22ರಂದು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆ
ಹಾವೇರಿ: ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ನೂತನವಾಗಿ ನಿರ್ಮಿಸಲಾದ ಪರ್ಯಾಯ ವ್ಯಾಜ್ಯಗಳ ಪರಿಹಾರ ಕೇಂದ್ರ ಉದ್ಘಾಟನೆ ಫೆ. 22ರಂದು ಬೆಳಗ್ಗೆ 10. 35ಕ್ಕೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜರುಗಲಿದೆ.
ಹೈಕೋರ್ಟ್ ನ್ಯಾಯಾಧೀಶರು ಹಾಗೂ ಮಧ್ಯಸ್ಥಿಕೆ ಕೇಂದ್ರ ಅಧ್ಯಕ್ಷರಾದ ಕೆ.ಎಲ್. ಮಂಜುನಾಥ ಅವರು ಉದ್ಘಾಟನೆ ನೆರವೇರಿಸಲಿದ್ದು, ಹೈಕೋರ್ಟ್ ನ್ಯಾ. ಎನ್.ಕೆ. ಪಾಟೀಲ ಹೈಕೋರ್ಟ್ ನ್ಯಾಯಾಧೀಶರು ಹಾಗೂ ನ್ಯಾ. ಆನಂದ ಬೈರಾರೆಡ್ಡಿ, ನ್ಯಾ. ಜಾಧವ್ ರಹಿಮ್, ಅರವಿಂದಕುಮಾರ ಭಾಗವಹಿಸುವರು. ಸಂಸದ ಶಿವಕುಮಾರ ಉದಾಸಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರು ವಿಶೇಷ ಆಹ್ವಾನಿತರಾಗಿ ಹಾಗೂ ಅತಿಥಿಗಳಾಗಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಆಯುಕ್ತರಾದ ವಿಶ್ವನಾಥ ಅಂಗಡಿ, ಕಾರ್ಯದರ್ಶಿಳಾದ ಅಶೋಕ ನಿಜಗಣ್ಣನವ ಭಾಗವಹಿಸುವರೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ಸಾವಿತ್ರಿ ವಿನಾಯಕ ಅವರು ತಿಳಿಸಿದ್ದಾರೆ.
ರೋಗಗಳ ಉಚಿತ ತಪಾಸಣಾ ಶಿಬಿರ
ಹಾನಗಲ್ಲ: ಇಂದಿನ ವೈದ್ಯಕೀಯ ತಂತ್ರಜ್ಞಾನ ಬೆಳವಣಿಗೆಯಲ್ಲಿ ಚರ್ಮರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು, ಭಯಪಡುವ ಅಗತ್ಯವಿಲ್ಲ, ಚರ್ಮರೋಗಗಳಿಗೆ ಅತ್ಯುನ್ನತ ಚಿಕಿತ್ಸೆಯನ್ನು ಹಲವು ವರ್ಷಗಳಿಂದ ತಮ್ಮ ಆಸ್ಪತ್ರೆಯಲ್ಲಿ ನೀಡುತ್ತಿದ್ದು ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಾ. ಸಂಜಯ ಡಾಂಗೆ ತಿಳಿಸಿದರು. ತಾಲೂಕಿನ ತಿಳವಳ್ಳಿಯಲ್ಲಿ ರಾಜಲಕ್ಷ್ಮಿ ಟ್ರೇಡರ್ಸ್ನ ಉಮೇಶ ತಳವಾರ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಉಚಿತ ಚರ್ಮ ಮತ್ತು ಲೈಂಗಿಕ ರೋಗಗಳ ಆರೋಗ್ಯ ತಪಾಸಣಾ ಶಿಬಿರವನ್ನುದ್ದೇಶಿಸಿ ಮಾತನಾಡಿದ ಚರ್ಮ ಮತ್ತು ಲೈಂಗಿಕ ರೋಗಗಳ ತಜ್ಞ ಡಾ. ಸಂಜಯ ಡಾಂಗೆ, ಯಾವುದೇ ರೋಗಗಳನ್ನು ಮುಚ್ಚಿಡಬಾರದು, ವೈದ್ಯರಲ್ಲಿ ಮುಕ್ತವಾಗಿ ಹಂಚಿಕೊಳ್ಳಬೇಕು ಆಗ ಮಾತ್ರ ಪರಿಹಾರ ದೊರಕುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಾಯೋಜಕ ಉಮೇಶ ತಳವಾರ, ಗ್ರಾಮೀಣ ಬಡ ರೋಗಿಗಳಿಗೆ ಅನಕೂಲವಾಗುವ ಉದ್ದೇಶದಿಂದ ಉಚಿತ ಚಿಕಿತ್ಸಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ತಿಳವಳ್ಳಿ ಕಲ್ಮಠದ ಶ್ರೀ ಬಸವನಿರಂಜನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಸಾಧಿಕ ಅಹ್ಮದ ಸವಣೂರ ಉದ್ಘಾಟನೆ ನೆರವೇರಿಸಿದರು. ಜಿ.ಪಂ. ಸದಸ್ಯ ಬಸವರಾಜ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ಕೌಶಲ್ಯ ಬಡಿಗೇರ ಈ ಸಂದರ್ಭದಲ್ಲಿದ್ದರು. ಚಂದ್ರು ಈಳಿಗೇರ ಕಾರ್ಯಕ್ರಮ ನಿರ್ವಹಿಸಿದರು.
ಲೋಕ ಅದಾಲತ್ನ ಸದುಪಯೋಗಕ್ಕೆ ಕರೆ
ಶಿಗ್ಗಾಂವಿ: ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಾಲೂಕಿನ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇತ್ಯರ್ಥವಾಗುವಂತಹ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮುಖಾಂತರ ಇತ್ಯರ್ಥಗೊಳಿಸಲು ಉದ್ದೇಶಿಸಿದ್ದು ಜ. 6ರಿಂದ ಆರಂಭವಾಗಿದ್ದು ಏ. 12ರವರೆಗೆ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ (ಮೇಗಾ ಲೋಕ ಅದಾಲತ್) ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾ. ಮಮತಾ ಡಿ. ದಿವಾಣಿ ಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಸಮಿತಿ ಶಿಗ್ಗಾಂವಿ ಜನರಲ್ಲಿ ಕೋರಿದ್ದಾರೆ. ನಿಮ್ಮ ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು. ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು. ಶೀಘ್ರ ವಿಲೇವಾರಿಗಾಗಿ ಇದೊಂದು ವಿಶೇಷ ಅವಕಾಶ ಎಂದು ತಿಳಿಸಿದ್ದಾರೆ.
ಕಿತ್ತೂರು ಚನ್ನಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ಆಯ್ಕೆ
ರಾಣಿಬೆನ್ನೂರು: ನಗರದ ಎಂಜಿ ರಸ್ತೆಯಲ್ಲಿರುವ ಕಿತ್ತೂರು ಚನ್ನಮ್ಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಸವರಾಜ ಮಳವಳ್ಳಿ, ಉಪಾಧ್ಯಕ್ಷರಾಗಿ ಮಲ್ಲಣ್ಣ ಅಂಗಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಜಿಲ್ಲಾ ಸಹಕಾರಿ ಸಂಘದ ಬಿ.ಎಸ್. ಪಾಟೀಲ ತಿಳಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಸವರಾಜ ಮಳವಳ್ಳಿ ಮಾತನಾಡಿ, ಬಡವರಿಗೆ, ಸಣ್ಣ ಉದ್ಯಮಿಗಳಿಗೆ, ತರಕಾರಿ ಹಣ್ಣು ಹಂಪಲ ವ್ಯಾಪಾರಸ್ಥರ ಆರ್ಥಿಕಾಭಿವೃದ್ಧಿಗೆ ತುಂಬಾ ಸಹಕಾರಿಯಾಗಿರುವ ಸಹಕಾರಿ ಸಂಘದ (ಬ್ಯಾಂಕಿನ) ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆಂದು ಹೇಳಿದರು. ನಿಕಟಪೂರ್ವ ಅಧ್ಯಕ್ಷರು ನಗರಸಭೆಯ ಮಾಜಿ ಸದಸ್ಯರಾದ ಶಂಬಣ್ಣ ಎಂ. ಸವಣೂರ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷರಾದ ಮಲ್ಲಣ್ಣ ಅಂಗಡಿ, ನಿರ್ದೇಶಕರಾದ ವೀರಣ್ಣ ಪಟ್ಟಣಶೆಟ್ಟಿ, ವೀರಣ್ಣ ಕುಶಲದ, ಬಸವರಾಜ ಹುಲ್ಲತ್ತಿ, ಮಾಲತೇಶ ಚಳಗೇರಿ, ರಾಜಣ್ಣ ಹುಲ್ಲತ್ತಿ, ಕುಮಾರ ಮುಂಡಾಸದ, ಶಿವಾನಂದ ಬೆನ್ನೂರು, ಪೂರ್ಣಿಮಾ ಮರಬಸಣ್ಣನವರ, ಸುಮನ್ ಪಾಟೀಲ, ವ್ಯವಸ್ಥಾಪಕರಾದ ವಾಗೀಶ ಅಂಗಡಿ ಇದ್ದರು.
ಚನ್ನಳ್ಳಿಯಲ್ಲಿ ಸಾವಯವ ಕೃಷಿ ಕ್ಷೇತ್ರೋತ್ಸವ
ಹಾವೇರಿ: ಹಿರೇಕೆರೂರು ತಾಲೂಕಿನ ಚನ್ನಳ್ಳಿ ತಾಂಡಾದಲ್ಲಿ ನವಭಾರತ ಫರ್ಟಿಲೈಜರ್ಸ್ ಹಾಗೂ ಗ್ರಾಮಸ್ಥರ ಆಶ್ರಯದಲ್ಲಿ ಈಚೆಗೆ ಸೂಕ್ಷ್ಮ ಪೋಷಕಾಂಶಗಳ ಸಾವಯವ ಕೃಷಿ ಕ್ಷೇತ್ರೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಕಂಪನಿಯ ಸರ್ವೀಸ್ ಮ್ಯಾನೇಜರ್ ಸಂತೋಷಕುಮಾರ್ ಸಿ.ಎಂ ಮಾತನಾಡಿ, ಉತ್ತಮ ಇಳುವರಿ ಪಡೆಯಲು ರೈತರು ಹೊಸ ವಿಧಾನಗಳ ಬಳಕೆ ಮಾಡಿಕೊಳ್ಳಬೇಕು. ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳಲು ಅಗತ್ಯ ಪೋಷಕಾಂಶಗಳ ಬಳಕೆ ಅಗತ್ಯವಾಗಿದೆ. ಆದ್ದರಿಂದ ಸಸ್ಯಗಳಿಗೆ ಬೇಕಾಗುವ ಜೈವಿಕ ಗೊಬ್ಬರ ಹಾಗೂ ಸೂಕ್ಷ್ಮ ಪೋಷಕಾಂಶ, ಸಾವಯವ ಗೊಬ್ಬರಗಳನ್ನು ಬೆಳೆಗಳಿಗೆ ಹಂತಹಂತವಾಗಿ ಕೊಡುವುದರಿಂದ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಪ್ರಗತಿಪರ ರೈತ ದೇವೇಂದ್ರಪ್ಪ ಲಮಾಣಿ ಮಾತನಾಡಿ, ನವಭಾರತ ಕಂಪನಿಯ ವಿಜೇತಾ ಹಾಗೂ ಇನ್ನಿತರ ಗೊಬ್ಬರ ಬಳಕೆ ಮಾಡಿದ್ದರಿಂದ ತಾವು ಹಾಗಲಕಾಯಿ ಬೆಳೆ ಸಂಪೂರ್ಣ ರೋಗಮುಕ್ತವಾಗಿ ಬೆಳೆದಿದೆ. ಅಲ್ಲದೇ ಹೆಚ್ಚಿನ ಇಳುವರಿ ಕೂಡ ಬಂದಿದೆ. ಆದ್ದರಿಂದ ರೈತರು ಇವುಗಳನ್ನು ಬಳಕೆ ಮಾಡಿ ಆರ್ಥಿಕ ಲಾಭ ಪಡೆಯಬಹುದು ಎಂದು ಸಲಹೆ ನೀಡಿದರು.
ಕಂಪನಿಯ ಶಾಖಾಧಿಕಾರಿ ಗುರುಸಿದ್ದಯ್ಯ ರೈತರಿಗೆ ಮಾಹಿತಿ ನೀಡಿದರು. ಸೋಮಶೇಖರ, ಮಾಲತೇಶ, ಗಜಾನಂದ ಎಂ.ಎನ್ ಹಾಗೂ ಗ್ರಾಮಸ್ಥರು ಇದ್ದರು
ಎಸ್ಡಿಎಂಸಿ ಅಧ್ಯಕ್ಷರಾಗಿ ವೀರಯ್ಯ ಮಠಪತಿ
ಶಿಗ್ಗಾಂವಿ: ತಾಲೂಕಿನ ಕ್ಯಾಲಕೊಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ನೂತನ ಅಧ್ಯಕ್ಷರಾಗಿ ವೀರಯ್ಯ ಮಠಪತಿ, ಉಪಾಧ್ಯಕ್ಷೆಯಾಗಿ ರೇಣುಕಾ ಸಂಶಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸದಸ್ಯರಾಗಿ ಹನುಮಂತಪ್ಪ ಮಾದರ, ಈರಣ್ಣ ಬಾಳಿಕಾಯಿ, ಚನ್ನವೀರಸ್ವಾಮಿ ಹಿರೇಮಠ, ಭರಮಗೌಡ ರಾಯನಗೌಡ್ರ, ರಾಮನಗೌಡ ಪಾಟೀಲ, ರಮೀಜಾ ರುಪೋಜಿ, ಶೋಭಾ ಮೋಖಾಶಿ, ಕಲಾವತಿ ಪಾಟೀಲ, ಶಿವಗಂಗವ್ವ ಕಮ್ಮಾರ, ಗಾಯತ್ರಿ ಮೀಶಿ, ಗಂಗಮ್ಮ ಓಲೇಕಾರ ಹಾಗೂ ಪದ ನಿಮಿತ್ತ ಸದಸ್ಯರಾಗಿ ಎಲ್.ಬಿ. ತಳವಾರ, ಮುಖ್ಯೋಪಾಧ್ಯಾಯನಿ ಮಂಜುಳಾ ಕರಡಿ, ಆರೋಗ್ಯ ಕಾರ್ಯಕರ್ತೆ ಗೀತಾ ಆಯ್ಕೆಗೊಂಡಿದ್ದಾರೆ. ನಾಮನಿರ್ದೇಶಿತ ಸದಸ್ಯರಾಗಿ ಗ್ರಾಪಂ ಸದಸ್ಯ ವಿಶ್ವರಾಧ್ಯಸ್ವಾಮಿ ಹಿರೇಮಠ. ನಿವೃತ್ತ ಶಿಕ್ಷಕ ಎಂ.ಎಚ್. ಚೋಟೆಪ್ಪನವರ ನೇಮಕಗೊಂಡಿದ್ದಾರೆ. ಅಪೂರ್ವಾ ಮಡಿವಾಳರ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಎಸ್ಡಿಎಂಸಿಗೆ ನೇಮಕ
ಶಿಗ್ಗಾಂವಿ: ತಾಲೂಕಿನ ಕ್ಯಾಲಕೊಂಡ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷರಾಗಿ ಗರೀಬಸಾಬ್ ಕಡ್ಲಿ, ಉಪಾಧ್ಯಕ್ಷರಾಗಿ ಶಹನಾಜ ಸುಂಕದ ನೇಮಕವಾಗಿದ್ದಾರೆ. ಸದಸ್ಯರಾಗಿ ಅಲ್ಲಾಸಾಬ ಮೀರಾಸಾಬನವರ, ಮಹಬೂಬಸಾಬ ಒಂಟಿ, ಮೌಲಾಸಾಬ ಬಾಗವಾನ, ಹುಸೇನಸಾಬ ನವಲಗುಂದ ಸಿರಾಜಅಹ್ಮದ ಸುಂಕದ, ರಶೀದಾ ಕಡ್ಲಿ, ಗುಲಜಾರಬೀ ಬಾಗವಾನ, ಇಮಾಮಬೀ ನವಲಗುಂದ, ಖಾದರಬೀ ನದಾಫ, ಬಾನುಬೀ ಮೀರಾಸಾಬನವರ, ಚಾಂದಬೀ ಒಂಟೆ ಆಯ್ಕೆಗೊಂಡಿದ್ದಾರೆ.
ಪದನಿಮಿತ್ತ ಸದಸ್ಯರಾಗಿ ಎಂ.ಎನ್. ಪಟ್ನಿ, ಮುಖ್ಯೋಪಾಧ್ಯಾಯಿನಿ ಗೀತಾ ಹಾದಿಮನಿ, ಆರೋಗ್ಯ ಕಾರ್ಯಕರ್ತೆ ಗೀತಾ ಆಯ್ಕೆಗೊಂಡಿದ್ದಾರೆ. ನಾಮನಿರ್ದೇಶಿತ ಸದಸ್ಯರಾಗಿ ಗ್ರಾಪಂ ಸದಸ್ಯೆ ನೀಲವ್ವ ಚೋಟೆಪ್ಪನವರ, ನಿವೃತ್ತಿ ಎಂ.ಎಚ್. ಚೋಟೆಪ್ಪನವರ, ದಾವಲಸಾಬ ಒಂಟಿ ಆಯ್ಕೆಯಾದರು.