ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲೇ ನಡೆಸಲಿ
ಹಾನಗಲ್ಲ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿ ಕೇಂದ್ರ ಸ್ಥಾನದಲ್ಲೆ ನಡೆಯಬೇಕೆಂಬ ಇಡೀ ಜಿಲ್ಲೆಯ ಸಾಹಿತ್ಯಾಸಕ್ತರ ಅಪೇಕ್ಷೆಗೆ ತಣ್ಣೀರೆರಚಬೇಡಿ, ಸೌಹಾರ್ದದಿಂದ ಸಂಭ್ರಮಿಸಬೇಕಾಗಿದೆ. ಪ್ರತಿಷ್ಠೆಯ ಮೂಲಕ ವೈಪರೀತ್ಯದ ಹೇಳಿಕೆ ನೀಡಿ ವಾತಾವರಣ ಕೆಡಿಸಬೇಡಿ ಎಂದು ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಸಾಹಿತಿ ಉದಯ ನಾಶಿಕ ಕಿವಿಮಾತು ಹೇಳಿದರು.
ಹಾನಗಲ್ಲ ತಾಲೂಕಿನ ಅರಳೇಶ್ವರಲ್ಲಿ ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಯೋಜಿಸಿದ ಕಾವ್ಯ ರಚನೆ ಮತ್ತು ಕಾವ್ಯ ಪರಂಪರೆಯ ಕಲಿಕಾ ಎರಡು ದಿನಗಳ ಯುವ ಕಾವ್ಯ ಕಮ್ಮಟದ ಎರಡನೇ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಗೆ ಸಮ್ಮೇಳನ ಬೇಕೆಂದು ಹೋರಾಟ ನಡೆಸಿರುವುದು ಹಾವೇರಿ ಕೇಂದ್ರ ಸ್ಥಾನದಲ್ಲಿಯೇ ಸಮ್ಮೇಳನ ನಡೆಯಬೇಕೆಂಬ ಉದ್ದೇಶವಾಗಿತ್ತು. ಆದರೆ ಹೋರಾಟದ ಫಲವಾಗಿ ಸಮ್ಮೇಳನ ದೊರೆತ ಮೇಲೆ ಸಮ್ಮೇಳನದ ಸ್ಥಾನವನ್ನು ಬದಲಾಯಿಸಲು ಹೊರಟಿರುವುದು ಸಮಂಜಸವಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಪೂರ್ವಾಪರಗಳನ್ನು ತಿಳಿಯದೆ ಹೇಳಿಕೆ ನೀಡಿ ಜಿಲ್ಲೆಯ ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳನ್ನು ಕದಡಿದ್ದಾರೆ. ಏನೇ ಆದರೂ ಹಾವೇರಿ ಕೇಂದ್ರ ಸ್ಥಾನದಲ್ಲಿಯೇ ಸಮ್ಮೇಳನ ನಡೆಯಬೇಕು ಎಂದ ಅವರು, ಕವಿಗೋಷ್ಠಿಯಲ್ಲಿ ಸಾಮಾಜಿಕ ಪ್ರಜ್ಞೆಯ ಕವನಗಳು ಪ್ರಸ್ತುತಗೊಂಡವು. ಸೃಜನಶೀಲತೆ ಜೀವಂತವಾದರೆ ಸಾಹಿತ್ಯ ಸಮೃದ್ಧವಾಗುತ್ತದೆ ಎಂದರು.
ಅಕ್ಕಿಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಗುರುದೇವ ಚಿರಡೋಣಿ ಮಾತನಾಡಿ, ಕಾವ್ಯ ಆಸ್ವಾದಿಸುವಂತಹದ್ದು, ಇದಕ್ಕೆ ಸೌಂದರ್ಯವೂ ಬೇಕು. ಕವಿಯಾದವನು ಒಳಗಣ್ಣು ತೆರೆದು ಬರವಣಿಗೆಗೊಳ್ಳಬೇಕೆ ಹೊರತು ಆವೇಶಕ್ಕೆ ಆಹುತಿಯಾಗಬಾರದು. ಕವಿಯೊಬ್ಬ ಯೋಗಿ, ಸಹೃದಯತೆ ಆತನಿಗೆ ಬೇಕು. ಯೋಗಿ ಮನಸ್ಸಿರಲಿ ಭಾಷೆಯ ಮಡಿವಂತಿಕೆ ಬೇಡ ಬರವಣಿಗೆ ನಿರಂತರ ಪ್ರಕ್ರಿಯೆಯಾಗಲಿ ಎಂದರು.
ಕವಿಗಳಾದ ವಿ.ವಿ. ಮಾಳೋದಕರ, ಕೆ.ವೆಂಕಟರಮಣಪ್ಪ, ಶ್ರೀಕಾಂತ ದೊಡ್ಡಕುರುಬರ, ಅನಿತಾ ಗೋಡಿಹಾಳ, ಗಿರೀಶ ಕುಂಬಾರ, ಗಣೇಶಾಡೂರ, ಎಂ.ಎಂ.ಮುದ್ದೇರ, ಮಾರುತಿ ಕೊರಗರ, ಜಿ.ಎ.ಮೇತ್ರಿ, ಜೆ.ಎಚ್.ಬಣಕಾರ, ಮೇಘನಾ ಸಿ.ಎನ್, ನಾಗರಾಜ ಶೀಗೀಹಳ್ಳಿ, ದೀಪಾ ಗೋನಾಳ, ಜಾಕಿಯಾ ಮನ್ನಂಗಿ, ನೀಲಾಂಬಿಕಾ ಪಾಟೀಲ, ಇಂಧುಮತಿ ಕೋಟಿ, ಶಿಲ್ಪಾ ನಾಡಗೌಡ, ನಿರ್ಮಲಾ ಜೋಗೇರ, ನಿಂಗಪ್ಪ ಮರಡಿ, ಪವಿತ್ರ ಗುಡಗುಡಿ, ಸಂದೀಪ ಗೌಡ, ಅನಿಲಕುಮಾರ ಗೋಣೆಣ್ಣನವರ, ದೀಪಾ ಹೊಸಕೊಪ್ಪ, ಶಿಲೀಲಾ ಲೇಖಿ, ರಾಜಕುಮಾರ ಹಿತ್ಲೇರ, ಸಂತೋಷ ಶೆಟ್ಟರ, ರೇಖಾ ಕತ್ಲೇರ, ಸೋಮಲಿಂಗಪ್ಪ ಪೂಜಾರ, ವಿಶಾಲ ಶೆಟ್ಟರ ತಾವು ರಚಿಸಿದ ಕವನಗಳನ್ನು ವಾಚಿಸಿದರು. ಪ್ರಸನ್ನಕುಮಾರ ಸ್ವಾಗತಿಸಿದರು. ಅಶೋಕ ಕೊಂಡ್ಲಿ ನಿರೂಪಿಸಿದರು. ಡಾ. ಸಿ.ಕೊಟ್ರೇಶ ವಂದಿಸಿದರು.