ಜಿಲ್ಲಾಸ್ಪತ್ರೆ ಅವ್ಯವಸ್ಥೆ ಅನಾವರಣ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 18
ನೈರ್ಮಲ್ಯ ಇಲ್ಲದೇ ದುರ್ವಾಸನೆ, ಹಣ ಕೀಳುವ ವೈದ್ಯರು, ರೋಗಿಗಳಿಗೆ ಸರಿಯಾದ ಆರೋಗ್ಯ ಸೇವೆ ದೊರಕದಿರುವುದು ಸೇರಿದಂತೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ, ಅಕ್ರಮಗಳ ಕೊಳಕು ಮಂಗಳವಾರ ಉಪ ಲೋಕಾಯುಕ್ತ ನ್ಯಾ. ಎಸ್.ಬಿ. ಮಜ್ಜಗೆ ಅವರೆದುರು ಮತ್ತೊಮ್ಮೆ ಅನಾವರಣಗೊಂಡಿತು. ಹೆರಿಗೆ ಮಾಡಿಸಿಕೊಂಡ ಎಲ್ಲರಿಂದಲೂ ವೈದ್ಯರು ಹಣ ಪಡೆದಿರುವುದು ಬಹಿರಂಗಗೊಂಡಿತು.
ಸೋಮವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಎಚ್ಚರಿಕೆ ನೀಡಿ ಹೋಗಿದ್ದ ಉಪಲೋಕಾಯುಕ್ತ ನ್ಯಾ. ಮಜ್ಜಗೆ ಅವರು ಮಂಗಳವಾರ ಮತ್ತೆ ಭೇಟಿ ನೀಡಿ ಎಲ್ಲ ವಾರ್ಡ್ಗಳನ್ನು ಪರಿಶೀಲಿಸಿದರು. ಆಗ ಕೆಲ ರೋಗಿಗಳು, ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಸರಿಯಾಗಿ ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂದು ಆರೋಪಿಸಿದರು. ಹೆರಿಗೆಗೆಂದು ಬಂದ ಮಹಿಳೆಯರು ಹಾಗೂ ಹೆರಿಗೆ ಮಾಡಿಸಿಕೊಂಡ ತಾಯಂದಿರು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯಿಂದ ಆಗುತ್ತಿರುವ ಅನ್ಯಾಯವನ್ನು ಬಿಚ್ಚಿಟ್ಟರು. ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ವೈದ್ಯರು, ಶುಶ್ರೂಶಕಿಯರು ಹಣ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಲು ನಿರಾಕರಿಸಿದರೆ ಶಿಶು ನೀಡಲು ಸತಾಯಿಸುತ್ತಾರೆ. ಇಲ್ಲಿ ಹಣ ನೀಡಿದರಷ್ಷೇ ಕೆಲಸ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಹೆರಿಗೆ ವಾರ್ಡಿನಲ್ಲಿನ ಎಲ್ಲ ತಾಯಂದಿರಿಂದ ಉಪಲೋಕಾಯುಕ್ತರು ದೂರು ಆಲಿಸಿದರು. ವೈದ್ಯರಿಗೆ ರು. 2 ರಿಂದ 5 ಸಾವಿರ ನೀಡಿರುವುದಾಗಿ ಆರೋಪಿಸಿದರು. ಅಲ್ಲದೇ ಶುಶ್ರೂಶಕಿಯರು ಪ್ರತಿಯೊಬ್ಬರಿಂದ ರು. 200, 500 ಹೀಗೆ ಹಣ ಕೀಳುತ್ತಿರುವ ಬಗ್ಗೆಯೂ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ನ್ಯಾ. ಮಜ್ಜಗೆ, ಹಣ ಪಡೆದವರ ವಿವರ ಪಡೆದರು. ಅವರಿಂದ ಹಣ ವಾಪಸ್ ಕೊಡಿಸುವ ಭರವಸೆ ನೀಡಿದರು. ಕೆಲ ರೋಗಿಗಳು ಹಣ ಪಡೆದವರ ಹೆಸರನ್ನು ಹೇಳಿದರೆ ಮುಂದೆ ನಮಗೆ ತೊಂದರೆ ನೀಡಬಹುದು ಎಂದೂ ತಿಳಿಸಿದರು.
ಆಸ್ಪತ್ರೆಯಲ್ಲಿ ಅಸ್ವಚ್ಛತೆ: ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಸಮರ್ಪಕವಾಗಿ ನೀರು ಲಭ್ಯವಿಲ್ಲ. ಕುಡಿಯುವ ನೀರನ್ನು ಮನೆಯಿಂದ ಇಲ್ಲವೇ ಹೋಟೆಲ್ಗಳಿಂದ ತರಬೇಕಾಗಿದೆ. ಆಸ್ಪತ್ರೆಯಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಇಲ್ಲ. ಆವರಣದಲ್ಲಿ ಊಟ ಮಾಡಲು ತೆರಳಿದರೆ ಬಿಡಾಡಿ ದನ ಹಾಗೂ ಹಂದಿಗಳ ಕಾಟ ತಪ್ಪುತ್ತಿಲ್ಲ. ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಆದರೂ ಅವುಗಳನ್ನು ಶುಚಿಗೊಳಿಸಿಲ್ಲ, ಕೊಠಡಿಯಲ್ಲಿ ಕಸಗೂಡಿಸಲು ಸಿಬ್ಬಂದಿಗೆ ಹಣ ನೀಡಬೇಕು. ಏನಾದರೂ ಕೇಳಿದರೆ ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ಬೆದರಿಕೆ ಹಾಕುತ್ತಾರೆ. ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ಸಣ್ಣಪುಟ್ಟ ರೋಗಗಳ ಚಿಕಿತ್ಸೆಗಾಗಿ ದಾವಣಗೆರೆ ಹಾಗೂ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ತೆರಳುವಂತೆ ಇಲ್ಲಿನ ವೈದ್ಯರು ಸೂಚಿಸುತ್ತಾರೆಂದು ಸಾರ್ವಜನಿಕರು ದೂರಿದರು. ಜಿಲ್ಲಾಸ್ಪತ್ರೆಯಲ್ಲಿ ಶುಶ್ರೂಶಕಿಯರು ವೈದ್ಯರ ನಿಯಂತ್ರಣದಲ್ಲಿಲ್ಲ. ಹಾಗಾಗಿ ಇಲ್ಲಿ ಅವರದ್ದೇ ದರ್ಬಾರ್ ಆಗಿದೆ. ಎಲ್ಲ ರೋಗಿಗಳು ಹೆಚ್ಚಾಗಿ ಅವರ ಬಗ್ಗೆ ದೂರುಗಳನ್ನು ಹೇಳುತ್ತಿದ್ದಾರೆ ಎಂದು ಉಪಲೋಕಾಯುಕ್ತ ಎಸ್.ಬಿ. ಮಜ್ಜಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಾಗದಿದ್ದರೆ ಇದರ ಅವಶ್ಯಕತೆಯಾದರೂ ಏನಿದೆ. ಅದಕ್ಕಿಂತ ಈ ಆಸ್ಪತ್ರೆಯನ್ನು ಮುಚ್ಚುವುದೇ ಲೇಸು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸವರಾಜ ಅಂಗಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ಎರಡು ವರ್ಷಗಳಿಂದ ಹಾಸಿಗೆ, ಹೊದಿಕೆಗಳನ್ನು ಖರೀದಿಸಿಲ್ಲ ಎಂಬ ಸತ್ಯವನ್ನು ಜಿಲ್ಲಾ ಸರ್ಜನ್ ತಿಳಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾ. ಮಜ್ಜಗೆ, ಸೋಮವಾರ ರಾತ್ರಿ ರೋಗಿಗಳು ದೂರು ಹೇಳಿದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅರಿತು ಹೆಚ್ಚಿನ ಮಾಹಿತಿ ಪಡೆಯಲು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದೇವೆ. ರೋಗಿಗಳಿಂದ ಹಣ ಪಡೆದವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ತಪ್ಪಿತಸ್ಥರಿಗೆ ನೋಟಿಸ್ ಜಾರಿ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ ಆಸ್ಪತ್ರೆಯಲ್ಲಿ ಯಾರಾದರೂ ಹಣ ಕೇಳಿದರೆ ಸ್ಥಳೀಯ ಲೋಕಾಯುಕ್ತ ಪೊಲೀಸರಿಗೆ (ಮೊ-9448405762) ಮಾಹಿತಿ ನೀಡುವಂತೆ ಸೂಚಿಸಿದರು. ಲೋಕಾಯುಕ್ತ ಡಿವೈಎಸ್ಪಿ ನಾಗರಾಜ ಅಂಬಲಿ, ಸಿಪಿಐ ಜಿ.ಟಿ. ಶ್ರೀಶೈಲಮೂರ್ತಿ ಇತರರು ಇದ್ದರು. ನ್ಯಾ. ಎಸ್.ಬಿ. ಮಜ್ಜಗೆ ಅವರು ಮಂಗಳವಾರ ಜಿಲ್ಲೆಯ ವಿವಿಧ ತಾಲೂಕು, ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆ, ಕೆಲ ಸರ್ಕಾರಿ ಕಚೇರಿಗಳಿಗೆ ತೆರಳಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಇರುವ ಅಧಿಕಾರದಲ್ಲೇ ಭ್ರಷ್ಟಾಚಾರ ನಿಗ್ರಹ
ಬ್ಯಾಡಗಿ: ಲೋಕಾಯುಕ್ತರಿಗೆ ಪರಮಾಧಿಕಾರ ಭ್ರಷ್ಟಾಚಾರದ ಇನ್ನೊಂದು ಮುಖವಿದ್ದಂತೆ. ಯಾವುದೇ ಇಲಾಖೆಗೆ ಅಧಿಕಾರ ನೀಡುವುದು ವ್ಯವಸ್ಥೆ ಹಾಳಾಗಲು ಕಾರಣವಾಗಬಹುದು. ಇರುವ ಅಧಿಕಾರ ವ್ಯಾಪ್ತಿಯಲ್ಲಿಯೇ ಭ್ರಷ್ಟಾಚಾರ ನಿಗ್ರಹಿಸಲು ಸಾಧ್ಯವೆಂದು ರಾಜ್ಯ ಉಪಲೋಕಾಯುಕ್ತ ಎಸ್.ಬಿ. ಮಜ್ಜಗಿ ಅಭಿಪ್ರಾಯಪಟ್ಟರು.
ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ಸಾರ್ವಜನಿಕರೇ ನೇರ ಕಾರಣವಾಗಿದ್ದು, ಎಚ್ಚೆತ್ತುಕೊಳ್ಳುವ ಮೂಲಕ ಕಡಿವಾಣ ಹಾಕಬೇಕಾಗಿದೆ. ಸೂಕ್ತ ಮಾಹಿತಿಗಳನ್ನು ನೀಡದ ಸಾರ್ವಜನಿಕರು ಸರ್ಕಾರಿ ಕೆಲಸಗಳಿಗಾಗಿ ಲಂಚ ಕೊಡಲು ಮುಂದಾಗುತ್ತಿದ್ದು, ಇದರಿಂದ ರಾಜ್ಯದೆಲ್ಲೆಡೆ ಭ್ರಷ್ಟಾಚಾರ ಹೆಚ್ಚಳವಾಗಲು ಕಾರಣವಾಗಿದೆ ಎಂದರು. ಹಣಕ್ಕಾಗಿ ಸತಾಯಿಸುವ ಪ್ರಕರಣಗಳು ತಾಲೂಕಿನಲ್ಲಿ ಕಂಡು ಬಂದಿದ್ದು ಅಧಿಕಾರಿಗಳು ಕೂಡಲೇ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸಾರ್ವಜನಿಕರ ಹಿತ ಕಾಯಲು ಮುಂದಾಗಬೇಕಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಲೋಕಾಯುಕ್ತ ಕಾರ್ಯಾಲಯದಲ್ಲಿ ದೂರು ಸಲ್ಲಿಸಲು ಬರುವರು ಅಫಿಡಿವೆಟ್ ನೀಡಬೇಕಾಗಿದ್ದು ಇದರಿಂದ ಅನಗತ್ಯ ಗೊಂದಲಗಳನ್ನು ಸೃಷ್ಟಿಯಾಗಿದ್ದು ಗಮನಕ್ಕೆ ಬಂದಿದೆ. ಆದರೆ, ಅಫಿಡಿವೆಟ್ ಮುಖಾಂತರ ದೂರು ಸಲ್ಲಿಸಿದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ತನಿಖೆ ಕೈಗೊಳ್ಳಲು ಸಾಧ್ಯವಾಗಲಿದೆ. ಯಾವುದೇ ಸಂದರ್ಭದಲ್ಲೂ ದೂರು ನೀಡಲು ಬಂದವರು ಮರಳಿ ಹೋಗಿಲ್ಲವೆಂದು ಸ್ಪಷ್ಟಪಡಿಸಿದರು.
ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ನಾಗರಾಜ ಅಂಬ್ಲಿ, ಸಿಪಿಐ ಶ್ರೀಶೈಲ ಮೂರ್ತಿ, ತಹಶೀಲ್ದಾರ್ ಶಿವಶಂಕರ ನಾಯಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆರ್. ಪಾಟೀಲ ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.