ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಿರಿಗೆರೆ ಸ್ವಾಮೀಜಿ ಸಮಾಜಕ್ಕೆ ಮಾದರಿ: ಕೋಳಿವಾಡ

Mainashree
Updated On : 12 Feb 2014, 1:45 am

ಸಂತ ಶಿಶುನಾಳ ಶರೀಫ ಮಹಾವೇದಿಕೆ, ಶಿಗ್ಗಾಂವಿ: ವ್ಯಾಜ್ಯಗಳನ್ನು ಬಗೆಹರಿಸುವ ಮೂಲಕ ನ್ಯಾಯ ಪಂಚಾಯ್ತಿ ನಡೆಸುತ್ತಿರುವ ಸಿರಿಗೆರೆ ಶ್ರೀಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ. ಜೊತೆಗೆ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ಕಾಳಜಿ ಮೆರೆಯುತ್ತಿದ್ದಾರೆ. ಶ್ರೀಗಳು ಹಾವೇರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು ಎಂದು ಶಾಸಕ ಕೆ.ಬಿ. ಕೋಳಿವಾಡ ವಿನಂತಿಸಿದರು. ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 6ನೇ ದಿನವಾದ ಮಂಗಳವಾರದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಕಾರ್ಯಕ್ರಮದಲ್ಲಿ ಸಾಮಾಜಿಕ ಸಾಮರಸ್ಯ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಪತ್ರಕರ್ತ ಬಿ.ಎಂ.ಹನೀಫ್ ಅನ್ನದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ವೀರಶೈವ ಧರ್ಮ ಜಗತ್ತಿನ ಗಮನ ಸೆಳೆದಿದೆ ಎಂದರು. ಪ್ರಾಣಿಗಳಲ್ಲಿ ಇಲ್ಲದ ಜಾತಿ ಪದ್ಧತಿ ಮನುಷ್ಯರಲ್ಲಿ ಇರುವುದು ದುರ್ದೈವ. ಸಾಮಾಜಿಕ ಸಾಮರಸ್ಯ ಹಾಳಾಗಲು ಕಾರಣವಾಗಿರುವ ಜಾತಿ ಪದ್ಧತಿ ನಿರ್ಮೂಲನೆಗೆ ಶರಣರ ಸಂದೇಶಗಳೇ ದಾರಿದೀಪ. ಸಂತರು, ಶರಣರು ಲೌಕಿಕ ಜೀವನಕ್ಕಿಂತ ಅಧ್ಯಾತ್ಮಿಕ ಲೋಕದ ಒಲವು ಹೊಂದಿದ್ದರು. ಸಂತರ ಮಾತು ಕೇಳದ ಕೆಲ ಧರ್ಮಾಂಧರು ಧರ್ಮದ ಅರ್ಥವನ್ನು ತಮ್ಮ ಮೂಗಿನ ನೇರಕ್ಕೆ ಬಳಸುತ್ತಿದ್ದಾರೆ ಎಂದರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಅಂಬಳಿಕೆ ಹಿರಿಯಣ್ಣ ಮಾತನಾಡಿ, ಸಿರಿಗರೆ ಸಂಸ್ಥಾನದಿಂದ ಏರ್ಪಡಿಸಿರುವ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಜ್ಞಾನ ನೀಡುವ ಕಾರ್ಯಕ್ರಮವಾಗಿದೆ. ಹುಣ್ಣಿಮೆ ಮಹೋತ್ಸವ ನಾಡ ಹಬ್ಬವಾಗಲಿ ಎಂದು ಹೇಳಿದರು. ಸಿರಿಗೆರೆ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಶಾಸಕ ಬಸವರಾಜ ಬೊಮ್ಮಾಯಿ, ವಿಶ್ರಾಂತ ನ್ಯಾ. ಶಿವರಾಜ ಪಾಟೀಲ ಇತರರು ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement