ಸುದ್ದಿ ಸಂಕ್ಷೇಪ
ವಿದ್ಯಾರ್ಥಿಗಳಲ್ಲಿ ಶಿಸ್ತು ಕಡಿಮೆಯಾಗುತ್ತಿದೆ
ಹಾನಗಲ್ಲ: ಇತ್ತೀಚಿನ ದಿನಗಳಲ್ಲಿ ಶಿಸ್ತು, ಸಂಯಮ, ಶಾಂತಿ, ನಿಷ್ಠೆಗಳು ವಿದ್ಯಾರ್ಥಿಗಳಲ್ಲಿ ಕಣ್ಮರೆಯಾಗುತ್ತಿದ್ದು, ಉತ್ತಮ ಸಂಸ್ಕೃತಿ ಬೆಳೆಸಲು ಶಿಕ್ಷಕರು ಆಸಕ್ತಿ ವಹಿಸಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಭಾಗವಹಿಸುವಂತೆ ಪಾಲಕರು ಕಾಳಜಿ ವಹಿಸಬೇಕು ಎಂದು ಶಾಸಕ ಮನೋಹರ ತಹಶೀಲ್ದಾರ ಕರೆ ನೀಡಿದರು. ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಷ್ಟ್ರೀಯ ಭಾವೈಕ್ಯ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಮಕ್ಕಳ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಭಾವೈಕ್ಯ, ದೇಶಭಕ್ತಿ ಮಕ್ಕಳಲ್ಲಿ ಜಾಗೃತಗೊಳ್ಳಲು ಇಂತಹ ಮೇಳಗಳು ಹೆಚ್ಚು ನಡೆಯಬೇಕು ಎಂದರು. ಪಥ ಸಂಚಲನಕ್ಕೆ ಚಾಲನೆ ನೀಡಿದ ಭಾರತ ಸೇವಾದಳದ ದಳಪತಿ ಬೆಂಗಳೂರಿನ ಜೆ.ಎಸ್.ನಾಯಕ ಪ್ರಾಸ್ತಾವಿಕ ಮಾತನಾಡಿ, ಭಾರತ ಸೇವಾದಳ ಹುಟ್ಟು, ಬೆಳವಣಿಗೆ ಮತ್ತು ಅದರ ಧ್ಯೇಯೋದ್ದೇಶಗಳ ಕುರಿತು ವಿವರಣೆ ನೀಡಿದರು. ಗ್ರಾಮದ ಬೀದಿಗಳಲ್ಲಿ ವಿದ್ಯಾರ್ಥಿಗಳು ಪಥ ಸಂಚಲನ ನಡೆಯಿತು. ಭಾರತ ಸೇವಾದಳ ತಾಲೂಕು ಅಧ್ಯಕ್ಷ ಸಿ.ಎಸ್. ಪಾಟೀಲ, ಕಾರ್ಯದರ್ಶಿ ಎಫ್.ಯು. ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಸುಣಗಾರ, ಸಮನ್ವಯಾಧಿಕಾರಿ ರಂಗಸ್ವಾಮಿ, ಎಸ್.ಎಫ್. ಕೆಂಗಮ್ಮನವರ ಮತ್ತು ತಾಲೂಕಿನ ಶಿಕ್ಷಕ ಸಂಘದ ಪದಾಧಿಕಾರಿಗಳು, ಸೇವಾದಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಶಸ್ತಿ ಜವಾಬ್ದಾರಿಹೆಚ್ಚಿಸುತ್ತವೆ: ಭರಮಪ್ಪ
ಹಾವೇರಿ: ಯಾವುದೇ ವ್ಯಕ್ತಿಗಳಿಗೆ ಪ್ರಶಸ್ತಿಗಳನ್ನು ಕೊಡುತ್ತಿದ್ದಾರೆ ಎಂದರೆ, ಸಮಾಜವು ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಲು ಸೂಚಿಸಿದಂತೆ ಎಂದು ಸರ್ವೋತ್ತಮ ಸೇವಾ ಪ್ರಶಸ್ತಿ ವಿಜೇತ ಬಂಕಾಪುರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ ಪ್ರಾಚಾರ್ಯ ಭರಮಪ್ಪ ಬಡಪ್ಪಳವರ ಹೇಳಿದರು. ಪ್ರಸಕ್ತ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ಪ್ರಯುಕ್ತ ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜವಾಬ್ದಾರಿ ಅರಿತು ಎಲ್ಲರ ಸಹಕಾರದಿಂದ ಇನ್ನು ಉತ್ತಮ ಕೆಲಸಗಳನ್ನು ನಿರ್ವಹಿಸುವುದಾಗಿ ತಿಳಿಸಿದರು. ಹಿರಿಯ ಉಪನ್ಯಾಸಕ ಕೆ.ಎಸ್. ಹೇಮಂತಕುಮಾರ ಮಾತನಾಡಿ, ಯಾವುದೇ ವ್ಯಕ್ತಿಯ ಯಶಸ್ಸು ಹಾಗೂ ಪ್ರಶಸ್ತಿಯ ಹಿಂದೆ ಜವಾಬ್ದಾರಿಯುತ ಕಾಯಕ, ಸೇವೆ ಹಾಗೂ ಕಠಿಣ ಶ್ರಮ ಇರುತ್ತದೆ. ಪ್ರತಿಯೊಬ್ಬರೂ ಇದನ್ನು ಪಾಲಿಸಿದರೆ ಯಶಸ್ಸು ಖಂಡಿತ ನಮ್ಮದಾಗಲಿದೆ ಎಂದು ಅಭಿಪ್ರಾಯಪಟ್ಟರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿಭಾಗಾಧಿಕಾರಿ ಸಿದ್ದಲಿಂಗಯ್ಯ ಮಠದ, ಸಿವಿಲ್ ಎಂಜಿನಿಯರಿಂಗ್ ವಿಭಾಗಾಧಿಕಾರಿ ಪ್ರಮೋದ ಪತ್ತಾರ, ನಾಗರಾಜ ಹಂಚಿನಮನಿ, ಸರೋಜಾ ರಜಪೂತ, ಲಿಂಗರಾಜು ಎಂ.ಪಿ ಮಾತನಾಡಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ವಿಜಯಲಕ್ಷ್ಮೀ ಪಾಣಿಕಟ್ಟಿ ನಿರೂಪಿಸಿದರು. ಶಾತಾಜಬೇಗಂ ನದಾಫರವರು ವಂದಿಸಿದರು.
ಜಿಲ್ಲಾಸ್ಪತ್ರೆ ಅವ್ಯವಸ್ಥೆ ನೋಡಿ ದಂಗಾದ ಉಪಲೋಕಾಯುಕ್ತರು
ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆಗೆ ಹಠಾತ್ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾ. ಎಸ್.ಬಿ. ಮಜ್ಜಗೆ ಅಲ್ಲಿಯ ಅವ್ಯವಸ್ಥೆ ಹಾಗೂ ಅನೈರ್ಮಲ್ಯ ಕಂಡು ದಂಗಾದ ಘಟನೆ ಸೋಮವಾರ ನಡೆಯಿತು. ರೋಗಿಗಳಿಂದ ವೈದ್ಯರು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯ ಹೊರರೋಗಿ ವಿಭಾಗ, ಒಳರೋಗಿ ವಿಭಾಗ ಸೇರಿದಂತೆ ಎಲ್ಲ ವಾರ್ಡುಗಳನ್ನು ಅವರು ಪರಿಶೀಲಿಸಿದರು. ಆಸ್ಪತ್ರೆಯ ಮೂಲೆಮೂಲೆಗಳಲ್ಲೂ ಕಸದ ರಾಶಿ ನೋಡಿ, ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ವಾರ್ಡುಗಳಲ್ಲಿ ರೋಗಿಗಳಿಗೆ ಹಾಸಿಗೆಯಲ್ಲಿ ಮೇಲು ಹೊದಿಕೆ ಬದಲಾಯಿಸದಿರುವುದು, ತಲೆದಿಂಬು ನೀಡದಿರುವುದರ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ದುರ್ವಾಸನೆ ಬೀರುತ್ತಿದ್ದರೂ ಸ್ವಚ್ಛತೆಗೆ ಕ್ರಮ ಕೈಗೊಳ್ಳದ್ದಕ್ಕೆ ಸಿಡಿಮಿಡಿಗೊಂಡರು. ಇದೇ ಸಂದರ್ಭದಲ್ಲಿ ಉಪಲೋಕಾಯುಕ್ತರ ಬಳಿ ದೂರು ಹೇಳಿದ ಸಾರ್ವಜನಿಕರು, ಹೆರಿಗೆ ಮಾಡಿಸಿದರೆ ವೈದ್ಯರಿಗೆ ಹಣ ಕೊಡಬೇಕಾಗುತ್ತದೆ. ಹಣ ಪಡೆಯದೇ ಒಂದೂ ಹೆರಿಗೆ ಮಾಡಿಸುವುದಿಲ್ಲ ಎಂದು ಆರೋಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಮಜ್ಜಗೆ, ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಅರಿವಾಗಿದೆ. ಬಡ ರೋಗಿಗಳಿಗೆ ಇಲ್ಲಿ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿಲ್ಲ. ಸ್ಪಚ್ಛತೆಗೆ ಗಮನ ನೀಡುತ್ತಿಲ್ಲ. ರೋಗಿಗಳಿಗೆ ಹಾಸಿಗೆ, ಹೊದಿಕೆ ಸರಿಯಾಗಿ ನೀಡುತ್ತಿಲ್ಲ. ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಕುರಿತು ದೂರು ಬಂದಿದೆ. ಮಂಗಳವಾರ ಬೆಳಗ್ಗೆ ಮತ್ತೆ ಆಸ್ಪತ್ರೆಗೆ ಭೇಟಿ ನೀಡಲಿದ್ದೇನೆ. ಹಣ ಪಡೆದ ವೈದ್ಯರಿಂದ ರೋಗಿಗಳಿಗೆ ವಾಪಸ್ ಕೊಡಿಸುತ್ತೇನೆ. ಅಲ್ಲದೇ ಮುಂದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.