ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಲೋಕ ಅದಾಲತ್‌ನಿಂದ ವ್ಯಾಜ್ಯ ಪರಿಹರಿಸಿಕೊಳ್ಳಿ

Lingaraj Badiger
Updated On : 13 Feb 2014, 11:05 am

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 12
ನ್ಯಾಯಾಲಯಗಳಲ್ಲಿ ಪ್ರಕರಣಗಳ ಒತ್ತಡ ಹೆಚ್ಚಾಗಿದ್ದರಿಂದ ತ್ವರಿತ ನ್ಯಾಯದಾನಕ್ಕೆ ವಿಳಂಬವಾಗುತ್ತಿದೆ. ಆದ್ದರಿಂದ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜ. 6 ರಿಂದ ಏಪ್ರಿಲ್ 12ವರೆಗೆ ಮೆಗಾ ಲೋಕಅದಾಲತ್ ಆಯೋಜಿಸಲಾಗಿದ್ದು, ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ನ್ಯಾಯಾಧೀಶೆ ಎಸ್. ಸಾವಿತ್ರಿ ವಿನಾಯಕ ತಿಳಿಸಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಲೋಕ ಅದಾಲತ್ ಮೂಲಕ ಇತ್ಯರ್ಥ ಪಡಿಸಬಹುದಾದ 4500 ಪ್ರಕರಣಗಳನ್ನು ಗುರುತಿಸಲಾಗಿದೆ. ಈಗಾಗಲೇ 410 ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಲಾಗಿದೆ. ಪ್ರತಿ ದಿನ ಸಂಜೆ 3 ಗಂಟೆಯಿಂದ ಎಲ್ಲ ಹಂತದ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಸಿ, ಅತ್ಯಂತ ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯದಾನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಲೋಕ ಅದಾಲತ್‌ನಲ್ಲಿ ಪ್ರಮುಖವಾಗಿ ವಾಹನ ಅಪಘಾತ, ಭೂಸ್ವಾಧೀನ ಪ್ರಕರಣಗಳು, ಸ್ಥಳೀಯ ಪಂಚಾಯಿತಿ, ವಿದ್ಯುತ್ ಮಂಡಳಿ, ಹಾಗೂ ಹಣಕಾಸು ಸಂಸ್ಥೆಗಳ ಪರ ಹಾಗೂ ವಿರುದ್ಧದ ಪ್ರಕರಣ, ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಪ್ರಕರಣಗಳು, ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಕಾರ್ಮಿಕ ನಷ್ಟ ಪರಿಹಾರ ಪ್ರಕರಣಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಇದರ ಜತೆಗೆ ಪ್ರೀಲಿಟಿಗೇಶನ್ ಹಂತದಲ್ಲಿರುವ ಪ್ರಕರಣಗಳನ್ನೂ ಅದಾಲತ್ ಮುಂದೆ ತಂದು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಜನತಾ ನ್ಯಾಯಾಲಯಗಳ ತೀರ್ಮಾನ ಅಂತಿಮವಾಗಿದ್ದು ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಜತೆಗೆ ಜನತಾ ನ್ಯಾಯಾಲಯದ ತೀರ್ಪು ಸಿವಿಲ್ ನ್ಯಾಯಾಲಯ ನೀಡಿದ ತೀರ್ಪಿನಷ್ಟೆ ಮಾನ್ಯವೂ, ಬಂಧನಕಾರಿಯೂ ಆಗಿದೆ. ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಶೀಘ್ರವಾಗಿ ಕಡಿಮೆ ಖರ್ಚಿನಲ್ಲಿ ಇಲ್ಲವೇ, ಯಾವುದೇ ಖರ್ಚಿಲ್ಲದೆ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ 8 ಸಾವಿರ ಕ್ರಿಮಿನಲ್ ಪ್ರಕರಣಗಳು ಹಾಗೂ 16 ಸಾವಿರ ಸಿವಿಲ್ ಪ್ರಕರಣಗಳು ಬಾಕಿ ಇವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಕರಣಗಳು, ನ್ಯಾಯಾಧೀಶರ ಕೊರತೆ, ಮೂಲಸೌಲಭ್ಯದ ಕೊರತೆ ಕಾರಣದಿಂದಾಗಿ ನ್ಯಾಯದಾನ ವಿಳಂಬವಾಗುತ್ತಿದೆ. ಹೀಗಾಗಿ ಈ ವಿಳಂಬವನ್ನು ತಡೆಯಲು ಮತ್ತು ಶೀಘ್ರ ನ್ಯಾಯ ಕೊಡುವ ದೃಷ್ಟಿಯಿಂದ ಈ ಮೆಗಾ ಅದಾಲತ್ ಆಯೋಜಿಸಲಾಗಿದೆ. ಸಾಮಾಜಿಕ ನ್ಯಾಯ ನೀಡುವಲ್ಲಿ ಇದೊಂದು ಮೈಲಿಗಲ್ಲಾಗಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಂಡು ವ್ಯಾಜ್ಯ ಪರಿಹರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.  ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೆ.ಬಿ. ಅಸೊಡೆ, ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ವಿ. ಚೆನ್ನಕೇಶವ ರೆಡ್ಡಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರವೀಂದ್ರ ಅರಿ ಇದ್ದರು.


22ರಂದು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆ
ನ್ಯಾಯಾಲಯದಲ್ಲಿ ಪರ್ಯಾಯ ವ್ಯಾಜ್ಯಗಳ ಮಧ್ಯಸ್ಥಿಕೆ ಕೇಂದ್ರವನ್ನು ಫೆ. 22ರಂದು ಉದ್ಘಾಟಿಸಲಾಗುವುದು. ಈ ಕೇಂದ್ರದ ಮೂಲಕ ನ್ಯಾಯಾಧೀಶರಿಗೆ ಮಧ್ಯಸ್ಥಿಕೆ ತಂತ್ರಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ರಾಜಿ ಮಾಡಿಕೊಳ್ಳಲು ವಕೀಲರು ಮಾರ್ಗದರ್ಶನ ನೀಡುತ್ತಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಹೈಕೋರ್ಟ್ ನ್ಯಾಯಾಧೀಶರಾದ ಎನ್.ಕೆ. ಪಾಟೀಲ, ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಆನಂದಭೈರಾರೆಡ್ಡಿ, ಕೆ.ಎಲ್. ಮಂಜುನಾಥ, ಅರವಿಂದಕುಮಾರ್ ಇತರರು ಆಗಮಿಸಲಿದ್ದಾರೆ ಎಂದು ನ್ಯಾ. ಸಾವಿತ್ರಿ ವಿನಾಯಕ ತಿಳಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement