ಗೋವಿನ ಜೋಳ ಖರೀದಿ ಸ್ಥಗಿತ: ಪ್ರತಿಭಟನೆ
ಹಿರೇಕೆರೂರು: ಗೋವಿನ ಜೋಳ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದನ್ನು ಖಂಡಿಸಿ, ತಾಲೂಕಿನ ರೈತರು ರಸ್ತೆತಡೆ ನಡೆಸಿ ದಿಢೀರ್ ಪ್ರತಿಭಟನೆ ಕೈಗೊಂಡು, ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹಿರೇಕೆರೂರು ಕೋಡ ರಸ್ತೆ ಮತ್ತು ಹಿರೇಕೆರೂರು ಮಾಸೂರ ರಸ್ತೆಗಳನ್ನು ಬಂದ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಗೋದಾಮುಗಳು ಗೋವಿನ ಜೋಳ ಚೀಲಗಳಿಂದ ಭರ್ತಿಯಾದ ಹಿನ್ನೆಲೆಯಲ್ಲಿ ಸರ್ಕಾರದ ಬೆಂಬಲ ಬೆಲೆ ಖರೀದಿ ಕೇಂದ್ರ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಅಲ್ಲದೆ ಕಳೆದ ಹಲವಾರು ದಿನಗಳಿಂದ ಗೋವಿನ ಜೋಳ ತುಂಬಿ ಕೊಂಡು ಲಾರಿ ಹಾಗೂ ಟ್ರ್ಯಾಕ್ಟರ್ ಹೇರಿಕೊಂಡು ಬಂದು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿಲ್ಲಿಸಲಾಗಿದೆ. ಈಗಾಗಲೇ ಎಪಿಎಂಸಿ ಆವರಣ ತುಂಬಿದೆ. ಈಗ ಬಂದಿರುವ ಗೋವಿನ ಜೋಳದ ಚೀಲಗಳನ್ನು ತೆಗೆದುಕೊಳ್ಳದ್ದರಿಂದ ಅನಿವಾರ್ಯವಾಗಿ ಬೀದಿಗಳಿದು ಪ್ರತಿಭಟನೆ ಮಾಡಬೇಕಾಯಿತು ಎಂದು ರೈತರು ತಮ್ಮ ಅಳಲು ತೋಡಿಕೊಂಡರು.
ಸಂಚಾರಕ್ಕೆ ಅಡ್ಡಿ: ತಾಲೂಕಿನ ಹಿರೇಕೆರೂರು ಕೋಡ ರಸ್ತೆ ಮತ್ತು ಹಿರೇಕೆರೂರು ಮಾಸೂರ ರಸ್ತೆಗಳ ಕೇಂದ್ರ ಸ್ಥಳವಾದ ಹಿರೇಕೆರೂರು ಪಟ್ಟಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗಳಾಗಿದ್ದು ದಿಢೀರನೆ ಪ್ರತಿಭಟನೆ ನಡೆಸಿ, ರಸ್ತೆ ಟ್ರ್ಯಾಕ್ಟರ್ಗಳನ್ನು ಅಡ್ಡವಾಗಿ ನಿಲ್ಲಿಸಿದ ಪರಿಣಾಮ ಸಂಚಾರಕ್ಕೆ ತೀವ್ರ ವ್ಯತ್ಯಯ ಉಂಟಾಯಿತು. ಅದರಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಾತ್ರೆ ರಥೋತ್ಸವದಂತಹ ಧಾರ್ಮಿಕ ಕಾರ್ಯಗಳು ಇರುವುದರಿಂದ ಆಯಾಗ್ರಾಮಗಳಿಗೆ ಹೋಗುವ ಸಾರ್ವಜನಿಕರಿಗೆ ಮತ್ತು ದೈನಂದಿನ ಕಾರ್ಯಗಳಿಗೆ ಹಿರೇಕೆರೂರು ಪಟ್ಟಣಕ್ಕೆ ಬರುವ ಹಾಗೂ ಹೋಗುವ ಜನತೆಗೆ ತೀವ್ರ ತೊಂದರೆಯಾಯಿತು. ದ್ವಿಚಕ್ರವಾಹನ ಸೇರಿದಂತೆ ಬಸ್, ಆಟೋ ಮೊದಲಾದ ವಾಹನಗಳನ್ನು ಪ್ರತಿಭಟನಾಕಾರರು ನಿಲ್ಲಿಸಿದ್ದರಿಂದ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು.
ಭಾರಿ ಸಂಖ್ಯೆಯಲ್ಲಿ ಬಂದ ರೈತರು: ಮುಕ್ತ ಮಾರುಕಟ್ಟೆಯಲ್ಲಿ ಗೋವಿನ ಜೋಳದ ದರದಲ್ಲಿ ಭಾರಿ ಕುಸಿತದ ಪರಿಣಾಮವಾಗಿ ಈ ಬಾರಿ ತಾಲೂಕಿನ ಎಲ್ಲ ರೈತರು ಸರ್ಕಾರದ ಬೆಂಬಲ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ಆಸಕ್ತಿ ತೋರಿಸಿದ್ದರ ಪರಿಣಾಮವಾಗಿ ಇಂದು ಸರ್ಕಾರದ ಬೆಂಬಲ ಬೆಲೆ ಖರೀದಿಗೆ ಗೋದಾಮುಗಳ ಸಂಖ್ಯೆ ವಿರಳವಾಗಿದೆ. ಇದರಿಂದಾಗಿ ಇದೀಗ ಬಂದ ರೈತರಿಗೆ ಜೋಳದ ಅನ್ಲೋಡ್ ಸ್ಥಳದ ಕೊರತೆ ಇದೆ.
ರೈತರಲ್ಲಿ ಆತಂಕ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ನ. 23ರಿಂದ ಸರ್ಕಾರದ ಬೆಂಬಲ ಬೆಲೆಯಲ್ಲಿ ಕ್ವಿಂಟಲ್ ಗೋವಿನಜೋಳಕ್ಕೆ ರು. 1310 ಖರೀದಿಸಲಾಗಿದೆ. ಫೆಬ್ರವರಿ ಅಂತ್ಯದವರೆಗೆ ಖರೀದಿ ಮಾಡಲಾಗುತ್ತಿದೆ ಎಂದು ಸರ್ಕಾರ ಅಧಿವೇಶನದಲ್ಲಿ ಪ್ರಕಟಿಸಿದ್ದರಿಂದ ಖರೀದಿಗೆ ಇನ್ನು ಕೆಲವೇ ದಿನಗಳಿದ್ದರಿಂದ ರೈತರು ತರಾತುರಿಯಲ್ಲಿ ಗೋವಿನ ಜೋಳವನ್ನು ಖರೀದಿ ಕೇಂದ್ರಕ್ಕೆ ತಂದಿದ್ದಾರೆ. ಇದರಿಂದಾಗಿ ಗೋವಿನ ಜೋಳ ಚೀಲಗಳನ್ನು ಇಡಲು ಉತ್ತಮ ಗೋದಾಮುಗಳು ಇಲ್ಲದಿರುವುದು ರೈತರಿಗೆ ಹಾಗೂ ಖರೀದಿ ಕೇಂದ್ರದವರಿಗೆ ತಲೆನೋವಾಗಿದೆ. ಪ್ರತಿಭಟನೆಯಲ್ಲಿ ತಾಲೂಕಿನ ರೈತರಾದ ದೊಡ್ಡಗೌಡ ಅಂಗಡಿ, ಬಸವರಾಜ ಪೂಜಾರ, ಬಸವರಾಜ ದಿವಿಗೀಹಳ್ಳಿ, ನಾಗರಾಜ ದೊಡ್ಡಗೌಡ್ರ, ಪ್ರಭು ಮಾಜಿಗೌಡ್ರ, ರಾಜಸಾಬ್ ದೊಡ್ಡಗುಬ್ಬಿ ಸೇರಿದಂತೆ ರಟ್ಟಿಹಳ್ಳಿ ಹೋಬಳಿ ಗ್ರಾಮಗಳಾದ ಯಡಗೋಡಿ ಮಾದಾಪುರ, ಚಿಕ್ಕಯಡಚಿ, ಜೋಗಿಹಳ್ಳಿ, ಮೊದಲಾದ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.