ಹೊಂದಾಣಿಕೆಯಿಂದ ಸುಖ ಸಂಸಾರ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಅತ್ತೆ ಹಾಗೂ ಸೊಸೆಯರ ನಡುವೆ ಹೊಂದಾಣಿಕೆ ಇಲ್ಲದಿರುವ ಅನೇಕ ಸಂಸಾರಗಳನ್ನು ನಾವಿಂದು ಕಾಣುತ್ತೇವೆ. ಆದರೆ, ಇದಕ್ಕೆಲ್ಲ ಅತ್ತೆಯಂದಿರನ್ನು ದೂರುವುದು ಸರಿಯಲ್ಲ. ಅತ್ತೆಯನ್ನು ಜಾಣ್ಮೆಯಿಂದ ಒಲಿಸಿಕೊಂಡು, ಕುಟುಂಬದ ಇತರ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಸುಖ ಸಂಸಾರ ನಡೆಸಬಹುದು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 7ನೇ ದಿನವಾದ ಬುಧವಾರದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಅತ್ತೆಯನ್ನು ಒಲಿಸಿಕೊಳ್ಳುವ ಜಾಣ್ಮೆ ಸೊಸೆಯರಲ್ಲಿ ಬರಬೇಕು. ಅತ್ತೆಗಿಂತ ಮೊದಲು ಏಳಬೇಕು. ನಿಮ್ಮ ಸ್ವಂತ ಬುದ್ಧಿಯಿಂದ ಸಂಸಾರ ನಡೆಸಿದರೆ ಅತ್ತೆಯ ಹೃದಯ ಗೆಲ್ಲಬಹುದು. ಆಗ ಅದೇ ಅತ್ತೆ ಸೊಸೆಯ ತಾಯಿಯಾಗುತ್ತಾಳೆ. ಮಠದ ಸ್ವಾಮೀಜಿಯಾಗುವುದು ಇಂದು ಸುಲಭ. ಆದರೆ, ಮನೆಯ ಸೊಸೆಯಾಗುವುದು ಕಷ್ಟ. ಮಾವ, ಅತ್ತೆ, ಇತರ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ತತ್ವದಡಿ ಜೀವನ ನಡೆಸಬೇಕು. ಆ ಶಕ್ತಿಯನ್ನು ದೇವರು ಎಲ್ಲ ಸೊಸೆಯಂದಿರಿಗೆ ನೀಡಲಿ ಎಂದು ನುಡಿದರು.
ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ದುಡಿಯುವುದನ್ನು ಕಲಿಯಬೇಕೇ ಹೊರತು ಸರ್ಕಾರ ಕೊಡುವುದಕ್ಕಾಗಿ ಆಸೆ ಪಡಬೇಡಿ. ದುಡಿಮೆಯಿಂದ ಆತ್ಮತೃಪ್ತಿ ಹಾಗೂ ದೇಶದ ಅಭಿವೃದ್ಧಿಯೂ ಸಾಧ್ಯ.
ಒತ್ತಡದಿಂದ ಬದುಕುತ್ತಿರುವ ಇಂದಿನ ದಿನಗಳಲ್ಲಿ ಹುಣ್ಣಿಮೆ ಕಾರ್ಯಕ್ರಮ ಸಹಕಾರಿಯಾಗಿದೆ. ಮಹಿಳೆಗೆ ಇಂದು ಮಹಿಳೆಯೇ ಶತ್ರುವಾಗಿದ್ದಾಳೆ. ಆದ್ದರಿಂದ ಮೊದಲು ಅತ್ತೆ ತನ್ನ ಸೊಸೆಯನ್ನು ಮಗಳಂತೆ ಸಮಾನವಾಗಿ ಕಾಣುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಮಯ ಹಾಗೂ ಸಾವು ಯಾರಿಗೂ ದಾರಿ ಕಾಯುವುದಿಲ್ಲ. ಅದರಂತೆ ಸಿರಿಗೆರೆಶ್ರೀಗಳೂ ಯಾರಿಗಾಗಿ ಕಾಯದೇ ತಮ್ಮ ಕಾಯಕ ಮುಂದುವರಿಸುತ್ತಾರೆ ಎಂದು ಹೇಳಿದರು. ಹುಲಗೂರ ಓಲೇಮಠದ ಡಾ. ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಬಸವರಾಜ ಹೊರಟ್ಟಿ, ಬಿ.ಜಿ. ಬಣಕಾರ, ಸೋಮಣ್ಣ ಬೇವಿನಮರದ ಇತರರು ಇದ್ದರು.
ಹುಣ್ಣಿಮೆಯಲ್ಲಿ ಇಂದು
ಶಿಗ್ಗಾಂವಿ: ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಫೆ. 13ರಂದು ಸಂಜೆ 6-30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ.
ಆಶೀರ್ವಚನ: ಹರಿಹರದ ವೀರಶೈವ ಲಿಂಗಾಯಿತ ಪಂಚಮಸಾಲಿ ಜಗದ್ಗುರು 2008 ಜಗದ್ಗುರು ಸಿದ್ದಲಿಂಗೇಶ್ವರ ಸ್ವಾಮೀಜಿ, ಬಂಕಾಪುರ ಅರಳಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಬಿಷಪ್ ಪೀಟರ್ ಮೆಕ್ಯಾಡೋ ಸಾನ್ನಿಧ್ಯ: ಸಿರಿಗೆರೆ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.
ಮುಖ್ಯ ಅತಿಥಿಗಳು: ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ, ಹಿರಿಯ ಕವಿ ಚನ್ನವೀರ ಕಣವಿ, ವಿಜಯ ಸಂಕೇಶ್ವರ.
ವಿಶೇಷ ಆಹ್ವಾನಿತರು: ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ, ವಡ್ನಾಳ ರಾಜಣ್ಣ.
ಉಪನ್ಯಾಸ: ಡಾ. ತಮಿಳ್ ಸೆಲ್ವಿ ಅವರಿಂದ ಭಾಷಾ ಬಾಂಧವ್ಯ ಕುರಿತು ಹಾಗೂ ಸುಧಾ ಬರಗೂರ ಅವರು ಸಂಸಾರ-ಸಂಸ್ಕಾರ ಕುರಿತು ಉಪನ್ಯಾಸ ನೀಡಲಿದ್ದಾರೆ.