ಶಾಲಾ ಕೊಠಡಿ ಕಟ್ಟಡ ಉದ್ಘಾಟನೆ
ಬ್ಯಾಡಗಿ: ಶೈಕ್ಷಣಿಕ ವ್ಯವಸ್ಥೆ ಸುಧಾರಿಸದೇ ದೇಶದ ಪ್ರಗತಿ ಅಸಾಧ್ಯ ಎಂಬುದು ಈಗಾಗಲೇ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಬನ್ನಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ರು. 5.25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಶಾಲಾ ಕೊಠಡಿ ಕಟ್ಟಡ ಉದ್ಘಾಟನೆ ಹಾಗೂ ಸೈಕಲ್ ವಿತರಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಶಿಕ್ಷಣವೆಂಬದು ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಆದರೆ ಸಾಮಾಜಿಕ ನ್ಯಾಯದಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಚಿಂತನೆ ಮಾಡಿದ ಸರ್ಕಾರಗಳು ಶಿಕ್ಷಣದ ವ್ಯಾಪ್ತಿಯನ್ನು ಮುಕ್ತಗೊಳಿಸಿ ಸಫಲತೆಯನ್ನು ಕಂಡುಕೊಂಡಿವೆ ಎಂದರು.
ಶೈಕ್ಷಣಿಕ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಉಳ್ಳವರು ಹಾಗೂ ಬಡವರ ನಡುವಿನ ತಾರತಮ್ಯವನ್ನು ಹೋಗಲಾಡಿಸಲು ರಾಷ್ಟ್ರೀಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಿದ ಸರ್ಕಾರ ದೇಶದ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸಫಲವಾಗಿದೆ ಎಂದರು. ಶಿಕ್ಷಣವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಎಲ್ಲ ವರ್ಗದ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸೈಕಲ್ ಸೇರಿದಂತೆ ಹತ್ತು ಹಲವು ಸೌಕರ್ಯಗಳನ್ನು ಕಲ್ಪಿಸಿದ್ದು, ಮಕ್ಕಳು ಶಿಕ್ಷಣ ವಂಚಿತರಾಗದೇ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಜಗದೀಶ್ ಕೇರಕರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಕರವಜ್ಜನವರ, ತಾಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಎಪಿಎಂಸಿ ಮಾಜಿ ನಿರ್ದೇಶಕ ಚನ್ನವೀರಗೌಡ ಬುಡ್ಡನಗೌಡ್ರ, ಮಹಾಲಿಂಗಪ್ಪ ಪೂಜಾರ, ಮಾರುದ್ರಪ್ಪ ಬೂದಿಹಾಳ, ಬಸಪ್ಪ ಆನವಟ್ಟಿ, ಮಲಕಪ್ಪ ಕೋಣನವರ, ಉಳಿವೆಪ್ಪಗೌಡ ಬುಡ್ಡನಗೌಡ್ರ ಹಾಗೂ ಇನ್ನಿತರರು ಇದ್ದರು.
ಎಂ.ಎಂ. ಪಾಟೀಲ ಸ್ವಾಗತಿಸಿದರು. ಎಚ್.ಟಿ. ದಾಸರ ನಿರೂಪಿಸಿದರು. ಸೆಲ್ವರಾಜನ್ ವಂದಿಸಿದರು.