ಮಹಿಳೆಗೆ ಸಮಾನತೆ ದೊರೆತಿಲ್ಲ: ಡಾ. ಹೇಮಾ ಪಟ್ಟಣಶೆಟ್ಟಿ
ಸಂತ ಶಿಶುನಾಳ ಶರೀಫ ಮಹಾವೇದಿಕೆ, ಶಿಗ್ಗಾಂವಿ
ಗಂಡಿಗಿಂತ ಹೆಣ್ಣು ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗಿದ್ದರೂ ಇಂದಿಗೂ ಸಮಾನತೆಯ ಭಾವನೆ ಮೂಡುತ್ತಿಲ್ಲ. ಆರ್ಥಿಕ ಸ್ವಾತಂತ್ರ್ಯದಿಂದ ಪುರುಷ ಅಧಿಕಾರಸ್ಥನಾದರೆ, ಮಹಿಳೆ ಪುರುಷನ ಹೆಸರಿನೊಂದಿಗೆ ಆತನ ಹೆಂಡತಿ, ಆತನ ಮಗಳು ಎಂದು ಕರೆಯಿಸಿಕೊಳ್ಳುವ ಸ್ಥಿತಿ ಇಂದಿಗೂ ಇದೆ ಎಂದು ಸಾಹಿತಿ ಧಾರವಾಡದ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.
ಶಿಗ್ಗಾಂವಿಯಲ್ಲಿ ಜರುಗುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನವಾದ ಬುಧವಾರದ ಕಾರ್ಯಕ್ರಮದಲ್ಲಿ 'ಹೆಣ್ಣು ಹೆಣ್ಣೆಂದೇಕೆ' ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. 21ನೇ ಶತಮಾನದಲ್ಲಿ ಜಗತ್ತು ವೈಜ್ಞಾನಿಕವಾಗಿ ಮುಂದುವರಿದಿರಬಹುದು. ಆದರೆ, ಹೆಣ್ಣಿನ ವಿಚಾರದಲ್ಲಿ ಎಲ್ಲಿತ್ತೋ ಅಲ್ಲೇ ಇದೆ. ಸಮಾನ ಸ್ಥಾನಮಾನ, ಸ್ವಾತಂತ್ರ್ಯ ದೊರೆಯುತ್ತಿಲ್ಲ. ಕಾನೂನಿನ ಅನುಷ್ಠಾನದಲ್ಲಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಮನೆಯಲ್ಲಿ ಮಹಿಳೆಗೆ ಮೊದಲು ಹೇಗಿತ್ತೋ ಈಗಲೂ ಅದೇ ಪರಿಸ್ಥಿತಿ ಮುಂದುವರೆದಿದೆ ಎಂದು ವಿಷಾದಿಸಿದರು.
12ನೇ ಶತಮಾನದಲ್ಲಿ ಹೆಣ್ಣಿಗೆ ಆತ್ಮ ಎಂಬ ಎತ್ತರದ ಹೆಸರನ್ನಿಟ್ಟು ಅವಳಿಗೆ ಮುಕ್ತ ಸ್ವತಂತ್ರ ನೀಡಿ ಸಮಾಜದಲ್ಲಿ ಸಮಾನತೆಯ ಸ್ಥಾನ ಕಲ್ಪಿಸಿ ಸನ್ನಡತೆಗೆ ಆದ್ಯತೆ ನೀಡಿದ್ದು ವೀರಶೈವ ಧರ್ಮ. ಆದರೆ, ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಬೇರೆ ಮನೆಗೆ ಹೋಗುವ ಹೆಣ್ಣಿಗೇಕೆ ವಿದ್ಯೆ, ಅವಳಿಗೇಕೆ ಸ್ವಾತಂತ್ರ ಎಂಬುದು ಇಂದಿಗೂ ಜನರ ಮನದಿಂದ ದೂರವಾಗಿಲ್ಲ. ರಾಜಸ್ಥಾನ ಸೇರಿದಂತೆ ಅನೇಕ ರಾಜ್ಯದ ಶ್ರೀಮಂತರಿಗೆ ಹೆಣ್ಣನ್ನು ಮಾರಾಟ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಅತ್ಯಾಚಾರ ಪ್ರಕರಣಗಳು ದಿನದಿನಕ್ಕೆ ಹೆಚ್ಚಾಗುತ್ತಿವೆ. ಸಾಕ್ಷಿ ಬಯಸುವ ಕಾನೂನು ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಸಾಧ್ಯವಾಗದ ಹಲವಾರು ಪ್ರಕರಣಗಳು ಮುಚ್ಚಿ ಹೋಗಿವೆ. ಮರ್ಯಾದಾ ಹತ್ಯೆ ಪ್ರಕರಣಗಳು ಮನಸ್ಸಿಗೆ ನೋವುಂಟು ಮಾಡುತ್ತಿವೆ. 21ನೇ ಶತಮಾನದಲ್ಲಿರುವ ನಾವು ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಪರಸ್ಪರ ಸಮಾನರು ಎಂಬ ಮನೋಭಾವನೆಯನ್ನು ಮೂಡಿಸಿಕೊಳ್ಳಬೇಕು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಷಿ ಮಾತನಾಡಿ, ಭಕ್ತರ ಮೂಲಕ ಕಾಣಿಕೆಯಾಗಿ ಬಂದ ಹಣವನ್ನು ಸಮಾಜದ ಏಳ್ಗೆಗಾಗಿ ಸದ್ಬಳಕೆ ಮಾಡಿ ಬಡಜನರಿಗಾಗಿ ಶಿಕ್ಷಣ ಸಂಸ್ಥೆಯ ಮೂಲಕ ಜ್ಞಾನ ದಾಸೋಹ ಉಣಬಡಿಸುತ್ತಿರುವ ಸಿರಿಗೆರೆ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.
ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ಧರ್ಮ, ಅರ್ಥ, ಕಾಮ, ಮೋಕ್ಷವನ್ನು ಎಲ್ಲರಿಗೂ ಮಠಾಧೀಶರು ಕರುಣಿಸುತ್ತಾರೆ. ಶ್ರೇಷ್ಠ ಜೀವನ ನಮ್ಮದಾಗಬೇಕಾದರೆ ಧರ್ಮದ ಹಾದಿಯಲ್ಲಿ ನಡೆಯಬೇಕು.
ಕಾಮದಾಸೆಗಾಗಿ ಮೌಲ್ಯಗಳನ್ನು ಮರೆತು ನೀತಿ, ಧರ್ಮಗಳನ್ನು ಗಾಳಿಗೆ ತೂರಿ ಬದುಕು ನಡೆಸುತ್ತಿರುವ ಈ ಕಾಲದಲ್ಲಿ ಹೆಣ್ಣನ್ನು ಗೌರವದಿಂದ ಕಾಣುವ ಮನೋಭಾವ ರೂಢಿಸಿಕೊಂಡಾಗ ಸಮಾಜದಲ್ಲಿ ನೆಮ್ಮದಿ ಮೂಡಲು ಸಾಧ್ಯ ಎಂದರು. ಸಿರಿಗೆರೆಶ್ರೀಗಳು ಸಾನ್ನಿಧ್ಯವಹಿಸಿದ್ದರು. ದಿಂಗಾಲೇಶ್ವರ ಸ್ವಾಮೀಜಿ, ಅಭಿನವಕುಮಾರ ಚನ್ನಬಸವ ಸ್ವಾಮೀಜಿ, ಬಸವರಾಜ ಬೊಮ್ಮಾಯಿ, ಬಿ.ಎಲ್. ಶಂಕರ, ಸೋಮಣ್ಣ ಬೇವಿನಮರದ, ಸುಧೀಂದ್ರ ಹಾಲ್ದೊಡ್ಡೇರಿ ಇತರರು ಇದ್ದರು.