ತರಳಬಾಳು ಮಠದಿಂದ ಸಾಮಾಜಿಕ ಕ್ರಾಂತಿ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ತರಳಬಾಳು ಮಠದಿಂದ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿಯಾಗಿದೆ. ಶೈಕ್ಷಣಿಕ, ಸಾಮಾಜಿಕ, ಅಧ್ಯಾತ್ಮಿಕ ಸೇರಿದಂತೆ ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹುಣ್ಣಿಮೆ ಕಾರ್ಯಕ್ರಮದ ಅರಿವು ಎಲ್ಲರಲ್ಲಿ ಮೂಡಿದೆ. 150ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ತೆರೆಯುವ ಮೂಲಕ ತರಳಬಾಳು ಮಠದಿಂದ ಶೈಕ್ಷಣಿಕ ಕ್ರಾಂತಿಯಾಗಿದೆ. ಹೆಣ್ಣುಮಕ್ಕಳಿಗೆ ವಸತಿ ನಿಲಯ ಆರಂಭಿಸುತ್ತಿದ್ದಾರೆ. ಸರ್ಕಾರ ಇಲ್ಲಿಯ 21 ಕೆರೆಗಳಿಗೆ 25 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
ಎಲ್ಲ ಜಾತಿ ಒಂದೇ ಎಂಬ ಬಸವಣ್ಣನವರ ಆಶಯದಂತೆ ಸಿರಿಗೆರೆ ಶ್ರೀಗಳು ಕೆಲಸ ಮಾಡುತ್ತಿದ್ದಾರೆ. ಅನ್ನ, ಜ್ಞಾನ ದಾಸೋಹದ ಮೂಲಕ ಶ್ರೀಗಳು ಮನೆಮಾತಾಗಿದ್ದಾರೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮಾತನಾಡಿ, ಪ್ರಗತಿಪರವಾಗಿ ಚಿಂತಿಸುವ ಮಠವೆಂದರೆ ಅದು ಸಿರಿಗೆರೆ ಮಠವಾಗಿದೆ. ನಡೆದಾಡುವ ದೇವರು ಸಿರಿಗೆರೆಶ್ರೀಗಳು. ಮಠದ ಭಕ್ತನಾಗಿ ನಡೆದುಕೊಳ್ಳುತ್ತಿದ್ದೇನೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತರಳಬಾಳು ಮಠದಿಂದ ಅಪಾರ ಕೊಡುಗೆ ದೊರೆತಿದೆ ಎಂದ ಅವರು, ಸದ್ಧರ್ಮ ಪೀಠದ ಸ್ಥಾಪಕ ಶಿವಶರಣ ಮರುಳು ಸಿದ್ಧರ ಮೇಲೆ ತಾವು ಚಲನಚಿತ್ರ ತೆರೆಯುವುದಾಗಿ ತಿಳಿಸಿದರು.
ತರಳಬಾಳು ಹುಣ್ಣಿಮೆ ಕಾರ್ಯಾಧ್ಯಕ್ಷ ಬಸವರಾಜ ಬೊಮ್ಮಾಯಿ ಗುರುವಂದನೆ ಸಲ್ಲಿಸಿ, ವೈಚಾರಿಕತೆಯಲ್ಲಿ ವೈವಿಧ್ಯತೆಯ ಜತೆಗೆ ಸಾಮರಸ್ಯವಿದೆ.
ಜಗತ್ತಿನಲ್ಲಿ ಭಕ್ತಿ ಚಳವಳಿ ನಡೆದಿದ್ದು ಭಾರತದಲ್ಲಿ ಮಾತ್ರ. ರಾಜ್ಯ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಬಸವಣ್ಣ, ಕನಕ, ಶಿಸುನಾಳ ಷರೀಫ ಮೊದಲಾದವರ ಸಾಲಿನಲ್ಲಿ ಮರುಳುಸಿದ್ಧರೂ ಪ್ರಮುಖರು. ವೈಚಾರಿಕತೆಗೆ ಆಧುನಿಕ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಸಿರಿಗೆರೆಶ್ರೀಗಳು ನೀಡಿದರು.
ಬರಹಗಳ ಮೂಲಕ ಸಿರಿಗೆರೆಶ್ರೀಗಳು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಹುಣ್ಣಿಮೆ ಕಾರ್ಯಕ್ರಮದಿಂದ ಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ ಮಾತನಾಡಿ, ರೈತರ ಪರವಾದ ಅನೇಕ ಕಾರ್ಯಗಳನ್ನು ಸಿರಿಗೆರೆ ಶ್ರೀಗಳು ಮಾಡಿದ್ದಾರೆ. ಮಠದಿಂದ ಮನುಕುಲದ ಉದ್ಧಾರವಾಗುತ್ತಿದ್ದು, ಹುಣ್ಣಿಮೆ ಕಾರ್ಯಕ್ರಮ ಎಲ್ಲರ ಬಾಳಲ್ಲೂ ಸುಖಶಾಂತಿ ತರಲಿ ಎಂದು ಹೇಳಿದರು.