ವಿಜ್ಞಾನ-ತಂತ್ರಜ್ಞಾನದಿಂದ ಭಾರತ ಸ್ವಾವಲಂಬಿ: ಸುಧೀಂದ್ರ ಹಾಲ್ದೊಡ್ಡೇರಿ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಭಾರತ ಪ್ರಮುಖವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶ ಇಂದು ಅಪ್ರತಿಮ ಸಾಧನೆ ಮಾಡಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ ಎಂದು ವಿಜ್ಞಾನಿ ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ ಹೇಳಿದರು. ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 7ನೇ ದಿನದ ಕಾರ್ಯಕ್ರಮದಲ್ಲಿ ವಿಜ್ಞಾನ- ಕತ್ತಿ ಹಾಗೂ ಗುರಾಣಿ ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು. ಭಾರತ ಬಾಹ್ಯಾಕಾಶ ಸಂಶೋಧನೆಯಲ್ಲಿ ಮಹತ್ತರ ಮೈಲಿಗಲ್ಲು ಸಾಧಿಸಿದ್ದು, ಮುಂಚೂಣಿ ರಾಷ್ಟ್ರಗಳಾದ ಅಮೆರಿಕಾ, ಫ್ರಾನ್ಗಳಿಗೆ ಸಮಾನ ಸ್ಥಾನದಲ್ಲಿ ನಾವಿದ್ದೇವೆ. ತಂತ್ರಜ್ಞಾನವನ್ನು ನಾವೇ ತಯಾರಿಸಿಕೊಳ್ಳುವ ಶಕ್ತಿಯನ್ನು ನಾವು ಹೊಂದಿದ್ದೇವೆ ಎಂದರು. ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ ಮಾತನಾಡಿದರು. ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಮಾತನಾಡಿ, ಇಡೀ ಪ್ರಪಂಚಕ್ಕೆ ನಾಗರಿಕತೆ ಪಾಠ ಬೋಧಿಸಿದ ಭಾರತದಲ್ಲಿ ಶೋಷಣೆ, ತಾರತಮ್ಯ ಸೇರಿದಂತೆ ಅನೇಕ ಪಿಡುಗುಗಳು ಇನ್ನೂ ಕಾಡುತ್ತಿವೆ. ಭೂಮಿ, ಗಾಳಿ, ಧಾನ್ಯ ಎಲ್ಲವೂ ಒಂದೇ ಆಗಿದ್ದರೂ ನಮ್ಮಲ್ಲಿರುವ ಸಂಕುಚಿತ ಸ್ವಾರ್ಥ ಮನೋಭಾವದಿಂದ ಸಮಾಜದಲ್ಲಿ ಸಮಾನತೆ ಬರುತ್ತಿಲ್ಲ. ಮನುಷ್ಯನನ್ನು ಸ್ವಾರ್ಥದಿಂದ ಹೊರತರುವ ಪ್ರಯತ್ನ ನಡೆಯಬೇಕಿದೆ. ಸತ್ಯವೇ ಧರ್ಮ, ಕಾಯಕವೇ ಕೈಲಾಸ ಎಂಬ ಸಿದ್ಧಾಂತ ಒಪ್ಪಿಕೊಂಡಿರುವ ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ತಲ್ಲಣಗಳು ನಮ್ಮನ್ನು ಕಾಡುತ್ತಿವೆ. ಧರ್ಮ, ಧಾರ್ಮಿಕ ಕ್ಷೇತ್ರದ ಮಠ, ಪೀಠಾಧಿಪತಿಗಳಿಂದ ಸಮಾಜದಲ್ಲಾಗುತ್ತಿರುವ ಜಾಗೃತಿಯಿಂದ ಸಮಾನತೆ ಉಳಿದಿವೆ. ನೆಮ್ಮದಿ ನಮಗೆ ಸಿಗುತ್ತಿದೆ ಎಂದರು.