20 ನಿಮಿಷ 20 ಸುದ್ದಿ
ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ
ಹಾವೇರಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಹೆಚ್ಚು ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಳ್ಳಬೇಕೆಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಕರೆ ನೀಡಿದರು. ತಾಲೂಕಿನ ಕಬ್ಬೂರು ಗ್ರಾಮದಲ್ಲಿ ಮಾಲತೇಶ ಸ್ವಾಮಿಯ 26ನೇ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿದರು. ಬಿ.ಡಿ. ಹಿರೇಮಠ, ಬಳ್ಳಾರಿಯ ವರ್ತಕ ಶ್ರೀನಿವಾಸ, ಬಸವರಾಜ ಬೆಳ್ಳಕ್ಕಿ ತಾಳಿ ವಿತರಣೆ ಮಾಡಿದರು. ಗುರು ನಂಜೇಶ್ವರಶ್ರೀ, ಬೆಂಗಳೂರಿನ ಸರ್ಪಭೂಷಣಮಠದ ದೇವರು, ಶಾಸಕ ಬಸವರಾಜ ಶಿವಣ್ಣನವರ, ಗ್ರಾಪಂ ಅಧ್ಯಕ್ಷೆ ಶಾರದ ದಿಡ್ಡಿ, ಸಿದ್ದಣ್ಣ ಬೆಳ್ಳಕ್ಕಿ, ಕರಬಸಪ್ಪ, ಶಿವಾನಂದಯ್ಯ ವಿರಕ್ತಮಠ ಇತರರು ಇದ್ದರು.
ಇಂದು ಆಮ್ ಆದ್ಮಿ ಪಕ್ಷದ ಸಭೆ
ಹಾವೇರಿ: ನಗರದ ಮುರುಘೇಂದ್ರ ಮಠದ ಆವರಣದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಮಟ್ಟದ ಸಭೆಯನ್ನು ಫೆ. 16ರಂದು ಬೆಳಗ್ಗೆ 10.30ಕ್ಕೆ ಕರೆಯಲಾಗಿದೆ. ಸಭೆಯಲ್ಲಿ ಭ್ರಷ್ಟಾಚಾರ ವಿರೋಧಿ ಸಮಾಜದ ತಯಾರಿ, ಮಾಹಿತಿ ಹಕ್ಕಿನಡಿ ಮಾಹಿತಿ ಪಡೆಯುವ ಬಗ್ಗೆ, ಲೋಕಸಭಾ ಚುನಾವಣೆಯ ಬೂತ್ ಕಾರ್ಯಕರ್ತರ ನೇಮಕ ಮತ್ತು ಜಾಡು ಯಾತ್ರಾ ಬಗ್ಗೆ ಚರ್ಚಿಸಿ, ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಆದ್ದರಿಂದ ಜಿಲ್ಲೆಯ ಎಲ್ಲ ಕಾರ್ಯಕರ್ತರು, ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆ ನೀಡಬೇಕೆಂದು ಜಿಲ್ಲಾ ಸಂಚಾಲಕರಾದ ಶಿವಾನಂದ ಹಳ್ಳೇರ ವಿನಂತಿಸಿದ್ದಾರೆ.
ನಿರಾಶಾದಾಯಕ ಬಜೆಟ್: ಮೆಣಸಿನಕಾಯಿ
ಹಾವೇರಿ: ಮೌಲ್ಯವರ್ಧಿತ ತೆರಿಗೆಯಲ್ಲಿ ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಮೂಲ ತೆರಿಗೆ ದರಗಳಾದ ಶೇ. 5 ಮತ್ತು ಶೇ. 14ಕ್ಕೆ ರಿಟರ್ನ್ ದರಗಳನ್ನು ಮಾರ್ಪಡಿಸಬೇಕಿತ್ತು. ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಇದರಿಂದ ಭಾರವಾಗುತ್ತಿದೆ. ಹಳೆಯ ತರಿಗೆ ದರಗಳಲ್ಲೇ ಬಜೆಟ್ ಸರಿಮಾಡಿಸಬಹುದಿತ್ತು. ಕೇವಲ ವಾಣಿಜ್ಯ ತೆರಿಗೆಗಳಿಂದ ಮಾತ್ರ ಸಂಪನ್ಮೂಲ ಕ್ರೋಡೀಕರಣ ಮುಂದುವರಿದರೆ ಅಪಾಯಕಾರಿ. ಆದರೆ, ಸಣ್ಣ ವ್ಯಾಪಾರಿಗಳಿಗೆ ನೋಂದಣಿ ಮಿತಿ ಏರಿಕೆ ಸ್ವಾಗತ. ಹಾವೇರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಬಿಟ್ಟರೆ ಬೇರೆ ವಿಶೇಷತೆ ಹಾವೇರಿ ಜಿಲ್ಲೆಗೆ ಇಲ್ಲ. ಲೋಕಸಭಾ ಚುನಾವಣಾ ತಯಾರಿಗಾಗಿ ಸಮಯ ಕಳೆಯುತ್ತ ಹಣಕಾಸು ಮಂತ್ರಿಗಳು ಬಜೆಟ್ ತಯಾರಿಯಲ್ಲಿ ಎಡವಿದ್ದಾರೆ. ಎಪಿಎಂಸಿ ಸೆಸ್ ಕಡಿತವೂ ಅತೀ ಅವಶ್ಯವಿದೆ ಎಂದು ತೆರಿಗೆ ಸಲಹೆಗಾರ ರವಿ ಬಿ. ಮೆಣಸಿನಕಾಯಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ಬಜೆಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶೀಘ್ರ ಜನಪದ ಕಲಾಕೂಟ ಆರಂಭ: ಅಂಬಳಿಕೆ ಹಿರಿಯಣ್ಣ
ಶಿಗ್ಗಾಂವಿ: ಜನಪದ ಕಲೆಗಳ ಕಲಿಕೆಗಾಗಿ ಕಲಾಕೂಟವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಶೀಘ್ರವೇ ಆರಂಭಿಸಲಾಗುವುದೆಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ತಿಳಿಸಿದರು. ತಾಲೂಕಿನ ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ವತಿಯಿಂದ 8 ದಿನಗಳಿಂದ ನಡೆದ ರಾಷ್ಟ್ರೀಯ ಜನಪದ ನೃತ್ಯ ಕಾರ್ಯಾಗಾರದ ಸಮಾರೋಪದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಣಿಪುರದ ಜನಪದ ನೃತ್ಯ ಕಲಾವಿದ ವಿದ್ಯಾನಂದಸಿಂಗ್, ಹೊನ್ನಾವರದ ಹಾಲಕ್ಕಿ ಕಲಾವಿದ ಗಣಪಗೌಡ ಹಾಗೂ ಕಾರವಾರದ ಸಿದ್ದಿ ಕಲಾವಿದ ನಾಗರಾಜ ಶಂಕರ ಸಿದ್ದಿ ಮತ್ತು ಸಂಗಡಿಗರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಂದ ಮಣಿಪುರಿ, ಹಾಲಕ್ಕಿ ಕುಣಿತ ಮತ್ತು ಸಿದ್ದಿ ಕುಣಿತ ಪ್ರದರ್ಶನ ನಡೆಯಿತು. ಹಲವು ಗಣ್ಯರು ಇದ್ದರು.
ಶೀಘ್ರಲಿಪಿಕಾರರ ಹುದ್ದೆಗೆ ಅರ್ಜಿ ಆಹ್ವಾನ
ಹಾವೇರಿ: ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 13 ಶೀಘ್ರ ಲಿಪಿಕಾರರ ಹುದ್ದೆಗಳಿಗೆ ಫೆ. 28ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಎಸ್ಎಸ್ಎಲ್ಸಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಮತ್ತು ಸಿನಿಯರ್ ಶ್ಯಾರ್ಟ್ ಹ್ಯಾಂಡ್ನಲ್ಲಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ರು. 5ಗಳ ಸ್ಟಾಂಪ್ ಅಂಟಿಸಿದ ಸ್ವವಿಳಾಸವುಳ್ಳ ಅಂಚೆ ಲಕೋಟೆಯೊಂದಿಗೆ ನಿಗದಿತ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾವೇರಿ ಅವರಿಗೆ ಸಲ್ಲಿಸಬೇಕು. ಅರ್ಜಿ ಮೇಲೆ ಸ್ಟೇನೋಗ್ರಾಫರ್ ಹುದ್ದೆಗೆ ಅರ್ಜಿ ಎಂದು ಬರೆದಿರಬೇಕು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಳನ್ನು ಜಿಲ್ಲಾ ನ್ಯಾಯಾಲಯದ ಕೆಲಸದ ವೇಳೆಯಲ್ಲಿ ಪಡೆಯಬಹುದೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.
ಪ್ರಕೃತಿ ವಿಕೋಪ ಪರಿಹಾರ ಅನುದಾನ ಬಿಡುಗಡೆ
ಹಾವೇರಿ: ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ವಿವಿಧ ಗ್ರಾಮಗಳ ಕುಡಿಯುವ ನೀರಿನ ಪೈಪ್ಲೈನ್ ಹಾಗೂ ಮೋಟರ್ ದುರಸ್ತಿ ಕಾಮಗಾರಿಗಳಿಗೆ ಜಿಲ್ಲೆಯ ಹಾನಗಲ್ಲ ತಾಲೂಕಿಗೆ ರು. 29.35 ಲಕ್ಷಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ತಾಲೂಕಿನ ಬೆಳಗಾಲಪೇಟೆ ಗ್ರಾಮಕ್ಕೆ ರು. 5 ಲಕ್ಷ, ಬಸಾಪುರಕ್ಕೆ ರು. 1 ಲಕ್ಷ, ಶ್ಯಾಡಗುಪ್ಪಿಗೆ ರು. 2.30 ಲಕ್ಷ, ಹೋತನಹಳ್ಳಿಗೆ ರು. 1.20 ಲಕ್ಷ, ಮಲಗುಂದಕ್ಕೆ ರು. 50 ಸಾವಿರ, ಹಿರೇಹುಲ್ಲಾಳಕ್ಕೆ ರು. 1.75 ಲಕ್ಷ, ಚಿಕ್ಕಹುಲ್ಲಾಳಕ್ಕೆ ರು. 2 ಲಕ್ಷ, ಮುಳತಳ್ಳಿಗೆ ರು. 1.50 ಲಕ್ಷ, ಸಣ್ಣ ಕಾಮನಹಳ್ಳಿಗೆ ರು. 1.25 ಲಕ್ಷ, ಸಾವಿಕೇರಿಗೆ ರು. 1.75 ಲಕ್ಷ, ಮಾವಕೊಪ್ಪಕ್ಕೆ ರು. 1.70 ಲಕ್ಷ, ತಿಳವಳ್ಳಿಗೆ ರು. 3 ಲಕ್ಷ, ಡೊಮ್ಮನಾಳಕ್ಕೆ ರು. 2 ಲಕ್ಷ, ಮಲ್ಲಿಗಾರಕ್ಕೆ ಹಾಗೂ ದೇವರಹೊಸಪೇಟೆಗೆ ತಲಾ ರು. 50 ಸಾವಿರ, ಯಲಿವಾಳ ಹಾಗೂ ಬೊಮ್ಮನಹಳ್ಳಿ ಗ್ರಾಮಗಳಿಗೆ ತಲಾ ರು. 1.70 ಲಕ್ಷಗಳನ್ನು ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಬಿಡುಗಡೆ ಮಾಡಲಾಗಿದೆಯೆಂದು ಡಿಸಿ ಪಾಂಡುರಂಗ ನಾಯಕ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಗುರಿ ಸಾಧನೆಗೆ ಶ್ರಮಿಸಿ
ಗುತ್ತಲ: ವಿದ್ಯಾರ್ಥಿಗಳು ಗುರಿ ತಲುಪಲು ಪರಿಶ್ರಮ ಅವಶ್ಯ ಎಂದು ಕುಡಪಲಿ ಕಾಲೇಜಿನ ಉಪನ್ಯಾಸಕಿ ವನಿತಾ ಹೆಗಡೆ ಹೇಳಿದರು. ಸ್ಥಳೀಯ ರುದ್ರಮುನಿ ಶಿವಯೋಗಿಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಗುರಿ ಮುಟ್ಟುವತನಕ ವಿದ್ಯಾರ್ಥಿ ಶ್ರದ್ಧೆಯಿಂದ ಓದಬೇಕು ಎಂದು ಹೇಳಿದರು. ಜಿಜಿಇ ಸೊಸೈಟಿಯ ಗೌರವ ಕಾರ್ಯದರ್ಶಿ ಸಿ.ಬಿ. ಕುರವತ್ತಿಗೌಡ್ರ ಮಾತನಾಡಿದರು. ಪ್ರಕಾಶ ಚಕ್ಕಿ, ಎ.ಸಿ. ಹರಿಹರ, ಆರ್.ಎಸ್. ಮನ್ನಂಗಿ, ಬಸಯ್ಯ ಭೂಸನೂರಮಠ, ಬಸವರಾಜ ಮೊರಗೇರಿ, ಎಸ್.ಎಸ್. ಕೋರಿಕೊಪ್ಪ ಬೀರಪ್ಪ ಲಮಾಣಿ ಉಪಸ್ಥಿತರಿದ್ದರು. ನಿವೃತ್ತಿಯಾದ ಶಿಕ್ಷಕರಾದ ಆರ್ ಎಂ. ಬಸಯ್ಯ ಹಾಗೂ ಹನುಮಂತಪ್ಪ ತೇಲಕರ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಎಸ್.ಎಂ. ವಗ್ಗಣ್ಣನವರ ಸ್ವಾಗತಿಸಿದರು. ಡಾ. ಪಿ.ಬಿ.ದೊಡ್ಡಮನಿ ನಿರೂಪಿಸಿದರು. ಇಂದಿರಾ ತೇಲ್ಕರ ವಂದಿಸಿದರು.
ಸಿಎಂ ಮೇಲಿನ ಭರವಸೆ ಹುಸಿ: ರಾಮಣ್ಣ ಕೆಂಚಳ್ಳೇರ
ಹಾವೇರಿ: 9ನೇ ಬಾರಿ ಆಯವ್ಯಯ ಮಂಡಿಸುತ್ತಿರುವ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಹಲವು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಯಾವುದೇ ಹೊಸ ಘೋಷಣೆ ಮಾಡದೇ ಅವರು ಹಾವೇರಿ ಜಿಲ್ಲೆಯ ಜನರನ್ನು ನಿರಾಸೆಗೊಳಿಸಿದ್ದಾರೆ ಎಂದು ರೈತ ಸಂಘದ, ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದ್ದಾರೆ.
ಕಳಪೆ ಹತ್ತಿ ಬೀಜದಿಂದ ಹಾನಿಗೊಳಗಾದ 8 ಜಿಲ್ಲೆಗಳ ರೈತರ ನೆರವಿಗೆ ಬರಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದು ಎಂಬ ಆಶಾಭಾವನೆಯಿತ್ತು. ಆದರೆ, ಅದನ್ನು ಸಿದ್ದರಾಮಯ್ಯನವರು ಹುಸಿಗೊಳಿಸಿದ್ದಾರೆ. ರೈತರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಂಡಿಲ್ಲ. ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವಲ್ಲಿ ಆಯವ್ಯಯ ಸಂಪೂರ್ಣ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗೊಳ್ಳಿ ರಾಯಣ್ಣ ವಸತಿ ಶಾಲೆಗೆ ಅರ್ಜಿ ಆಹ್ವಾನ
ಹಾವೇರಿ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆಯ 2014-15ನೇ ಸಾಲಿಗೆ 8ನೇ ತರಗತಿ ಇಂಗ್ಲಿಷ್ ಮಾಧ್ಯಮದ ವಿಭಾಗಕ್ಕೆ ಪ್ರವೇಶ ಪರೀಕ್ಷೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಬೆಳಗಾವಿ ವಿಭಾಗದ ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಮಾ. 6ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣ ನೀಡಲಾಗುವುದು. ಅರ್ಜಿ ನಮೂನೆಗಳು ಹಾಗೂ ವಿವರಗಳಿಗೆ ಸಂಬಂಧಿಸಿದ ತಾಲೂಕಿನ ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಿಂದ ಹಾಗೂ ಸಂಗೊಳ್ಳಿ ರಾಯಣ್ಣ ವಸತಿ ಶಾಲೆ ನಂದಗಡ ಇಲ್ಲಿಂದ ಪಡೆಯಬಹುದಾಗಿದೆ. ನಿಗದಿತ ದಿನಾಂಕದೊಳಗಾಗಿ ಸಂಗೊಳ್ಳಿ ರಾಯಣ್ಣ ಸ್ಮಾರಕ ಸನಿವಾಸ ಶಾಲೆ ನಂದಗಡ ತಾ. ಖಾನಾಪುರ ಜಿ. ಬೆಳಗಾವಿ ಇಲ್ಲಿಗೆ ಸಲ್ಲಿಸಬೇಕೆಂದು ಬೆಳಗಾವಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಾಶ ಹರಗಾಪರ ತಿಳಿಸಿದ್ದಾರೆ.
ದೀನದಯಾಳ ಉಪಾಧ್ಯಾಯ 46ನೇ ಪುಣ್ಯತಿಥಿ ಆಚರಣೆ
ಹಾವೇರಿ: ನಗರದ ಬಿಜೆಪಿ ಕಚೇರಿಯಲ್ಲಿ ದೀನದಯಾಳ ಉಪಾಧ್ಯಾಯ ಅವರ 46ನೇ ಪುಣ್ಯತಿಥಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಮರ್ಪಣಾ ದಿನವಾಗಿ ಆಚರಿಸಲಾಯಿತು. ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಡಾ. ಮಲೇಶಪ್ಪ ಹರಿಜನ, ಮಾಜಿ ಶಾಸಕ ನೆಹರೂ ಓಲೆಕಾರ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಮುಳೂರ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಿವಲಿಂಗಪ್ಪ ಕಲ್ಯಾಣಿ, ಸೋಮೆಶ್ವರ ಕುರಡೇಕರ, ಕರಬಸಪ್ಪ ಹಳದೂರ, ಶ್ರೀಪಾದ ಬೇಟಗೇರಿ, ಗಿರೀಶ ತುಪ್ಪದ, ವಿಜಯಕುಮಾರ ಚಿನ್ನಿಕಟ್ಟಿ, ಕೆ.ಸಿ. ಕೋರಿ, ಈರಣ್ಣ ಸಂಗೂರ, ಚಂದ್ರಣ್ಣ ಕ್ಯಾತಣ್ಣನವರ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
21ರಂದು ರಸಪ್ರಶ್ನೆ ಕಾರ್ಯಕ್ರಮ
ಹಾವೇರಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸರ್ಕಾರದ ನೆರವಿನಲ್ಲಿ ಡಿಎಸ್ಇಆರ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರಾವಿಪ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಆಶ್ರಯದಲ್ಲಿ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಫೆ. 21ರಂದು ಬೆಳಗ್ಗೆ 10 ಗಂಟೆಗೆ ನಗರದ ಹುಕ್ಕೇರಿಮಠ ಪ್ರೌಢಶಾಲೆಯಲ್ಲಿ ಜಿಲ್ಲಾ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. 8,9 ಹಾಗೂ 10ನೇ ತರಗತಿ ವಿಜ್ಞಾನ, ಗಣಿತ ಆಧರಿಸಿ 75 ಅಂಕಗಳ ಲಿಖಿತ ರಸ ಪ್ರಶ್ನೆ ಸ್ಪರ್ಧೆ ನಡೆಸಲಾಗುವುದು. ಓರ್ವ ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರಾವಿಪ ಸಂಯೋಜಕ ಎ.ಎಚ್. ಕಬ್ಬಿಣಕಂತಿಮಠ (9448341695) ಅವರನ್ನು ಸಂಪರ್ಕಿಸಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಅವರು ತಿಳಿಸಿದ್ದಾರೆ.
ನಾಳೆಯಿಂದ ದೆಹಲಿಯಲ್ಲಿ ಬೃಹತ್ ರ್ಯಾಲಿ
ಹಾವೇರಿ: ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ವತಿಯಿಂದ ಫೆ. 17 ಮತ್ತು 18ರಂದು ನವದೆಹಲಿಯ ಜಂತರ ಮಂತರ ಬಳಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಲಿಂಗಾಯತ ಧರ್ಮದವರು ಭಾರತೀಯ ಸಂವಿಧಾನದ ಅನ್ವಯ ಲಿಂಗಾಯತ ಧರ್ಮಕ್ಕೆ ಮಾನ್ಯತೆ, ಧಾರ್ಮಿಕ ಅಲ್ಪ ಸಂಖ್ಯಾತರೆಂಬ ಸ್ಥಾನಮಾನ ಪಡೆಯುವ ಉದ್ದೇಶದಿಂದ ಈ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ರ್ಯಾಲಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ 40 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ರ್ಯಾಲಿಯಲ್ಲಿ ಭಾಗವಹಿಸಲು ಇಚ್ಚಿಸುವ ಪ್ರತಿನಿಧಿಗಳು ಫೆ. 16ರಂದು ನವದೆಹಲಿ ತಲುಪುವಂತೆ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ರಾಷ್ಟ್ರೀಯ ಬಸವದಳ ಉಪಾಧ್ಯಕ್ಷೆ ಜಯಶ್ರೀ ಶಿವಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ರು. 1 ಲಕ್ಷ ಬಹುಮಾನ
ರಾಣಿಬೆನ್ನೂರು: ಇಲ್ಲಿನ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೇವೆ ಮೆಚ್ಚಿಕೊಂಡು ಬೈನ್ ಬ್ಲೂಕ್ರಾಸ್-ಲ್ಯಾಬೋರಿಟೀಸ್ ಸಂಸ್ಧೆಯು ರು. 1 ಲಕ್ಷ ಬಹುಮಾನ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ವನಸಿರಿ ಸಂಸ್ಧೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಡಿ. ಬಳಿಗಾರ ಹೇಳಿದರು. ಮಾರುತಿ ನಗರದಲ್ಲಿರುವ ವನಸಿರಿ ಗ್ರಾಮೀಣಾಭಿವೃದ್ಧಿ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಖನ್ನೂರು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಪ್ರವೀಣ ಖನ್ನೂರು, ಬ್ಲೂಕ್ರಾಸ್ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಇನಾಯತ್ ಶೇಖ, ರವಿ ನಿರ್ವಾಣ, ವೀರೇಶ, ಸಂಜೀವ ಅಚಲೇಕರ, ಪಿ.ಎಸ್. ಛಬ್ಬಿ ಉಪಸ್ಥಿತರಿದ್ದರು.
ಮರಗಳನ್ನು ಮಗುವಿನಂತೆ ಬೆಳೆಸಿ: ಬೆನಕಣ್ಣವರ
ರಾಣಿಬೆನ್ನೂರು: ಪ್ರತಿಯೊಬ್ಬರೂ ಒಂದೊಂದು ಮರ ನೆಟ್ಟು, ಮಗುವಿನಂತೆ ಬೆಳೆಸಬೇಕೆಂದು ಮುಖ್ಯೋಪಾಧ್ಯಾಯ ಮಹೇಶ.ಬಿ. ಬೆನಕಣ್ಣನವರ ಹೇಳಿದರು. ತಾಲೂಕಿನ ಕರೂರು ಗ್ರಾಮದ ಕಾಳಿದಾಸ ವಿದ್ಯಾ ಸಂಸ್ಥೆ ಹಾಗೂ ಮರಡೆಪ್ಪ ಸ್ವತಂತ್ರ ಪ.ಪೂ. ಕಾಲೇಜಿನ ರಾಷ್ಟ್ರೀಯ ಹಸಿರುಪಡೆ ಸಂಯುಕ್ತಾಶ್ರಯದಲ್ಲಿ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹಸಿರುಪಡೆ ಕಾರ್ಯಕ್ರಮ ಉದ್ಘಾಟಿಸಿಮಾತನಾಡಿದರು. ಮರಡೆಪ್ಪ ಪ.ಪೂ ಕಾಲೇಜಿನ ಪ್ರಾಚಾರ್ಯ ಮಲ್ಲೇಶ ಡಿ. ಸಾಬಣ್ಣನವರ, ಉಪನ್ಯಾಸಕರಾದ ಶೆದಿಯಪ್ಪ ದೇವಕ್ಕಳವರ, ನಾಗರಾಜ ಯಲಿಗಾರ, ಚನ್ನಬಸಪ್ಪ ಸಂಗಣ್ಣನವರ, ಶಿವಾನಂದ ಕಂದಾಟೆ, ವಿರೇಶ ಹಿತ್ತಲಮನಿ, ಸುಮಲತಾ ಬಾಳಪ್ಪನವರ, ಸುನಂದಾ ಕನ್ನಪ್ಪಳವರ, ಶ್ರೀಕಾಂತ ಸಂಜೀವಣ್ಣನವರ, ಪ್ರವೀಣ ಬಿ.ಎಲ್. ಉಪಸ್ಥಿತರಿದ್ದರು. ಗುಡ್ಡಪ್ಪ ಮಾಳಗುಡ್ಡಪ್ಪನವರ ನಿರೂಪಿಸಿದರು. ದೇಸಾಯಿ ವಂದಿಸಿದರು.
ಶ್ರೇಯಸ್ ಸಂಸ್ಥೆಯಿಂದ ಉತ್ತಮ ಸೇವೆ
ಹಾವೇರಿ: ಮಕ್ಕಳಿಗೆ ಶ್ರೇಯಸ್ ಸಂಸ್ಥೆಯಿಂದ ನಡೆಯುತ್ತಿರುವ ಶ್ರೇಯಸ್ ಬಾಲಕಾರ್ಮಿಕರ ವಿಶೇಷ ವಸತಿ ಶಾಲೆ ಶಿಕ್ಷಣ, ವಸತಿ, ಊಟ ಇತ್ಯಾದಿ ಸೌಲಭ್ಯ ನೀಡುವ ಮೂಲಕ ಉತ್ತಮ ಸೇವೆ ನೀಡುತ್ತಿದೆ ಎಂದು ಜಿಪಂ ಸಿಇಒ ಕೆ.ಬಿ. ಆಂಜನಪ್ಪ ಹೇಳಿದರು. ಬಸವೇಶ್ವರ ನಗರದಲ್ಲಿ ಶ್ರೇಯಸ್ ಸಂಸ್ಥೆಯಿಂದ ನಡೆಯುತ್ತಿರುವ ಶ್ರೇಯಸ್ ಬಾಲಕಾರ್ಮಿಕರ ವಿಶೇಷ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಹೊದಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ತಿಪ್ಪೇಸ್ವಾಮಿ ಎಂ. ಹೊಸಮನಿ, ಸಿ.ವಿ. ಹೊರಟ್ಟಿ, ಎಂ.ಎನ್. ಮಾಳಗೇರ, ಪಂಪನಗೌಡ ಮೇಲ್ಸೀಮೆ, ಎಸ್.ಎಂ. ಗಡ್ಡದ ಇತರರು ಇದ್ದರು. ನಾಗರಾಜ ಡಿಳ್ಳೆಪ್ಪನವರ ನಿರೂಪಿಸಿದರು. ಶ್ರುತಿ ಹೊಳಲ ಸ್ವಾಗತಿಸಿದರು. ಪುಷ್ಪಲತಾ ಎಸ್.ಸಿ. ವಂದಿಸಿದರು.
ಟೇಬಲ್ ಟೆನಿಸ್ನಲ್ಲಿ ಜಿಎಚ್ ಕಾಲೇಜು ಪ್ರಥಮ
ಹಾವೇರಿ: ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಕಿಟೆಲ್ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ಟೇಬಲ್ ಟೆನಿಸ್ ಪ್ರಥಮ ವಲಯದ ಪಂದ್ಯಾವಳಿಗಳಲ್ಲಿ ಕಾಲೇಜಿನ ಪುರುಷ ಹಾಗೂ ಮಹಿಳಾ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ಈ ಸಾಧನೆ ಮಾಡುವ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಂಸ್ಥೆಯ ಕಾರ್ಯಾಧ್ಯಕ್ಷರು, ಸ್ಥಾನಿಕ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಅಧ್ಯಾಪಕರು ಮತ್ತು ದೈಹಿಕ ಶಿಕ್ಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.