ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಆತ್ಮವಿಶ್ವಾಸ ಕೊರತೆ: ಜೀವನ ವೈಫಲ್ಯ

Mainashree
Updated On : 17 Feb 2014, 10:20 am

ಬ್ಯಾಡಗಿ: ವಿದ್ಯಾರ್ಥಿಗಳಲ್ಲಿ ಅಸಾಧಾರಣ ಪ್ರತಿಭೆಯಿದ್ದರೂ ಆತ್ಮವಿಶ್ವಾಸದ ಕೊರತೆಯಿಂದ ಜೀವನದಲ್ಲಿ ವೈಫಲ್ಯತೆ ಕಾಣುತ್ತಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯರಾದ ಗಿರಿಜಾದೇವಿ ದುರ್ಗದಮಠ ವಿಷಾದ ವ್ಯಕ್ತಪಡಿಸಿದರು.
ಭಾನುವಾರ ಮೋಟೆಬೆನ್ನೂರಿನ ಬಳ್ಳಾರಿ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬದುಕಿಗೆ ಶಿಕ್ಷಣದ ಅವಶ್ಯ. ಆದರೆ, ಶಿಕ್ಷಣದಿಂದ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ವಿಫಲವಾಗುವ ವಿದ್ಯಾರ್ಥಿಗಳು ಅಧೈರ್ಯಗೊಳ್ಳುತ್ತಿದ್ದಾರೆ. ಶಿಕ್ಷಣದಿಂದಲೇ ಸಮಾಜ ಹಾಗೂ ದೇಶದ ಪ್ರಗತಿ ವಾಸ್ತವವಾಗಿದ್ದರೂ ಉದ್ಯೋಗ ಭರವಸೆಯಿಲ್ಲದ ಶೈಕ್ಷಣಿಕ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಮಾರಕವೆನಿಸುತ್ತಿದೆ ಎಂದು ವಿಷಾದಿಸಿದರು.
ಪಾಲಕರಲ್ಲಿರುವ ಅಂಕಗಳ ಹಂಬಲ ಕೆಲವೊಮ್ಮೆ ವಿದ್ಯಾರ್ಥಿಗಳ ಬದುಕನ್ನೇ ಕಸಿದುಕೊಳ್ಳುತ್ತಿದೆ. ಉತ್ತಮ ಅಂಕ ಪಡೆದ ವಿದ್ಯಾರ್ಥಿ ಮಹಾವಿದ್ಯಾಲಯಕ್ಕೆ ಒಳ್ಳೆ ಹೆಸರನ್ನು ತರಬಹುದು. ಆದರೆ, ಶಿಕ್ಷಣದಿಂದ ಬದುಕು ಮತ್ತು ಭವಿಷ್ಯ ರೂಪಿಸಿಕೊಳ್ಳುವ ವ್ಯಕ್ತಿ ಇಡಿ ಸಮಾಜ, ದೇಶಕ್ಕೆ ಉತ್ತಮ ಹೆಸರನ್ನು ತರಬಲ್ಲ ಶಕ್ತಿ ಹೊಂದಿರುತ್ತಾನೆ ಎಂದರು.
ಅಂಧ ಸಾಧಕ ಸ್ಕೇಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ನಾನು ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧಿಸುವ ಛಲವೊಂದಿದ್ದರೆ ಬದುಕು ರೂಪಿಸಿಕೊಳ್ಳಬಹುದು. ವರ್ತಮಾನದಲ್ಲಿರುವ ನಾವು ಭವಿಷ್ಯದಲ್ಲಿ ವಿದ್ಯಾರ್ಥಿಗಳ ಮೇಲೆ ಎಲ್ಲ ರಂಗದಲ್ಲಿಯೂ ಜವಾಬ್ದಾರಿ ಹೆಚ್ಚಾಗುತ್ತಿದೆ. ಅಂಕಗಳಿಗೆ ಪ್ರಾಧಾನ್ಯತೆ ನೀಡುವ ಬದಲು ಪಾಲಕರು ಮಕ್ಕಳ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸುವ ಮೂಲಕ ಸಮಾಜದ ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ರೂಪಿಸಬೇಕಾಗಿದೆ ಎಂದರು. 2013-14 ಸಾಲಿನ ವಿವಿಧ ಕ್ರೀಡಾಕೂಟ, ಚರ್ಚಾಸ್ಪರ್ಧೆ, ಪ್ರತಿಭಾಕಾರಂಜಿ ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಅಂಧ ಸಾಧಕ ಸ್ಕೇಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ನಾನು ಪಾಟೀಲ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು. ಎಸ್.ಆರ್. ಬಳ್ಳಾರಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಬಳ್ಳಾರಿ, ಶಿವಬಸಪ್ಪ ಕುಳೇನೂರ, ನಾಗರಾಜ ಬಳ್ಳಾರಿ, ಶಂಕರಗೌಡ ಪಾಟೀಲ, ಪಾಲಾಕ್ಷಗೌಡ ಪಾಟೀಲ, ರವಿ ಶೆಟ್ಟರ, ವೀರಭದ್ರಗೌಡ ಹೊಮ್ಮರಡಿ ಆಡಳಿತಾಧಿಕಾರಿ ಸಿ.ಸಿ. ಪ್ರಭುಗೌಡ್ರ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯ ಸೋಮನಗೌಡ ಖಾನಗೌಡ್ರ ಸ್ವಾಗತಿಸಿದರು. ಜಯಶ್ರೀ ನೀರಲಗಿಮಠ ನಿರೂಪಿಸಿದರು. ಅಜಯ ಕಡೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement