ಹೊಸರಿತ್ತಿ ಆರೋಗ್ಯ ಕೇಂದ್ರಕ್ಕೆ ಉಪ ಲೋಕಾಯುಕ್ತ ಭೇಟಿ
ಗುತ್ತಲ: ಸಮೀಪದ ಹೊಸರಿತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಪ ಲೋಕಾಯುಕ್ತ ನ್ಯಾ. ಎಸ್.ಬಿ. ಮಜ್ಜಗೆ ಅವರು ಮಂಗಳವಾರ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸಿ, ಕರ್ತವ್ಯದಲ್ಲಿದ್ದ ಆರೋಗ್ಯ ಸಹಾಯಕಿಯರನ್ನು ತರಾಟೆಗೆ ತೆಗೆದುಕೊಂಡರು.
ಹೊಸರಿತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ಉಪಲೋಕಾಯುಕ್ತರು, ರೋಗಿಗಳ ಕೊಠಡಿಗಳ ಅವ್ಯವಸ್ಥೆ, ರೋಗಿಗಳು ಮಲಗುವ ಕಾಟ್ಗಳು, ಕಾಟ್ ಮೇಲೆ ಬೆಡ್ಶೀಟ್ ಇಲ್ಲದಿರುವುದನ್ನು ಕಂಡು ಹಾಗೂ ರೋಗಿಗಳಿಗೆ ಉಚಿತವಾಗಿ ನೀಡುವ ನೋವು ನಿವಾರಕ ಮಿಥೈಲ್ ಎರ್ಗೋಮೆರ್ಟಿನ್ ಇಂಜೆಕ್ಷನ್ ಪರೀಕ್ಷಿಸಿದರು. ಅವಧಿ ಮೀರಿದ ಔಷಧಿಗಳನ್ನು ಕಂಡು ತಬ್ಬಿಬ್ಬಾಗಿ ವೈದ್ಯರು ಎಲ್ಲಿದ್ದಾರೆ ಎಂದು ಕೇಳಿದರು. ಆಗ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಸಹಾಯಕಿಯರು ವೈದ್ಯರು ರಜೆ ಮೇಲೆ ಹೋಗಿದ್ದಾರೆ ಎಂದರು. ಚಿಕ್ಕ ಮಕ್ಕಳಿಗೆ ನೀಡುವ ಕೃತಕ ಉಸಿರಾಟದ ಉಪಕರಣಗಳನ್ನು ಬೇಕಾಬಿಟ್ಟಿ ಇಟ್ಟಿರುವುದನ್ನು ಗಮನಿಸಿದ ಲೋಕಾಯುಕ್ತರು ಮತ್ತಷ್ಟು ಉಗ್ರರಾದರು. ನಂತರ ಆಸ್ಪತ್ರೆಯ ಸಿಬ್ಬಂದಿ ಹೊರಹಾಕಿ ರೋಗಿಗಳನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಉಪ ಲೋಕಾಯುಕ್ತರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು. ಸಾರ್ವಜನಿಕರಿಂದ ಬಂದ ದೂರುಗಳನ್ನು ಪಡೆದುಕೊಂಡು ಮುಂದೆ ಹೀಗಾದಂತೆ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು. ಬಳಿಕ ಸಮೀಪದ ಹಾವನೂರು ಬಳಿ ತುಂಗಭದ್ರೆಯ ತಟದಲ್ಲಿ ಧಾವಿಸಿ ಅಲ್ಲಿ ನಡೆದಿದ್ದ ಮರಳು ದಂಧೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಆಕ್ರಮವಾಗಿ ನಡೆದು ಹೋಗಿದ್ದ ಮರಳು ದಂಧೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತ ಮಜ್ಜಗಿಯವರು, ಯಾವ ಹಂತದಲ್ಲಿ, ಯಾವ ದರಕ್ಕೆ ಮಾರಾಟ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಮತ್ತು ಕಂದಾಯ ಹಾಗೂ ಪೊಲೀಸರನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಲೋಕಾಯುಕ್ತ ಎಸ್.ಬಿ. ಮಜ್ಜಗೆ, ತುಂಗಭದ್ರೆಯ ಈ ಭಾಗದ ನದಿ ತಟಗಳಲ್ಲಿ ಅಕ್ರಮವಾಗಿ ಮರಳು ದಂಧೆ ನಡೆದಿದ್ದ ಅನೇಕ ಕುರುಹುಗಳು ಕಂಡುಬರುತ್ತಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.