ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೆಡಿಕಲ್ ಕಾಲೇಜ್ ಒಂದೇ ತೃಪ್ತಿ

Vishwanath S
Updated On : 15 Feb 2014, 1:08 am

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಚಾಲನೆ ನೀಡುವ ಘೋಷಣೆ ಬಿಟ್ಟರೆ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ.
ಹೊಸ ತಾಲೂಕು ಘೋಷಣೆ, ಸರ್ವಜ್ಞ ಪ್ರಾಧಿಕಾರಕ್ಕೆ ಚಾಲನೆ, ಜಾನಪದ ವಿವಿಗೆ ಅನುದಾನ ಸೇರಿದಂತೆ ಹಲವು ನಿರೀಕ್ಷೆಗಳನ್ನು ಬಜೆಟ್ ಹುಸಿಗೊಳಿಸಿದೆ.
ಮಹತ್ವಾಕಾಂಕ್ಷಿ ಅನ್ನಭಾಗ್ಯ, ಕ್ಷೀರಭಾಗ್ಯದಂಥ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಬಡವರ ಬಂಧು ಎನಿಸಿರುವ ಸಿದ್ದರಾಮಯ್ಯ ಅವರು ಮಂಡಿಸಿದ ಎರಡನೇ ಬಜೆಟ್ ಜಿಲ್ಲೆಯಲ್ಲಿ ಹಲವು ನಿರೀಕ್ಷೆಗಳನ್ನು ಮೂಡಿಸಿತ್ತು. ಆದರೆ, ಬಹುನಿರೀಕ್ಷಿತ ಹಾಗೂ ಹಿಂದಿನ ಬಜೆಟ್‌ನಲ್ಲೇ ಘೋಷಣೆಯಾಗಿದ್ದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಚಾಲನೆ ನೀಡುವ ಪ್ರಸ್ತಾಪವನ್ನು ಸಿದ್ದರಾಮಯ್ಯನವರು ಮಾಡಿದ್ದು, ಬಹುದಿನಗಳ ಕನಸು ಈಡೇರಿದಂತಾಗಿದೆ. ಆದರೆ, ಮೆಡಿಕಲ್ ಕಾಲೇಜು ಕಟ್ಟಡ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಅನುದಾನ ಮೀಸಲಿಡದಿರುವುದು ನಿರಾಸೆ ಮೂಡಿಸಿದೆ. ಆದ್ದರಿಂದ ಮೆಡಿಕಲ್ ಕಾಲೇಜು ಸ್ಥಾಪನೆ ವಿಳಂಬವಾಗುವ ಸಾಧ್ಯತೆಯಿದೆ.
ತಾಲೂಕು ಘೋಷಣೆಯಿಲ್ಲ: ಸಂಚಾರಿ ಪೊಲೀಸ್ ಠಾಣೆ, ಜಿಲ್ಲೆಯಲ್ಲಿ ತಾಲೂಕಾಗುವ ಅರ್ಹತೆ ಇರುವ ರಟ್ಟಿಹಳ್ಳಿ, ಗುತ್ತಲ ಹಾಗೂ ತಡಸ ಹೋಬಳಿಗಳಿದ್ದು ಅವುಗಳನ್ನು ತಾಲೂಕು ಎಂದು ಈ ಬಾರಿ ಘೋಷಿಸಬಹುದು ಎಂದು ಜನತೆ ನಿರೀಕ್ಷೆ ಇಟ್ಟುಕೊಂಡಿದ್ದರು. ಗುತ್ತಲ ಸೇರಿದಂತೆ ಅನೇಕ ಹೋಬಳಿಗಳ ಜನರು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಬಳಿ ಮನವಿಯನ್ನೂ ಮಾಡಿದ್ದರು. ಆದರೆ, ಈ ಬಗ್ಗೆ ಆಯವ್ಯಯದಲ್ಲಿ ಯಾವುದೇ ಚಕಾರ ಎತ್ತದ್ದರಿಂದ ತಾಲೂಕು ಭಾಗ್ಯದಿಂದ ಅನೇಕ ಹೋಬಳಿಗಳು ವಂಚಿತವಾಗುವಂತಾಗಿದೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಹಿರೇಕೆರೂರ ತಾಲೂಕಿನ ಸರ್ವಜ್ಞ ಪ್ರಾಧಿಕಾರಕ್ಕೆ ರು. 2 ಕೋಟಿ, ಕನಕದಾಸರ ಜನ್ಮಭೂಮಿ ಶಿಗ್ಗಾಂವಿ ತಾಲೂಕು ಬಾಡದಲ್ಲಿ ಯಾತ್ರಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು ರು. 1 ಕೋಟಿ ಬಜೆಟ್‌ನಲ್ಲಿ ಕೊಟ್ಟಿದ್ದರು. ಆದರೆ, ಸಿದ್ದರಾಮಯ್ಯ ಅವರು ಅದನ್ನು ಕಳೆದ ಬಜೆಟ್‌ನಲ್ಲಿ ನೀಡಿರಲಿಲ್ಲ. ಈ ಬಾರಿಯಾದರೂ ಸರ್ವಜ್ಞ ಪ್ರಾಧಿಕಾರಕ್ಕೆ ಅನುದಾನ ನೀಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಅದೂ ಹುಸಿಯಾಗಿದೆ.
ಬಜೆಟ್ ನಿರಾಸೆ: ಜಿಲ್ಲೆಯ ಬ್ಯಾಡಗಿಯಲ್ಲಿ ಮೆಣಸಿನಕಾಯಿ ಸಂಸ್ಕರಣ ಘಟಕ ಸ್ಥಾಪನೆ (ಸ್ಪೈಸ್ ಪಾರ್ಕ್), ದೇವಿಹೊಸೂರಿನಲ್ಲಿರುವ ಮೆಣಸಿನಕಾಯಿ ತಳಿ ಅಭಿವೃದ್ಧಿ ಸಂಸ್ಥೆಗೆ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆಯನ್ನೂ ಮುಖ್ಯಮಂತ್ರಿ ಬಜೆಟ್‌ನಲ್ಲಿ ಈಡೇರಿಸಿಲ್ಲ. ಜಿಲ್ಲೆಗೆ ಪ್ರಮುಖ ಬೆಳೆಗಳಾದ ಮೆಕ್ಕಜೋಳ ಮತ್ತು ಹತ್ತಿ ಅಭಿವೃದ್ಧಿ ಕೇಂದ್ರಗಳನ್ನು ಘೋಷಿಸಬಹುದು. ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ, ರಾಣಿಬೆನ್ನೂರು ಮಾರುಕಟ್ಟೆಗಳಿದ್ದು, ಇವುಗಳಿಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಿಸಬಹುದು, ವಿಶ್ವದ ಮೊದಲ ಜಾನಪದ ವಿವಿಯ ಅಭಿವೃದ್ಧಿಗೆ ಅನುದಾನ ನೀಡಬಹುದು ಎಂಬ ನಿರೀಕ್ಷೆಯನ್ನೂ ಬಜೆಟ್ ನಿರಾಶೆಗೊಳಿಸಿದೆ. ಜಿಲ್ಲೆ ಸೇರಿದಂತೆ 8 ಜಿಲ್ಲೆಗಳಲ್ಲಿ ಕಳಪೆ ಹತ್ತಿ ಬೀಜದಿಂದ ಹಾನಿ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆಯೂ ರೈತರು ಈ ಹಿಂದೆ ಒತ್ತಾಯಿಸಿದ್ದರು. ಆದ್ದರಿಂದ ಬಜೆಟ್‌ನಲ್ಲಿ ಪ್ಯಾಕೇಜ್ ಘೋಷಿಸಬಹುದು ಎಂಬ ಲೆಕ್ಕಾಚಾರದಲ್ಲಿ ರೈತರಿದ್ದರು. ಆದರೆ, ಸಿದ್ದರಾಮಯ್ಯನವರು ರೈತರನ್ನು ಈ ನಿಟ್ಟಿನಲ್ಲಿ ನಿರಾಶೆಗೊಳಿಸಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕ ಭಾಗವನ್ನೇ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ 4 ಶಾಸಕರಿದ್ದರೂ ಕಡೆಗಣನೆ ಮಾಡಿದ್ದಕ್ಕೆ ಜನರಿಂದ ಅಸಮಾಧಾನ ವ್ಯಕ್ತವಾಗಿದೆ. ವೈದ್ಯಕೀಯ ಕಾಲೇಜು ಬಿಟ್ಟರೆ ಈ ಬಜೆಟ್ ಸಂಪೂರ್ಣ ನಿರಾಶಾದಾಯಕ ಎಂದು ಹೇಳಬಹುದು.


-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement