ಹೆದ್ದಾರಿ ಅಭಿವೃದ್ಧಿಗೆ ಅನುದಾನ
ಹಾನಗಲ್ಲ: ಸದೃಢ ರಸ್ತೆ, ಸುವ್ಯವಸ್ಥಿತ ಸಂಚಾರಕ್ಕಾಗಿ ರಾಜ್ಯಾದ್ಯಂತ 5 ಸಾವಿರ ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ ಎಂದು ಸಕ್ಕರೆ, ಮುಜರಾಯಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದರು.
ಹಾನಗಲ್ಲ ತಾಲೂಕಿನ ಚಿಕ್ಕಾಂಶಿ-ಹೊಸೂರಿನಲ್ಲಿ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಹಾಗೂ ತಿಳವಳ್ಳಿ ಗ್ರಾಮ ವ್ಯಾಪ್ತಿಯ ಜಿಲ್ಲಾ ಮುಖ್ಯ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನಲ್ಲಿ ರು. 10 ಕೋಟಿ ವೆಚ್ಚದಲ್ಲಿ ಬೀರೂರ-ಸಮ್ಮಸಗಿ ಹಾಗೂ ರು. 17 ಕೋಟಿ ವೆಚ್ಚದಲ್ಲಿ ಬೆಳಗಾಲಪೇಟೆ-ಹೊಂಕಣ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಾವೇರಿ ಜಿಲ್ಲೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಬೇಡಿಕೆಗಳಿಗನುಗುಣವಾಗಿ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಾಮಾಣಿಕ ಪ್ರಯತ್ನದಿಂದ ಹಂತ ಹಂತವಾಗಿ ಕಾಮಗಾರಿಗಳನ್ನು ಪೂರೈಸಲಾಗುವುದು ಎಂದರು.
ತಿಳವಳ್ಳಿ ಜಿಪಂ ಕ್ಷೇತ್ರದಲ್ಲಿ ನೀರಾವರಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸುವ ಮೂಲಕ ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಿದರು. ಅಲ್ಲದೆ ಚಿಕ್ಕಾಂಶಿ-ಹೊಸೂರ ಗ್ರಾಮಕ್ಕೆ ಪ್ರಥಮ ದರ್ಜೆ ಕಾಲೇಜು ಮಂಜೂರಿಗಾಗಿ ಶಿಕ್ಷಣ ಸಚಿವರಿಗೆ ಮನವಿ ಮಾಡಿರುವುದಾಗಿ ಅವರು ತಿಳಿಸಿದರು.
ಶಾಸಕ ಮನೋಹರ ತಹಶೀಲ್ದಾರ ಮಾತನಾಡಿ, ತಾಲೂಕಿನಾದ್ಯಂತ 65 ಗ್ರಾಮಗಳ ಎಸ್ಸಿ, ಎಸ್ಟಿ ಕಾಲೋನಿಗಳಿಗೆ ರು. 10 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದೆ. ಮೂಲಭೂತ ಸೌಲಭ್ಯಗಳ ತೊಂದರೆಯಾಗದಂತೆ ನಿಗಾವಹಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಚಿಕ್ಕಾಂಶಿ-ಹೊಸೂರಿನ ಆಸ್ಪತ್ರೆ ಕಾಮಗಾರಿ ಸದ್ಯದಲ್ಲಿ ಆರಂಭಿಸಲಾಗುವುದು. ಈ ಭಾಗದಲ್ಲಿ ಎಸ್ಸಿ, ಎಸ್ಟಿ ಜನಾಂಗ ಹೆಚ್ಚಾಗಿರುವುದರಿಂದ ಅವರ ಅನುಕೂಲಕ್ಕಾಗಿ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಲು ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲೆ ಮಂಜೂರಾತಿ ನೀಡುವ ವಿಶ್ವಾಸವಿದೆ ಎಂದ ಅವರು, ಬಸಾಪುರ ಏತ ನೀರಾವರಿಯ ಎರಡನೇ ಹಂತದ ಯೋಜನೆಗೆ ಶೀಘ್ರದಲ್ಲಿ ನೀರಾವರಿ ಸಚಿವರಿಂದ ಚಾಲನೆ ನೀಡಲಾಗುವುದು ಎಂದರು. ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಮಲ್ಲನಗೌಡ ಪಾಟೀಲ, ಹಾಶಂಪೀರ ಇನಾಮದಾರ, ಆರ್.ಎಸ್. ಪಾಟೀಲ, ರವಿಕುಮಾರ ಬೆಲ್ಲದ, ಯಾಶೀರಖಾನ ಪಠಾಣ, ಸಾದಿಕ ಅಹ್ಮದ ಸವಣೂರ, ರಾಮಣ್ಣ ಶೇಷಗಿರಿ ಪಾಲ್ಗೊಂಡಿದ್ದರು.