ಮೋದಿ ಪ್ರಧಾನಿಯಾಗಿಸಲು ಶ್ರಮಿಸಿ: ಶಿವಣ್ಣ
ರಾಣಿಬೆನ್ನೂರು: ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮಾಜಿ ಶಾಸಕ ಜಿ. ಶಿವಣ್ಣ ಹೇಳಿದರು.
ನಗರದ ಅಂಚೆ ವೃತ್ತದ ಬಳಿ ನಮೋ ಬ್ರಿಗೇಡ ಕಾರ್ಯಕರ್ತರು ಏರ್ಪಡಿಸಿದ್ದ ನಮೋ ಟೀ ಸ್ಟಾಲ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ದೇಶವು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಭ್ರಷ್ಟಾಚಾರ, ಹಣದುಬ್ಬರ, ಅಸುರಕ್ಷತೆ, ನಿರುದ್ಯೋಗ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಲು ಕೇಂದ್ರದ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರದ ದುರಾಡಳಿತವೇ ಕಾರಣವೆಂದು ಆರೋಪಿಸಿದರು.
ನಮೋ ಬ್ರಿಗೇಡ್ನ ತಾಲೂಕು ಅಧ್ಯಕ್ಷ ಮಲ್ಲಣ್ಣ ಅಂಗಡಿ ಮಾತನಾಡಿ, ನರೇಂದ್ರ ಮೋದಿಯವರನ್ನು ಜನತೆ ಈಗಾಗಲೆ ದೇಶದ ಪ್ರಧಾನ ಮಂತ್ರಿ ಎಂದು ಒಪ್ಪಿಕೊಂಡಿದ್ದು, ಯಾರಿಂದಲು ತಪ್ಪಿಸಲು ಸಾಧ್ಯವಿಲ್ಲ. ಯುಪಿಎ ನೇತೃತ್ವದಲ್ಲಿ ದೇಶವನ್ನಾಳುತ್ತಿರುವ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿಯವರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿಯವರ ಕುರಿತು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ, ಯುವ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ ಎಂದರು.
ನಮೋ ಬ್ರಿಗೇಡ್ ಸಮಿತಿಯ ತಾಲೂಕು ನಗರ ಘಟಕದ ಅಧ್ಯಕ್ಷ ಭೋಜರಾಜ ದಲಬಂಜನ್, ಫಕ್ಕೀರಪ್ಪ ತುಮ್ಮಿನಕಟ್ಟಿ, ಶಿವಶಂಕರ ಕೆಂಡದಮಠ, ವಿನಾಯಕ ಶಿಗ್ಲಿಕರ, ವೀರೇಶ ಕರ್ಜಗಿಮಠ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಭಾರತಿ ಜಂಬಗಿ, ಬಸವರಾಜ ಕೇಲಗಾರ, ವೀರಣ್ಣ ಅಂಗಡಿ, ಎಸ್.ಎಸ್. ರಾಮಲಿಂಗಣ್ಣನವರ, ಕೆ.ವಿ. ಶ್ರೀನಿವಾಸ, ಕಿರಣಕುಮಾರ ಅಂಗಡಿ, ಶೇಖಪ್ಪ ಹೊಸಗೌಡ್ರ, ಉಮೇಶಣ್ಣ ಹೊನ್ನಾಳಿ, ಪ್ರವೀಣ ಕೋರ್ಪಡೆ, ಶಿವಣ್ಣ ಕಂಬಳಿ, ಬಾಬುಲಾಲ ಜೈನ್, ಶಿವಯೋಗಿ ಅಸುಂಡಿ, ಚೋಳಪ್ಪ ಕಸವಾಳ ಇದ್ದರು.