ಆಪ್ನಿಂದ ಭ್ರಷ್ಟಾಚಾರ ವಿರೋಧಿ ಸಮಾವೇಶ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 16
ನಗರದ ಮುರುಘಾಮಠದ ಆವರಣದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಾರ್ಯಕರ್ತರ ಸಭೆ ಭಾನುವಾರ ಜರುಗಿತು.
ಸಭೆಯಲ್ಲಿ ಆಪ್ ಕಾರ್ಯಕರ್ತರನ್ನು ಬೂತ್ ಏಜೆಂಟರುಗಳಾಗಿ ಆಯೋಜಿಸಲಾಯಿತು. ಈ ತಿಂಗಳಾಂತ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಸಮಾವೇಶವನ್ನು ನಗರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಮಾಹಿತಿ ಹಕ್ಕಿನಡಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ನಡೆಸಿದ ಕಾಮಗಾರಿ, ಅನುದಾನದ ಬಳಕೆ ಹಾಗೂ ವಿವಿಧ ಯೋಜನೆಯ ಫಲಾನುಭವಿಗಳ ಕುರಿತು ಮಾಹಿತಿ ಪಡೆಯುವ ಬಗ್ಗೆ ಹಾಗೂ ಲೋಕಸಭೆ ಚುನಾವಣೆಯ ಬೂತ್ ಕಾರ್ಯಕರ್ತರ ನೇಮಕ ಮತ್ತು ಜಾಡು ಯಾತ್ರೆ ಬಗ್ಗೆ ಚರ್ಚಿಸಿ ರೂಪರೇಷೆ ತಯಾರಿಸಲಾಯಿತು.
ಸಭೆಯಲ್ಲಿ ಆಪ್ ಜಿಲ್ಲಾ ಸಂಚಾಲಕ ಶಿವಾನಂದ ಹಳ್ಳೇರ, ಮುಖಂಡರಾದ ಎನ್.ಆರ್. ಅಬಲೂರ, ಟಿ.ಬಿ. ಕುಲಕರ್ಣಿ, ರಾಮಣ್ಣ ಬೊಮ್ಮೋಜಿ, ಗುಬ್ಬಣ್ಣನವರ, ಲಿಂಗನಗೌಡ ಅರಳಿಹಳ್ಳಿ ಇತರರಿದ್ದರು.