ಭಕ್ತಿಭಾವನೆ ಆಧಾರದ ಮೇಲೆ ಜೀವನ ರೂಪಿಸಿಕೊಳ್ಳಬೇಕು
ಹಾನಗಲ್ಲ: ದೇವರಲ್ಲಿ ಭಕ್ತಿಭಾವನೆ ಮತ್ತು ನೈತಿಕತೆಯ ಆಧಾರದ ಮೇಲೆ ಜೀವನ ರೂಪಿಸಿಕೊಳ್ಳಬೇಕು. ಕೇವಲ ಕಾನೂನಿನಿಂದ ಎಲ್ಲವನ್ನೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಹೇಳಿದರು.
ತಾಲೂಕಿನ ಶಿರಗೋಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಧರ್ಮಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿಗೆ ಮತದಾರರನ್ನು ಸೆಳೆಯಲು ಅಕ್ರಮಗಳನ್ನು ಸಕ್ರಮಗೊಳಿಸುವ ಕಾನೂನುಗಳ ರಚನೆ ಆರಂಭವಾಗಿದ್ದು, ಪರಿಣಾಮವಾಗಿ ಕಾನೂನನ್ನು ಗೌರವಿಸುವುದು ಕಡಿಮೆಯಾಗಿದೆ ಎಂದರು.
ನೂತನ ದೇವಸ್ಥಾನದ ಪಕ್ಕದಲ್ಲಿಯೇ ರು. 20 ಲಕ್ಷ ವೆಚ್ಚದಲ್ಲಿ ವಿಶಾಲವಾದ ಸಮುದಾಯ ಭವನ ನಿರ್ಮಿಸುವ ಯೋಜನೆ ಇದ್ದು, ಭಕ್ತರ ದಾನ ಹಾಗೂ ಸಹೃದಯದವರ ಸಹಕಾರದಿಂದ ಈ ಯೋಜನೆಯನ್ನು ಸಾಕಾರಗೊಳಿಸಲಾಗುವುದು ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು ಹಾಗೂ ಸೊರಬ ತಾಲೂಕಿನ ಗೊಗ್ಗಿಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಅವರ ಧರ್ಮಪತ್ನಿ ತೇಜಸ್ವಿನಿ ಪಾಲ್ಗೊಂಡು ಮಾತನಾಡಿದರು. ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶೇಖನಗೌಡ ಬಸನಗೌಡ ಪುರುಷನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಶಿಕಾರಿಪುರದ ಶಿವಪ್ಪ ಶಾಸ್ತ್ರಿಗಳು, ತಾಪಂ ಉಪಾಧ್ಯಕ್ಷೆ ಅನಿತಾ ಶಿವೂರ, ಸದಸ್ಯೆ ರೇಖಾ ಕಳಸಳ್ಳಿ, ರಾಜಣ್ಣ ಪಟ್ಟಣದ, ಸುರೇಶ ಅಗಸನಳ್ಳಿ, ವೀರಯ್ಯಾ ಕಂಬಾಳಿಮಠ, ಬಿ.ಬಸವರಾಜ ಉಪಸ್ಥಿತರಿದ್ದರು.
ಇದೇ ವೇಳೆ ದೇವಸ್ಥಾನಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.