ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೋದಿ ಪ್ರಧಾನಿ ಹುದ್ದೆಗೇರಿಸುವುದು ಅನಿವಾರ್ಯ

Mainashree
Updated On : 18 Feb 2014, 10:31 am

ಬ್ಯಾಡಗಿ:  ವಂಶಪಾರಂಪರ್ಯ ಆಡಳಿತಕ್ಕೆ ಕೊನೆ ಹಾಡುವ ಮೂಲಕ ನರೇಂದ್ರ ಮೋದಿಯವರಂತಹ ಪ್ರಾಮಾಣಿಕ ರಾಜಕಾರಣಿಗಳನ್ನು ಅಧಿಕಾರಕ್ಕೆ ತರುವ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಬಿಜೆಪಿ ಯುವ ಮೋರ್ಚಾದ ತಾಲೂಕಾಧ್ಯಕ್ಷ ವಿಜಯಭರತ ಬಳ್ಳಾರಿ ಪ್ರತಿಪಾದಿಸಿದರು.
ಸೋಮವಾರ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಪಟ್ಟಣದ ಎಸ್‌ಜೆಜೆಎಂ ಪದವಿಪೂರ್ವ ಮಹಾವಿದ್ಯಾಲಯದ ಬಳಿ ಏಕ ಭಾರತ ಶ್ರೇಷ್ಠ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನರೇಂದ್ರ ಮೋದಿಯಂತಹ ಸಮರ್ಥ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಬೇಕಾದ ಅನಿವಾರ್ಯ ಸ್ಥಿತಿಗೆ ದೇಶ ಬಂದಿದೆ. ಗುಜರಾತ್ ರಾಜ್ಯದಲ್ಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು ಬಹುಶಃ ವಿಶ್ವಕ್ಕೆ ಮಾದರಿಯಾಗಿದ್ದು, ಮೋದಿ ಪ್ರಧಾನಿಯಾದ ಬಳಿಕ ಅದೇ ಮಾದರಿ ದೇಶದ ಅಭಿವೃದ್ಧಿ ಮಾಡುವ ವಿಶ್ವಾಸವಿದೆ ಎಂದರು.
ಯುಪಿಎ ಸರ್ಕಾರದಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಒಬ್ಬ ಉತ್ತಮ ಅರ್ಥಶಾಸ್ತ್ರಜ್ಞನಾಗಿದ್ದು ಸತತ 10 ವರ್ಷ ಅಧಿಕಾರ ನಡೆಸಿದರೂ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದರಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಅಗ್ಗದ ಜನಪ್ರಿಯ ಯೋಜನೆಗಳಿಂದ ದೇಶ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಜನರೇ ತೀರ್ಮಾನಿಸಿದ್ದಾರೆ ಎಂದರು.
ಪುರಸಭೆ ಸದಸ್ಯ ಮುನ್ನಾಫ್‌ಸಾಬ್ ಎರೇಶೀಮಿ ಮಾತನಾಡಿ, ನಕ್ಸಲೈಟ್ ಸಮಸ್ಯೆ, ಭಯೋತ್ಪಾದಕರ ಅಟ್ಟಹಾಸದಿಂದ ದೇಶವು ನಲಗುತ್ತಿದೆ. ಅಮಾಯಕರ ಸಾವು ನೋವಿಗೆ ಕಾರಣರಾದವರಿಗೆ ಕಾಂಗ್ರೆಸ್ ಸರ್ಕಾರ ರಾಜಾಶ್ರಯ ನೀಡುತ್ತಿದೆ. ಮೋದಿಯವರ ಅಭಿವೃದ್ಧಿಯ ಭಯ ಕಾಂಗ್ರೆಸ್ ಮುಖಂಡರ ನಿದ್ದೆಗೆಡಿಸಿದೆ, ದೇಶವು ಆರ್ಥಿಕವಾಗಿ ದಿವಾಳಿಯಾಗಿದ್ದು, ಅಳಿವಿನಂಚಿಗೆ ಬಂದಿದೆ. ಇದರಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಿದ್ದು, ವಿಶ್ವದ ಜನಪ್ರಿಯ ವ್ಯಕ್ತಿಯಾಗಿರುವ ಮೋದಿ ಗೆಲ್ಲಿಸುವ ಮೂಲಕ ರಾಷ್ಟ್ರದ ಗೌರವವನ್ನು ಕಾಪಾಡಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತೆ, ವಿದೇಶ ವ್ಯವಹಾರ, ಸುಸ್ಥಿರ ಆರ್ಥಿಕತೆ, ಮೂಲಸೌಕರ್ಯ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಪರಿಸರ, ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಇನ್ನಿತರ ವಿಷಯಗಳ ಕುರಿತು ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದ ಸಲಹೆಗಳನ್ನು ಪಡೆಯಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement