. ಮನೆತನದಲ್ಲಿ ಯಾರಿಗೂ ಈ ಕಾಯಿಲೆಯಿಲ್ಲ ಎಂದರೆ ಬರುವ ಸಾಧ್ಯತೆ ಕಡಿಮೆ. ಕಟ್ಟುನಿಟ್ಟಿನ ಜೀವನ ಪದ್ಧತಿ ನಡೆಸುತ್ತಿದ್ದರೂ ಬರುತ್ತದೆ. ಆದರೆ, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾಡಿಕೊಳ್ಳುವ ಅಗತ್ಯವಿಲ್ಲ. ಇಂಥ ತಪ್ಪು ಕಲ್ಪನೆ ಬೇಡ ಎಂದು ಹೇಳಿದರು.
ಸಕ್ಕರೆ ದೇಹಕ್ಕೆ ಬೇಕಾದ ವಸ್ತು. ದೇಹ ಚೆನ್ನಾಗಿರಲು ಸಕ್ಕರೆ ಅಂಶ ಬೇಕು. ಗಿಡಕ್ಕೆ ನೀರು ಬೇಕು. ಆದರೆ, ಗಿಡ ಮುಳುಗುವವರೆಗೆ ಹಾಕಿದರೆ ಕೊಳೆಯುತ್ತದೆ. ಹಾಗೆಯೇ ಸಕ್ಕರೆ ಅತಿಯಾದರೆ ದೇಹಕ್ಕೆ ತೊಂದರೆ. ಆಹಾರ ಮಿತಿ ಮೀರಿದರೆ, ದೇಹಕ್ಕೆ ಸರಿಯಾದ ದಣಿವು ಇಲ್ಲದಿರುವುದು ಹಾಗೂ ಮಾನಸಿಕ ಒತ್ತಡವೇ ಕಾಯಿಲೆ ಬರಲು ಕಾರಣ. ಊಟವನ್ನೇ ಮಾಡದಿದ್ದರೂ ಸಕ್ಕರೆ ಪ್ರಮಾಣ ದೇಹದಲ್ಲಿ ಬರುತ್ತದೆ. ಆಗ ದೇಹದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚುತ್ತದೆ. ಮಾನಸಿಕ ಒತ್ತಡ ಹೆಚ್ಚಿದರೆ ಸಕ್ಕರೆ ಕಾಯಿಲೆ ನಿಯಂತ್ರಿಸುವುದು ಕಠಿಣ. ಈ ಕಾಯಿಲೆಯ ಮೋಸ ಎಂದರೆ ವರ್ಷಗಟ್ಟಲೆ ಗುಳಿಗೆ ತೆಗೆದುಕೊಳ್ಳದಿದ್ದರೂ ಮೇಲ್ನೋಟಕ್ಕೆ ಹಾಗೇ ಇರುತ್ತಾರೆ. ಇದರಿಂದ ಅನೇಕರು ತೊಂದರೆಗೊಳಗಾಗುತ್ತಿದ್ದಾರೆ. ಆರಂಭದ ಸ್ಥಿತಿಯಲ್ಲಿ ಉದಾಸೀನ ಮಾಡಿದರೂ ಯಾವ ದುಷ್ಪರಿಣಾಮವೂ ಕಾಣದು. ನಂತರ ಕಾಯಿಲೆ ಉಲ್ಭಣಗೊಳ್ಳುತ್ತ ಹೋಗುತ್ತದೆ. ಅಲಕ್ಷ್ಯ ಮಾಡಿದರೆ ಅಪಾಯ ಎಂದು ಅವರು ತಿಳಿಸಿದರು. ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಲು ಬಿಡಬಾರದು. ಆಗ ಸುಖಕರ ಜೀವನ ನಡೆಸಬಹುದು. ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇರಬೇಕು. ಕಾಯಿಲೆಗೆ ಗಮನ ನೀಡಿದರೆ ಸುಖಕರವಾಗಿರಬಹುದು. ಕಾಯಿಲೆ ಅದುಮಿಡಲು ದೃಢ ಮನಸ್ಸು ಬೇಕು. ಕಾಯಿಲೆ ಒಪ್ಪಿಕೊಂಡು ಏನೂ ತೊಂದರೆಯಾಗುವುದಿಲ್ಲ ಎಂದುಕೊಂಡರೆ ಅರ್ಧ ಕಾಯಿಲೆ ಹೋದಂತೆಯೇ. ಆಹಾರದಲ್ಲಿ ತರಕಾರಿ, ಸೊಪ್ಪು, ಬೇಳೆ ಪ್ರಮಾಣ ಜಾಸ್ತಿ ಮಾಡಿದರೆ ನಿಯಂತ್ರಣಕ್ಕೆ ತರಬಹುದು. ಆದರೆ ಆಲೂಗಡ್ಡೆ ಮಾತ್ರ ನಿಷಿದ್ಧವಿರಲಿ. ತುಪ್ಪ, ಬೆಣ್ಣೆ, ಕೆನೆ ಈ ಜೀವನಕ್ಕೇ ಕೊನೆಯಾಗಬೇಕು. ವೈದ್ಯರು ಸಲಹೆ ಮಾಡಿದ ಔಷಧಿ, ಗುಳಿಗೆಯನ್ನು ಸರಿಯಾಗಿ ತೆಗೆದುಕೊಳ್ಳಬೇಕು. ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡರೆ ಸಕ್ಕರೆ ಕಾಯಿಲೆ ಇದ್ದರೂ ಸುಖಕರ ಜೀವನ ಸಾಗಿಸಬಹುದು. ಆರೋಗ್ಯದ ಕಡೆ ಲಕ್ಷ್ಯ ಬೇಕು ಎಂದು ಅವರು ಹೇಳಿದರು.