ಇಂದಿನಿಂದ ಸಂಗೀತೋತ್ಸವ, ಪ್ರಶಸ್ತಿ ಪ್ರದಾನ
ಹಾನಗಲ್ಲ: ಗಾನಕೋಗಿಲೆ ಖ್ಯಾತಿಯ ದಿ. ಮಹಾಲಕ್ಷ್ಮೀ ಬಡಿಗೇರ ಸ್ಮರಣಾರ್ಥ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 18ರಿಂದ 20ರವರೆಗೆ ಹಾನಗಲ್ಲ ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ನಿಮಿತ್ತ ಸಂಗೀತ, ಚಿತ್ರಕಲಾ ಸ್ಪರ್ಧೆ, ಭಾವಗೀತೆ, ಭಕ್ತಿಗೀತೆ, ನೃತ್ಯ, ನಾಟಕ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯುವುದು.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಚಿತ್ರಕಲಾ, ಭಾವಗೀತೆ, ಭಕ್ತಿಗೀತೆ, ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 3-30ರಿಂದ ಹಿರಿಯ ಸಂಗೀತ ಕಲಾವಿದ ಬಸನಗೌಡ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಬಿ. ಹುಲಗಣ್ಣನವರ ಅಧ್ಯಕ್ಷತೆ ವಹಿಸುವರು. ಸಮಿತಿಯ ಉಪಾಧ್ಯಕ್ಷೆ ಚಂದ್ರಕಾಂತಮ್ಮ ಜ್ಯೋತಿ ಬೆಳಗಿಸುವರು. ನಿವೃತ್ತ ಕಂದಾಯ ಅಧಿಕಾರಿ ಗಣೇಶಾಚಾರ ಅವರು ಮಹಾಲಕ್ಷ್ಮೀ ಬಡಿಗೇರ ಅವರ ಭಾವಚಿತ್ರ ಅನಾವರಣಗೊಳಿಸುವರು. ಸಂಜೆ ಎಚ್.ಪಿ. ವೆಂಕಟೇಶ, ಎಂ.ಬಿ. ಪ್ರವೀಣ, ಫಕ್ಕೀರಪ್ಪ ಭಜಂತ್ರಿ, ಓ.ಬಿ. ವಿನೋದಾ, ಭಾಗ್ಯವತಿ ಕೋಡಬಾಳ ಸೇರಿದಂತೆ 20ಕ್ಕೂ ಅಧಿಕ ಕಲಾವಿದರು ಸಂಗೀತ ಸೇವೆ ನೀಡುವರು.
ಫೆ. 19ರಂದು ಮಧ್ಯಾಹ್ನ 12 ಗಂಟೆಗೆ ವಿಶ್ವಕರ್ಮ ಮಹಾಮಂಡಲ ರಾಜ್ಯಾಧ್ಯಕ್ಷ ಎಲ್. ನಾಗರಾಜಾಚಾರ ಅವರ ಅಧ್ಯಕ್ಷತೆಯಲ್ಲಿ ಮಹಾಲಕ್ಷ್ಮೀ ಬಡಿಗೇರ ಅವರ ನೆನಪಿಗೆ ವಿಶ್ವಕರ್ಮ ಸಮಾಜದಿಂದ ಸಭಾಭವನವೊಂದನ್ನು ನಿರ್ಮಿಸುವುದು ಹಾಗೂ ಸಮಾಜದ ಅಭಿವೃದ್ಧಿಯ ಕುರಿತು ಚಿಂತನಾ ಸಭೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮಾಜಿ ಸಚಿವ ಸಿ.ಎಂ. ಉದಾಸಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. ಶಾಸಕ ಮನೋಹರ ತಹಶೀಲ್ದಾರ ಕಾರ್ಯಕ್ರಮ ಉದ್ಘಾಟಿಸುವರು.
ಗಣ್ಯರನ್ನು ಸಂಸದ ಶಿವಕುಮಾರ ಉದಾಸಿ ಸನ್ಮಾನಿಸುವರು. ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡ್ರ, ವಿಶ್ವನಾಥ ಹಿರೇಮಠ, ಎಂ.ಬಿ. ಹುಲಗಣ್ಣನವರ, ಎಂ.ಎಚ್. ಪಾಟೀಲ, ನಾಗರಾಜ ಕುಡಪಲಿ, ಅಶೋಕ ಕಾಶೆಟ್ಟಿ, ಪದ್ಮನಾಭ ತಿರಕಣ್ಣನವರ, ಜಯಂತ ಹುಬ್ಬಳ್ಳಿ, ಯೂಸೂಫ ಉಮರ ಅವರನ್ನು ಸನ್ಮಾನಿಸಲಾಗುತ್ತದೆ.
ಫೆ. 20ರಂದು ಅಕ್ಕಿಆಲೂರಿನ ಡಾ. ಗಗನ ಮಾಳೋದೆ, ಪ್ರಿಯಾ ಗಗನ ಮಳೋದೆ ಅವರಿಂದ ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಉಚಿತ ದಂತ ತಪಾಸಣಾ ಶಿಬಿರ ನಡೆಯಲಿದೆ. ಎಂ.ಬಿ. ತೇಜಶ್ವಿನಿ, ಎಂ.ಬಿ. ವಿಶ್ವನಾಥ, ರಾಜೇಶ್ವರಿ ಸಾರಂಗಮಠ, ಪಿ.ಬಿ. ಯುವರಾಜ, ಸಿ.ಬಿ. ಶ್ರೀಲಕ್ಷ್ಮೀ, ಕುಮಾರಿ ಘನಶ್ರೀ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 8 ಗಂಟೆಗೆ ಅಕ್ಕಿಆಲೂರು ವಿರಕ್ತಮಠದ ಶಿವಬಸವಸ್ವಾಮಿಗಳು ರಚಿಸಿದ ಸಮಾಜಕ್ಕೆ ಹಾಲುಣಿಸಿದ ಹಾಲಯ್ಯ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಗೋಪಾಲಾಚಾರ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.