ಭ್ರಷ್ಟಮುಕ್ತ ಭಾರತಕ್ಕೆ ಆಮ್ ಆದ್ಮಿ ಬೆಂಬಲಿಸಿ: ಶ್ರೀಕಾಂತ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 18
ದೇಶವನ್ನು ಭ್ರಷ್ಟ ಮುಕ್ತವನ್ನಾಗಿಸಲು ಆಮ್ಆದ್ಮಿ ಪಕ್ಷದೊಂದಿಗೆ ಕೈಜೋಡಿಸುವಂತೆ ತಾಲೂಕು ಘಟಕದ ಸಂಚಾಲಕ ಶ್ರೀಕಾಂತ ಚರಂತಿಮಠ ಮನವಿ ಮಾಡಿದರು.
ಮಂಗಳವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಎಎಪಿ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಆರೂವರೆ ದಶಕಗಳಿಂದ ದೇಶವನ್ನಾಳಿದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳು ಮಾಡಿದ್ದಾದರೂ ಏನು? ಸ್ವಾರ್ಥಕ್ಕಾಗಿ ಈ ದೇಶವನ್ನು ಸಾಲದ ಕೂಪಕ್ಕೆ ತಳ್ಳಿದ್ದೇ ಇವರ ಸಾಧನೆ ಎಂದು ಆರೋಪಿಸಿದರು.
ವಂಶ ಪಾರಂಪರ್ಯ ಆಡಳಿತವನ್ನು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ಗೆ ಲಾಲ್ ಬಹದ್ದೂರ್ಶಾಸ್ತ್ರಿಯವರಂತಹ ಸಜ್ಜನ ರಾಜಕಾರಣಿಗಳ ಆದರ್ಶ ಪ್ರಾಯರಾಗಲು ಸಾಧ್ಯವಿಲ್ಲ. ಇನ್ನೂ ಜೀವಂತವಾಗಿರುವಾಗಲೇ ಅಟಲ್ ಬಿಹಾರಿ ವಾಜಪೇಯಿವರನ್ನು ಮರೆತ ಬಿಜೆಪಿಯ ಬೇರೆ ಮುಖವಾಡವನ್ನು ತೋರಿಸುತ್ತಿದೆ ಎಂದು ಲೇವಡಿ ಮಾಡಿದರು. ಎಲ್ಲೆಡೆ ಆಮ್ಆದ್ಮಿ ಪಕ್ಷದ ಅಲೆ ಪ್ರಾರಂಭವಾಗಿದೆ ಎಂದರು.
ಜಿಲ್ಲಾ ಘಟಕದ ಸಂಚಾಲಕ ಲಿಂಗನಗೌಡ ಅರಳಿಹಳ್ಳಿ ಮಾತನಾಡಿ, ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಪಕ್ಷದ ಪ್ರಾಥಮಿಕ ಸದಸ್ಯತ್ವನ್ನು ಪಡೆದುಕೊಂಡಿದ್ದು, ಎಲ್ಲ ಜಾತಿ ಧರ್ಮದ ಜನರಿಗೆ ಸದಸ್ಯತ್ವಕ್ಕಾಗಿ ಮುಕ್ತ ಅವಕಾಶಗಳನ್ನು ನೀಡಲಾಗಿದೆ. ದೇಶವನ್ನು ಭ್ರಷ್ಟ ಮುಕ್ತಗೊಳಿಸಲು ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ಆದ್ಮಿ ಪಕ್ಷ ಸನ್ನದ್ಧವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದರೆ ಮುಂದಿನ ವರ್ಷಗಳಲ್ಲಿ ದೇಶವನ್ನು ಸಾಲಮುಕ್ತಗೊಳಿಸಿ ಅಭಿವೃದ್ಧಿ ಪಥದತ್ತ ಸಾಗುವಂತೆ ಮಾಡಲು ಸಾಧ್ಯವೆಂದರು.
ಇದಕ್ಕೂ ಮುನ್ನ ಕೇಜ್ರಿವಾಲ್ ಭಾವಚಿತ್ರವಿರುವ ಟೋಪಿಗಳನ್ನು ಧರಿಸಿ, ಕೈಯಲ್ಲಿ ಪೊರಕೆಗಳನ್ನು ಹಿಡಿದ ನೂರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಸಾಗಿದರು. ವೀರಭದ್ರಪ್ಪ ಶಿಡೇನೂರು, ಕೃಷ್ಣಮೂರ್ತಿ ವಡ್ಡರ, ಹೊನ್ನಪ್ಪ ದೇವರಗುಡ್ಡ, ಟಿ.ಬಿ. ಕುಲಕರ್ಣಿ, ಕೆ. ಶಿವಾನಂದ, ಪ್ರಕಾಶ ಕುರಡಗಿ, ಸಿದ್ದಲಿಂಗಯ್ಯ ಹಿರೇಮಠ, ಎಸ್.ಎಫ್. ಲಮಾಣಿ, ಶಿವಾನಂದ ಹಳ್ಳೇರ, ಅಮರನಾಥ ಭೂತೆ, ಜಿ.ಎನ್. ಅರ್ಕಾಚಾರಿ, ರಾಜು ಓಲೇಕಾರ, ರಾಹುಲ್ ಹಮೀದ್, ಗಣೇಶ ಮಾಳಗಿ ಇತರರು ಇದ್ದರು.