ಗೋವಿನಜೋಳ ಖರೀದಿ ಸ್ಥಗಿತ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 18
ಬೆಂಬಲ ಬೆಲೆಯಲ್ಲಿ ಗೋವಿನ ಜೋಳ ಖರೀದಿ ಕೇಂದ್ರದಲ್ಲಿ ಗೋದಾಮು ಕೊರತೆ ಕಾರಣಕ್ಕಾಗಿ ಖರೀದಿ ಸ್ಥಗಿತಗೊಳಿಸಿದ್ದನ್ನು ಖಂಡಿಸಿ ಹಾಗೂ ದೂರದ ಗೋದಾಮುಗಳಿಗೆ ರೈತರೇ ಜೋಳ ಸಾಗಿಸಲು ಸೂಚಿಸುತ್ತಿರುವುದನ್ನು ವಿರೋಧಿಸಿ ನೂರಾರು ರೈತರು ಮಂಗಳವಾರ ಸಮೀಪದ ಎಪಿಎಂಸಿ ಎದುರು ಗುತ್ತಲ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಖರೀದಿ ಕೇಂದ್ರದ ಅಧಿಕಾರಿಗಳು ಗೋದಾಮು ಇಲ್ಲ ಎಂದು ಹೇಳಿ ಖರೀದಿ ವಿಳಂಬ ಮಾಡುತ್ತಿದ್ದಾರೆ. ಜತೆಗೆ ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಖಾಲಿ ಇರುವ ಗೋದಾಮುಗಳಿಗೆ ಗೋವಿನಜೋಳ ಸಾಗಿಸಲು ರೈತರಿಗೇ ಸೂಚಿಸಲಾಗುತ್ತಿದೆ. ಇದರಿಂದ ರೈತರು ಹೆಚ್ಚುವರಿಯಾಗಿ ವಾಹನ ಬಾಡಿಗೆ ಕಟ್ಟಬೇಕಾಗಿದ್ದು ಇದು ರೈತರಿಗೆ ಹೊರೆಯಾಗಿದೆ ಎಂದು ರೈತರು ಆರೋಪಿಸಿದರು.
ರೈತರು ಗೋವಿನಜೋಳವನ್ನು ತೂಕ ಮಾಡಿ ಇಳಿಸಿದ ಮೇಲೆ ಗುತ್ತಿಗೆ ಪಡೆದವರು ಅದನ್ನು ಎಲ್ಲೆಲ್ಲಿ ಗೋದಾಮುಗಳಲ್ಲಿ ಸಂಗ್ರಹಿಸಲು ಅವಕಾಶವಿದೆಯೋ ಅಲ್ಲಿಗೆ ಸಾಗಾಟ ಮಾಡಬೇಕು. ಆದರೆ, ಇಲ್ಲಿ ತೂಕ ಮಾಡಿದ ಮೇಲೆ ರೈತರೇ ಖಾಲಿ ಇರುವ ಗೋದಾಮು ಇರುವ ಸ್ಥಳಕ್ಕೆ ಹೋಗಿ ಇಳಿಸುವಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಹೊಲದಿಂದ ಬಾಡಿಗೆ ವಾಹನ ಪಡೆದು ಗೋವಿನಜೋಳ ತಂದ ರೈತರು, ಖರೀದಿಗಾಗಿ ನಾಲ್ಕೈದು ದಿನ ಕಾಯುವಂತಾಗಿದೆ. ಇದರಿಂದ ರೈತರಿಗೆ ನಾಲ್ಕೈದು ದಿನದ ವಾಹನ ಬಾಡಿಗೆಯ ಹೊರೆ ಬೀಳುತ್ತಿದೆ. ಜತೆಗೆ ತಾಲೂಕಿನಲ್ಲಿ ದೂರ ದೂರ ಇರುವ ಗೋದಾಮುಗಳಿಗೆ ರೈತರೇ ಸಾಗಿಸಲು ಸೂಚಿಸುತ್ತಿದ್ದು ಇದು ಇನ್ನಷ್ಟು ಹೊರೆಯಾಗುತ್ತಿದೆ. ಇದರಿಂದ ಗೋವಿನಜೋಳ ಮಾರಾಟದಿಂದ ಬರುವ ಹಣವೆಲ್ಲ ವಾಹನ ಬಾಡಿಗೆಗೆ ಹೋಗುವಂತಾಗಿದೆ ಎಂದು ರೈತರು ಆರೋಪಿಸಿದರು. ಆಕ್ರೋಶಗೊಂಡ ರೈತರು ಎಪಿಎಂಸಿ ಎದುರಿನ ಗುತ್ತಲ ರಸ್ತೆಗೆ ಅಡ್ಡಲಾಗಿ ಗೋವಿನಜೋಳ ತುಂಬಿದ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಗೋವಿನಜೋಳ ಖರೀದಿ ಕೇಂದ್ರದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸುಮಾರು ಎರಡು ತಾಸುಗಳ ಕಾಲ ರಸ್ತೆ ಬಂದ್ ಮಾಡಿದ್ದರಿಂದ ಎರಡು ಕಿಮೀಗೂ ಹೆಚ್ಚು ದೂರದವರೆಗೆ ವಾಹನಗಳು ನಿಲ್ಲುವಂತಾಯಿತು.
ಗೋದಾಮುಗಳ ಕೊರತೆ ಕಾರಣದಿಂದ ಈ ಸಮಸ್ಯೆಯುಂಟಾಗಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ ಸ್ಥಳಕ್ಕೆ ಆಗಮಿಸಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಜುಬೇರ ಹಾಗೂ ತಹಸೀಲ್ದಾರ್ ಪಂಪನಗೌಡ ಮೇಲ್ಸೀಮೆ ಅವರಲ್ಲಿ ವಿನಂತಿಸಿದರು. ಅಧಿಕಾರಿಗಳು ಕೂಡಲೇ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡದ ಮೇಲೆ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.