ಭ್ರಷ್ಟ ರಾಜಕಾರಣಿಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಶ್ರೀಕಾಂತ್
ಬ್ಯಾಡಗಿ: ಭ್ರಷ್ಟ ರಾಜಕಾರಣಿಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಬಿದ್ದಿದ್ದು, ಇತ್ತೀಚೆಗೆ ಇದೊಂದು ಹಣ ಮಾಡುವ ದಂಧೆಯಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಶ್ರೀಕಾಂತ್ ಚರಂತಿಮಠ ಆತಂಕ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಫೆ. 18ರಂದು ನಡೆಯಲಿರುವ ಆಮ್ ಆದ್ಮಿ ಪಕ್ಷದ ರ್ಯಾಲಿ ಹಿನ್ನೆಲೆಯಲ್ಲಿ ಭಾನುವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಪಕ್ಷದ ಉದ್ದೇಶಗಳನ್ನು ತಿಳಿಸುವ ಮೂಲಕ ಜನರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಫೆ. 18ರಂದು ಪಟ್ಟಣದಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಜಾತಿ ಭೇದ ಪಕ್ಷಗಳನ್ನು ಮರೆತು ಬಡವರು, ನಿರ್ಗತಿಕರು, ರೈತರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸುರೇಶ ಡಂಬಳ, ವೀರಭದ್ರಪ್ಪ ಶಿಡೇನೂರ, ಹೊನ್ನಪ್ಪ ದೇವರಗುಡ್ಡ, ರಾಜು ಓಲೇಕಾರ ಇನ್ನಿತರರು ಉಪಸ್ಥಿತರಿದ್ದರು.