ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾವ್ಯ ರಚನೆ ಒಂದು ಕಲೆಯಾಗಿ ಹೊರಹೊಮ್ಮಬೇಕು

Mainashree
Updated On : 17 Feb 2014, 10:20 am

ಹಾನಗಲ್ಲ: ಕವಿತೆ ಉಸಿರುಗಟ್ಟಬಾರದು, ನಮ್ಮೊಳಗಿನ ತಳಮಳಗಳನ್ನು ಕಾವ್ಯದ ಮೂಲಕ ಬಿಂಬಿಸುವ ಜತೆಗೆ ಕಾವ್ಯ ರಚನೆ ಒಂದು ಕಲೆಯಾಗಿ ಹೊರಹೊಮ್ಮಬೇಕೆಂದು ಸಾಹಿತಿ ಸತೀಶ ಕುಲಕರ್ಣಿ ನುಡಿದರು.
ಹಾನಗಲ್ಲ ತಾಲೂಕಿನ ಅರಳೇಶ್ವರಲ್ಲಿ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಯೋಜಿಸಿದ ಕಾವ್ಯ ರಚನೆ ಮತ್ತು ಕಾವ್ಯ ಪರಂಪರೆಯ ಕಲಿಕಾ ಎರಡು ದಿನಗಳ ಯುವ ಕಾವ್ಯ ಕಮ್ಮಟದ ಸಂವಾದ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೃಜನಶೀಲತೆ ನಮ್ಮೊಳಗಿನ ಕಾವ್ಯಶಕ್ತಿಯನ್ನು ಅನಾವರಣಗೊಳಿಸುತ್ತದೆ. ಮನುಷ್ಯ ಹೃದಯ, ಮನಸ್ಸು, ಮೆದುಳಿನ ಸೂಕ್ಷ್ಮತೆಗಳನ್ನು ಅನುಭವಿಸುತ್ತಾನೆ. ಸಾಹಿತಿ ಇಂಥ ಅನುಭವಗಳನ್ನು ಶಬ್ದರೂಪಗಳಲ್ಲಿ ಸಹೃದಯತೆಯಿಂದ ಕಟ್ಟುತ್ತಾನೆ. ಕಾವ್ಯರಚನೆ ಸಹಜ ಕ್ರಿಯೆಯಾಗಲು ನಿರಂತರ ಓದು ಹಾಗೂ ಸಮಾಜದ ಏರುಪೇರುಗಳನ್ನು ಕಣ್ಬಿಟ್ಟು ನೋಡುವ ಸಹೃದಯತೆ ಬೇಕು. ಕಾವ್ಯ ಪ್ರಕಾರಗಳನ್ನು ಅಧ್ಯಯನ ಮಾಡಬೇಕು. ಇದೊಂದು ನಿರಂತರ ಪ್ರಕ್ರಿಯೆ ಎಂದರು.
ಲೇಖಕಿ ಸಂಕಮ್ಮ ಸಂಕಣ್ಣನವರ ಸಂವಾದದ ಸಮನ್ವಯ ಮಾತುಗಳನ್ನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಕವಿಗಳಿಗೆ ಅತ್ಯುತ್ತಮವಾದ ಕಾವ್ಯಾಭಿರುಚಿಯ ಅವಕಾಶಗಳು ದೊರೆಯುತ್ತಿವೆ. ಇದನ್ನು ಬಳಸಿಕೊಂಡು ಸೃಜನಶೀಲತೆ ನಿರಂತರ ಪ್ರಕ್ರಿಯೆಯಾಗಬೇಕು. ಕವಿಗೋಷ್ಠಿಗಳು ಜನಪ್ರಿಯವಾಗುತ್ತಿವೆ. ಆದರೆ, ಕಾಲ ಬದಲಾದಂತೆ ಬರವಣಿಗೆಯೂ ಬದಲಾಗುತ್ತಿದೆಯಾದರೂ ಉತ್ತಮ ಸಮಾಜ ನಿರ್ಮಾಣದ ಸಹೃದಯ ಕಾವ್ಯಗಳು ಬರಬೇಕಾಗಿದೆ. ಯಾವುದೋ ಒತ್ತಾಯಕ್ಕಾಗಿ ಸೃಜನಶೀಲತೆ ಇಲ್ಲದೆ ಬರವಣಿಗೆಗೆ ಮುಂದಾದರೆ ಅದು ಮಾಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕವಿಗಳಾದ ಅಶೋಕ ಕೊಂಡ್ಲಿ, ಹಜರೇಸಾಬ ನದಾಫ ಕಾವ್ಯದ ಅನುಭವಗಳನ್ನು ಹಂಚಿಕೊಂಡರು. ಲೇಖಕ ಟಿ. ಶಿವಕುಮಾರ ಸ್ವಾಗತಿಸಿದರು. ಪ್ರಾಚಾರ್ಯ ಎಂ. ಪ್ರಸನ್ನಕುಮಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement