ಮುಂದಿನ ಬಜೆಟ್ನಲ್ಲಿ ಮದ್ಯಪಾನ ನಿಷೇಧಿಸಲಿ: ಸಿರಿಗೆರೆ ಶ್ರೀ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಮುಖ್ಯಮಂತ್ರಿಗಳು ಮುಂದಿನ ಬಾರಿಯ ಬಜೆಟ್ನಲ್ಲಾದರೂ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸುವ ನಿರ್ಣಯ ಕೈಗೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡುವ ಮುನ್ನ ಮದ್ಯಪಾನ ನಿಷೇಧಿಸುವ ಕುರಿತು ಪ್ರಸ್ತಾಪಿಸಿದ್ದೆ. ಆದರೆ, ಅವರು ಮಾತನಾಡುವಾಗ ಗೊತ್ತಿದ್ದು ಗೊತ್ತಿಲ್ಲದಂತೆ ಆ ಬಗ್ಗೆ ಬಹಿರಂಗವಾಗಿ ಏನೂ ಹೇಳಲಿಲ್ಲ. ಆದರೆ, ಈಗಾಗಲೇ ಬಜೆಟ್ನಲ್ಲಿ ಅಬಕಾರಿ ಇಲಾಖೆಯಿಂದ ರು. 14 ಸಾವಿರ ಕೋಟಿ ಆದಾಯ ಬರುತ್ತದೆ ಎಂಬ ಕಾರಣವನ್ನು ಅವರು ನೀಡಿದರು. ಆದ್ದರಿಂದ ಈಗ ಹೇಗೆ ನಿಷೇಧ ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದರು. ಆದರೆ ಸಮಾಜದಲ್ಲಿ ಸುಧಾರಣೆ ಆಗುತ್ತದೆ ಎಂದಾದರೆ, ನಮ್ಮ ಮಹಿಳೆಯರ ತಾಳಿಭಾಗ್ಯ ಕಾಪಾಡಲು ಆದಾಯದಲ್ಲಿ ಶೇ. 15ರಷ್ಟು ಕಳೆದುಕೊಳ್ಳಲು ಮುಖ್ಯಮಂತ್ರಿಗಳು ತಯಾರಾಗಬೇಕು. ಮುಂದಿನ ಬಜೆಟ್ನಲ್ಲಾದರೂ ಈ ಘೋಷಣೆಯನ್ನು ನಾವು ನಿರಿಕ್ಷಿಸುತ್ತೇವೆ ಎಂದರು. ಮದ್ಯಪಾನ ನಿಷೇಧದ ಬಗ್ಗೆ ನಾವು ಮೊದಲು ಜಾಗೃತರಾಗಬೇಕು. ತರಳಾಬಾಳು ಎಂಬ ಆಶಯದಂತೆ ನಾಡಿನ ಜನತೆ ಸುಖಕರ ಜೀವನ ನಡೆಸುವಂತಾಗಲಿ ಮತ್ತು ನೀವು ಮಾಡಿರುವ ಯೋಜನಾ ಕಾರ್ಯಗಳು ಯಶಸ್ವಿಯಾಗಲಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಹಾರೈಸಿದರು.