ಕಾರ್ಣಿಕೋತ್ಸವಕ್ಕೆ ಜನಸಾಗರ
ನಾಡಿನ ಪ್ರಸಿದ್ಧ ಸಮೀಪದ ಮೈಲಾರ ಸುಕ್ಷೇತ್ರದ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಫೆ. 16ರಂದು ಸಂಜೆ ನಡೆಯಲಿದ್ದು, ಕಾರ್ಣಿಕದ ನುಡಿ ಕೇಳಲು ಹಾಗೂ ಮೈಲಾರ ಸ್ವಾಮಿಯ ದರ್ಶನಕ್ಕಾಗಿ ರಾಜ್ಯದ ಮೂಲೆ ಮೂಲೆಯಿಂದ ಅಲ್ಲದೇ ಹೊರ ರಾಜ್ಯಗಳಿಂದಲೂ ಜನ ಸಾಗರವೇ ಹರಿದುಬರುತ್ತಿದೆ.
ಚಕ್ಕಡಿ, ಟ್ರ್ಯಾಕ್ಟರ್, ಕಾಲ್ನಡಿಗೆ, ವಿವಿಧ ವಾಹನಗಳು ಮೈಲಾರದ ಕಡೆ ಸಾಗುತ್ತಿವೆ. ಪೌರಾಣಿಕ ಹಿನ್ನೆಲೆಯುಳ್ಳ ಸುಕ್ಷೇತ್ರ ಮೈಲಾರ ಸ್ವಾಮಿಯ ಜಾತ್ರೆ ಪ್ರತಿವರ್ಷ ಸಂಭ್ರಮದಿಂದ ಜರುಗುತ್ತದೆ. ಕಳೆದ ಮೂರು ದಿನಗಳಿಂದ ಜಾತ್ರೆ ಪ್ರಾರಂಭವಾಗಿದ್ದು, ಮೈಲಾರ ದೇವಸ್ಥಾನದಲ್ಲಿ ನಿತ್ಯ ಪೂಜೆ ಪುನಸ್ಕಾರಗಳು, ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಲಿವೆ. ಭಾನುವಾರ ನಡೆಯಲಿರುವ ಕಾರ್ಣಿಕೋತ್ಸವ ಬಹಳಷ್ಟು ಮಹತ್ವ ಪಡೆದಿದೆ. ವರ್ಷದಲ್ಲಿ ಮುಂದೇ ಏನಾಗಬಹುದು ಎಂಬ ಭವಿಷ್ಯವನ್ನು ಈ ಸಂದರ್ಭದಲ್ಲಿ ಹೇಳಲಾಗುತ್ತದೆ. ಗೊರವಪ್ಪ 11 ದಿವಸ ಉಪವಾಸ ವ್ರತ ಪಾಲಿಸಿ, ಫೆ. 16ರಂದು ಸಂಜೆ ವೈಭವದ ಮೆರವಣಿಗೆಯೊಂದಿಗೆ ಮೈಲಾರ ದೇವಸ್ಥಾನದಿಂದ ಡೆಂಕನಮರಡಿಗೆ ತೆರಳಿ, ಡೆಂಕನಮರಡಿಯ ಭವ್ಯ ವೇದಿಕೆಯಲ್ಲಿ ಸುಮಾರು ಅಡಿ ಎತ್ತರವಾಗಿ ನಿರ್ಮಿಸಿದ ಬಿಲ್ಲನ್ನೇರಿ ಗೊರವಪ್ಪ ಕಾರ್ಣಿಕವನ್ನು (ವರ್ಷದ ಭವಿಷ್ಯ) ಹೇಳಿ ಕೆಳಗೆ ಒಂದು ದಿಕ್ಕಿನತ್ತ ಬೀಳುತ್ತಾನೆ. ಅಷ್ಟೊಂದು ಅಪಾರ ಜನಸ್ತೋಮ ಸೇರಿದ್ದರೂ ಅಲ್ಲಿ ಶಾಂತ ಚಿತ್ತರಾಗಿ ಕುಳಿತಿರುತ್ತಾರೆ.
ಭವಿಷ್ಯವಾಣಿಯನ್ನು ಪ್ರತಿವರ್ಷ ಗೊರವಯ್ಯರಾದ ಮಾಲತೇಶಪ್ಪ ನುಡಿಯುತ್ತಿದ್ದರು. ಅವರ ಅನಾರೋಗ್ಯದ ನಿಮಿತ್ತ ಮೈಲಾರ ದೇವಸ್ಥಾನದ ಪರಂಪರೆಯಂತೆ ಮಾಲತೇಶಪ್ಪನವರ ಹಿರಿಯ ಮಗನಾದ ಮಂಜುನಾಥ ಅವರಿಗೆ ಕಾರ್ಣಿಕೋತ್ಸವದ ಪಟ್ಟಾಧಿಕಾರವನ್ನು ಈ ಹಿಂದೆ ನೀಡಿದ್ದು ಗೊರವಯ್ಯ ಮಂಜುನಾಥ ಅವರು ಈ ವರ್ಷದ ಕಾರ್ಣಿಕೋತ್ಸವವನ್ನು ನಡೆಸಿಕೊಡಲಿದ್ದಾರೆ. ವರ್ಷದ ಭವಿಷ್ಯವಾಣಿ ಏನಾಗುತ್ತದೆ ಎಂಬ ತವಕದಲ್ಲಿ ಜನ ಕಾಯುತ್ತಿದ್ದಾರೆ. ಕಾರ್ಣಿಕವನ್ನು ಹೇಳಿ ಗೊರವಯ್ಯ ಯಾವ ದಿಕ್ಕಿನಲ್ಲಿ ಬಿಳುತ್ತಾನೋ ಆ ದಿಕ್ಕಿನ ಕಡೆಗೆ ಸುಖ ಸಮೃದ್ಧಿ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಕಾರ್ಣಿಕೋತ್ಸವದ ಮರುದಿನ ಗೊರವಯ್ಯನವರಿಂದ ಅನೇಕ ಪವಾಡಗಳು ನಡೆಯುತ್ತವೆ. ಅದನ್ನು ನೋಡಲೆಂದೇ ಜನ ಮುಗಿದು ಬಿದ್ದಿರುತ್ತಾರೆ.
ಸಾರಿಗೆ ವ್ಯವಸ್ಥೆ: ಲಕ್ಷಾಂತರ ಜನ ಬಂದು ಹೋಗುವ ಪ್ರಸಿದ್ಧ ಮೈಲಾರ ಲಿಂಗೇಶ್ವರ ಜಾತ್ರೆಗೆ ನಾಡಿನ ಮೂಲೆ ಮೂಲೆಯಿಂದ ಆಗಮಿಸುವ ಭಕ್ತಾದಿಗಳಿಗೆ ರಾಣಿಬೆನ್ನೂರು, ಹಾವೇರಿ, ಲಕ್ಷ್ಮೇಶ್ವರ ಡಿಪೋದಿಂದ ಫೆ. 14ರಿಂದ ವಿಶೇಷವಾಗಿ ಬಸ್ ಸೌಕರ್ಯ ಹೆಚ್ಚಿಸಲಾಗಿದೆ. ಕ್ಷೇತ್ರವ್ಯಾಪ್ತಿ ಎಲ್ಲಿ ನೋಡಿದರಲ್ಲಿ ಸಾಗರೋಪಾದಿಯಲ್ಲಿ ಭಕ್ತಾದಿಗಳು ಏಳು ಕೋಟಿ... ಏಳು ಕೋಟಿ ಎಂಬ ಹರ್ಷೋದ್ಗಾರ ಹಾಕುತ್ತಾ ತೆರಳುತ್ತಿದ್ದಾರೆ. ಉತ್ತಮ ಸಾರಿಗೆ ವ್ಯವಸ್ಥೆ ಇದ್ದರೂ ಗ್ರಾಮೀಣ ಪ್ರದೇಶದ ಭಕ್ತಾದಿಗಳು ಪ್ರತಿ ವರ್ಷದಂತೆ ಎತ್ತಿನ ಚಕ್ಕಡಿಗಳನ್ನು ತೆಗೆದುಕೊಂಡು ಸುಕ್ಷೇತ್ರ ಮೈಲಾರಕ್ಕೆ ತೆರಳುತ್ತಿದ್ದಾರೆ.